Ranji Trophy ಕೇರಳ ಸವಾಲಿಗೆ ಕರ್ನಾಟಕ ಕ್ರಿಕೆಟ್ ತಂಡ ರೆಡಿ

By Naveen KodaseFirst Published Jan 17, 2023, 8:00 AM IST
Highlights

ರಣಜಿ ಟ್ರೋಫಿ ಟೂರ್ನಿಯಲ್ಲಿಂದು ಕರ್ನಾಟಕಕ್ಕೆ ಕೇರಳ ಸವಾಲು
ಕೇರಳ ಎದುರು ಗೆದ್ದರೆ ಕರ್ನಾಟಕ ಕ್ವಾರ್ಟರ್‌ ಪ್ರವೇಶ ಖಚಿತ
ಈ ಆವೃತ್ತಿಯಲ್ಲಿ ರಾಜ್ಯ ತಂಡ ತವರಿನಾಚೆ ಆಡುತ್ತಿರುವ ಎರಡನೇ ಪಂದ್ಯವಿದು

ತಿರುವನಂತಪುರಂ(ಜ.17): 2022-23ರ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ 6ನೇ ಪಂದ್ಯದಲ್ಲಿ ಕರ್ನಾಟಕ ತಂಡ ಮಂಗಳವಾರದಿಂದ ಕೇರಳ ವಿರುದ್ಧ ಕಣಕ್ಕಿಳಿಯಲಿದೆ. ತಿರುವನಂತಪುರಂನ ಕೆಸಿಎ ಮೈದಾನ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು, ಗೆದ್ದರೆ ರಾಜ್ಯ ತಂಡ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಲಿದೆ. 

ಇದು ಈ ಋುತುವಿನಲ್ಲಿ ರಾಜ್ಯ ತಂಡ ತವರಿನಾಚೆ ಆಡುತ್ತಿರುವ 2ನೇ ಪಂದ್ಯ. ಕರ್ನಾಟಕ ಈ ಋುತುವಿನಲ್ಲಿ ಆಡಿದ 5 ಪಂದ್ಯಗಳಲ್ಲಿ 3 ಗೆಲುವಿನೊಂದಿಗೆ 26 ಅಂಕ ಕಲೆಹಾಕಿದ್ದು, ಎಲೈಟ್‌ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಈ ಪಂದ್ಯದಲ್ಲೂ ಗೆದ್ದರೆ ಅಗ್ರಸ್ಥಾನಿಯಾಗಿಯೇ ಅಂತಿಮ 8ರ ಘಟ್ಟಪ್ರವೇಶಿಸಲಿದೆ. 

ಮತ್ತೊಂದೆಡೆ ಕೇರಳ 5 ಪಂದ್ಯಗಳಲ್ಲಿ 3 ಗೆಲುವು, 2 ಸೋಲಿನೊಂದಿಗೆ 19 ಅಂಕ ಕಲೆ ಹಾಕಿ 2ನೇ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿರುವ ಜಾರ್ಖಂಡ್‌ 16 ಅಂಕ ಹೊಂದಿದ್ದು, ಹೀಗಾಗಿ ಕೇರಳಕ್ಕೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ

ಫಿಟ್ನೆಸ್‌ ಸಾಬೀತಿಗೆ ರಣಜಿ ಪಂದ್ಯ ಆಡಲಿರುವ ಜಡೇಜಾ

ನವದೆಹಲಿ: ಭಾರತದ ತಾರಾ ಆಲ್ರೌಂಡರ್‌ ರವೀಂದ್ರ ಜಡೇಜಾ ಆಸ್ಪ್ರೇಲಿಯಾ ವಿರುದ್ಧದ ಮಹತ್ವದ ಟೆಸ್ಟ್‌ ಸರಣಿಗೂ ಮುನ್ನ ಫಿಟ್ನೆಸ್‌ ಸಾಬೀತು ಪಡಿಸಲು ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲಿದ್ದಾರೆ. ಜನವರಿ 24ರಿಂದ ಚೆನ್ನೈನಲ್ಲಿ ತಮಿಳುನಾಡು ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜಡೇಜಾ ಸೌರಾಷ್ಟ್ರ ಪರ ಕಣಕ್ಕಿಳಿಯಲಿದ್ದಾರೆ. 

ಕಿವೀಸ್ ಎದುರಿನ ಟಿ20 ಸರಣಿಗೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗಿಲ್ಲ ಸ್ಥಾನ..!

ಆಸೀಸ್‌ ವಿರುದ್ಧ ಮೊದಲೆರಡು ಟೆಸ್ಟ್‌ಗೆ ರವೀಂದ್ರ ಜಡೇಜಾ ಆಯ್ಕೆಯಾಗಿದ್ದಾರಾದರೂ ಫಿಟ್ನೆಸ್‌ ಸಾಬೀತು ಪಡಿಸಬೇಕು ಎಂದು ಬಿಸಿಸಿಐ ಷರತ್ತು ವಿಧಿಸಿದೆ. ಕಳೆದ ವರ್ಷ ಆ.31ರಂದು ಹಾಂಕಾಂಗ್‌ ವಿರುದ್ಧದ ಏಷ್ಯಾಕಪ್‌ ಪಂದ್ಯದ ಬಳಿಕ ಜಡೇಜಾ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಅವರು ಬಲಮಂಡಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಫಿಟ್ನೆಸ್‌ ಸಾಬೀತಿಗೆ ಬುಮ್ರಾ ರಣಜಿಯಲ್ಲಿ ಕಣಕ್ಕೆ?

ನವದೆಹಲಿ: ಭಾರತದ ತಾರಾ ವೇಗಿ ಜಸ್‌ಪ್ರೀತ್‌ ಬುಮ್ರಾ ಕೂಡಾ ಆಸ್ಪ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ತಮ್ಮ ಫಿಟ್ನೆಸ್‌ ಸಾಬೀತು ಪಡಿಸಲು ರಣಜಿ ಆಡಲಿದ್ದಾರೆ ಎಂದು ವರದಿಯಾಗಿದೆ. ದೀರ್ಘ ಸಮಯದಿಂದ ಬೆನ್ನು ನೋವಿನಿಂದ ಬಳಲುತ್ತಿರುವ ಬುಮ್ರಾ ಶ್ರೀಲಂಕಾ ಏಕದಿನ ಸರಣಿಗೆ ಕೊನೆ ಕ್ಷಣದಲ್ಲಿ ಆಯ್ಕೆಯಾಗಿದ್ದರೂ ಗಾಯದಿಂದ ಸಂಪೂರ್ಣ ಚೇತರಿಸದ ಕಾರಣ ಸರಣಿಯಿಂದ ಹಿಂದೆ ಸರಿದಿದ್ದರು. 

ಸದ್ಯ ಪುನಶ್ಚೇತನ ಶಿಬಿರದಲ್ಲಿರುವ ಅವರು ಇನ್ನೂ 2 ವಾರ ಅಲ್ಲೇ ಇರಲಿದ್ದು, ಬಳಿಕ ಬಿಸಿಸಿಐ ಆಡಲು ಫಿಟ್‌ ಎಂದು ಅನುಮತಿ ನೀಡಿದರೆ ರಣಜಿ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆಸೀಸ್‌ ಸರಣಿಯ ಮೊದಲೆರಡು ಪಂದ್ಯಗಳಿಗೆ ಬುಮ್ರಾ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಆಸೀಸ್‌ ಎದುರಿನ ಟೆಸ್ಟ್‌ ಸರಣಿಗೆ ಮೊದಲೆರಡು ಪಂದ್ಯಗಳಿಗೆ ಭಾರತ ತಂಡ ಹೀಗಿದೆ: 

ರೋಹಿತ್‌ ಶರ್ಮಾ, ಕೆ ಎಲ್ ರಾಹುಲ್‌, ಶುಭ್‌ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್‌, ಇಶಾನ್ ಕಿಶನ್‌, ರವಿಚಂದ್ರನ್‌ ಅಶ್ವಿನ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌, ಉಮೇಶ್‌ ಯಾದವ್, ಜಯದೇವ್ ಉನಾದ್ಕತ್‌.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ: 

ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್‌ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್‌ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್

click me!