
ಅಹಮದಾಬಾದ್: 19ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್, ತಾವು ಗೆದ್ದ ಟ್ರೋಫಿಯನ್ನು ಕಾಲ್ತುಳಿತದಲ್ಲಿ ಮಡಿದ 11 ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. ಕಳೆದ ವರ್ಷ ಚೊಚ್ಚಲ ಬಾರಿ ಟ್ರೋಫಿ ಗೆದ್ದಿದ್ದ ಆರ್‌ಸಿಬಿ, ಮರುದಿನ ಅಂದರೆ ಜೂನ್ 4ರಂದು ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಹಮ್ಮಿಕೊಂಡಿತ್ತು. ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲುತ್ತಿದ್ದಂತೆಯೇ ರಜತ್ ಪಾಟೀದಾರ್, ಕಳೆದ ಬಾರಿ ಅನುಭವಿಸಿದ ನೋವನ್ನು ಬಿಚ್ಚಿಟ್ಟಿದ್ದಾರೆ.
ಭಾನುವಾರ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಜತ್, ‘ಕಪ್ ಗೆದ್ದ ಸಂಭ್ರಮದ ನಡುವೆ ಅಭಿಮಾನಿಗಳ ಸಾವು ನಿಜಕ್ಕೂ ಕೆಟ್ಟ ಘಟನೆ. ಅವರು ಕೇವಲ ಅಭಿಮಾನಿಗಳಲ್ಲ, ಅವರು ನಮ್ಮ ಕುಟುಂಬ. ಈ ಟ್ರೋಫಿಯನ್ನು ಯಾವಾಗಲೂ ನಾನು ಅವರಿಗೆ ಸಮರ್ಪಿಸುತ್ತೇನೆ. ಆ ಘಟನೆಯ ನೋವನ್ನು ವ್ಯಕ್ತಪಡಿಸಲು ನನ್ನಲ್ಲಿ ಪದಗಳಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೃತ ಅಭಿಮಾನಿಗಳ ಸ್ಮರಣಾರ್ಥ ಈ ಐಪಿಎಲ್ ಆರಂಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಆಸನಗಳನ್ನು ಖಾಲಿ ಬಿಡಲಾಗಿತ್ತು ಮತ್ತು ಆರ್‌ಸಿಬಿ ಆಟಗಾರರ 11 ನಂಬರ್‌ನ ಜೆರ್ಸಿ ಧರಿಸಿ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಈ ವರ್ಷ ನಾವು ಕೇವಲ ಆಡಿಲ್ಲ, ಅಧಿಪತ್ಯ ಸಾಧಿಸಿದ್ದೇವೆ ಎಂದು ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಹೇಳಿದರು. ಕಪ್ ಗೆಲುವಿನ ಸಂಭ್ರಮದ ನಡುವೆ ಸೋಮವಾರ ಮಾಧ್ಯಮಗಳ ಜೊತೆ ವರ್ಚುವಲ್ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನಾವು ಉತ್ತಮವಾಗಿ ಆಡಿದರೆ 2ನೇ ಬಾರಿ ಕಪ್ ಗೆಲ್ಲುವುದು ಸಾಧ್ಯವಿದೆ ಎಂದು ಮೊದಲೇ ಗೊತ್ತಿತ್ತು. ಸಂಘಟಿತ ಹೋರಾಟದಿಂದಾಗಿ ಈಗ ಅದು ಸಾಧ್ಯವಾಗಿದೆ. ನಾವು ಈ ಬಾರಿ ಕೇವಲ ಆಡಿಲ್ಲ, ಅಧಿಪತ್ಯ ಸಾಧಿಸಿದ್ದೇವೆ’ ಎಂದರು.
ಅಲ್ಲದೆ, ಕಪ್ ಗೆಲುವಿನ ಹಿಂದೆ ಎಲ್ಲಾ ಆಟಗಾರರ ಕೊಡುಗೆ, ತಮ್ಮ ನಾಯಕತ್ವಕ್ಕೆ ವಿರಾಟ್ ಕೊಹ್ಲಿಯ ಸಹಕಾರ, ವೈಭವ್ ಸೂರ್ಯವಂಶಿ ಆಟದ ಬಗ್ಗೆಯೂ ರಜತ್ ಮನಬಿಚ್ಚಿ ಮಾತನಾಡಿದರು. ಸಂವಾದದಲ್ಲಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್, ತಂಡದ ಡೈರೆಕ್ಟರ್ ಮೊ ಬೊಬಟ್ ಕೂಡಾ ಪಾಲ್ಗೊಂಡರು.
ಅಹಮದಾಬಾದ್: ಕಳೆದ ವರ್ಷ ಸಂಭ್ರಮಾಚರಣೆ ವೇಳೆ ನಡೆದಿದ್ದ ಕಾಲ್ತುಳಿತಕ್ಕೆ 11 ಮಂದಿ ಬಲಿಯಾದ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರಿನಲ್ಲಿ ವಿಕ್ಟರಿ ಪರೇಡ್ ನಡೆಸದಿರಲು ಫ್ರಾಂಚೈಸಿ ನಿರ್ಧರಿಸಿದೆ.
ಕಳೆದ ವರ್ಷ ವಿಧಾನಸೌಧದ ಮೆಟ್ಟಿಲುಗಳು ಹಾಗೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತರಾತುರಿಯಲ್ಲಿ ಆಯೋಜಿಸಿದ್ದ ವಿಜಯೋತ್ಸವದಿಂದಾಗಿ ಕಾಲ್ತುಳಿತ ಸಂಭವಿಸಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿ ಫ್ರಾಂಚೈಸಿ ಕಾನೂನಿನ ಬಿಸಿ ಎದುರಿಸಬೇಕಾಯಿತು. ಹೀಗಾಗಿ ತಪ್ಪು ಪುನರಾವರ್ತನೆ ಆಗಬಾರದೆಂದು ಆರ್‌ಸಿಬಿ ಈ ನಡೆ ಅನಸರಿಸಿದೆ. ‘ಬೆಂಗಳೂರಿನಲ್ಲಿ ಸಂಭ್ರಮಾಚರಣೆ ನಡೆಯುವ ಸಾಧ್ಯತೆ ಕಡಿಮೆ. ಕೆಲವು ಮಾರ್ಗಸೂಚಿಗಳು ಜಾರಿಯಲ್ಲಿವೆ. ನಾವು ಅವುಗಳಿಗೆ ಬದ್ಧವಾಗಿರಬೇಕು’ ಎಂದು ಆರ್‌ಸಿಬಿ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಬುಧವಾರ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮ ನಡೆಯಲಿರುವ ಲೋಕಭವನವು ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪದಲ್ಲೇ ಇದೆ. ಈ ಸಂದರ್ಭದಲ್ಲಿ ಆರ್‌ಸಿಬಿ ವಿಕ್ಟರಿ ಪರೇಡ್ ನಡೆಸಿದರೆ ಸಂಚಾರ ದಟ್ಟಣೆ, ಜನರನ್ನು ನಿಭಾಯಿಸುವುದು ಪೊಲೀಸರಿಗೆ ಸವಾಲಾಗಲಿದೆ. ಎರಡೆರಡು ಕಾರ್ಯಕ್ರಮ ನಡೆಸುವುದು ಕಷ್ಟ ಎನ್ನುವ ಕಾರಣಕ್ಕೂ ಆರ್‌ಸಿಬಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.