* ಟೀಂ ಇಂಡಿಯಾ ಕೋಚ್ ಆಗಿ ಅಧಿಕಾರ ಸ್ವೀಕರಿಸಿರುವ ದ್ರಾವಿಡ್ ಬಗ್ಗೆ ದಾದಾ ಮೆಚ್ಚುಗೆ
* ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಉನ್ನತಿ ಸಾಧಿಸಲಿದೆ ಎಂದ ಬಿಸಿಸಿಐ ಅಧ್ಯಕ್ಷ
* ದ್ರಾವಿಡ್ ಅವರಲ್ಲಿ ಕ್ರಿಕೆಟ್ ಕುರಿತಾಗಿ ಇರುವ ಬದ್ದತೆ, ವೃತ್ತಿಪರತೆ ಬಗ್ಗೆ ಸೌರವ್ ಮೆಚ್ಚುಗೆ
ಮುಂಬೈ(ಏ.03): ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್, ಬಲಿಷ್ಠ ಭಾರತ ಕ್ರಿಕೆಟ್ ತಂಡವನ್ನು ಕಟ್ಟುವತ್ತ ದಿಟ್ಟ ಹೆಜ್ಜೆಯನ್ನಿಡುತ್ತಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಹುಲ್ ದ್ರಾವಿಡ್ ಅವರಲ್ಲಿ ತಂಡ ಕಟ್ಟುವ ವಿಚಾರದಲ್ಲಿ ಸಾಕಷ್ಟು ಬದ್ದತೆ, ನಿಖರತೆ ಹಾಗೂ ವೃತ್ತಿಪರ ವಿಚಾರದಲ್ಲಿ ಸಾಕಷ್ಟು ಸ್ಪಷ್ಟತೆಯನ್ನು ಹೊಂದಿದ್ದಾರೆ ಎಂದು ದಾದಾ ಸಹಾ ಆಟಗಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಹುಲ್ ದ್ರಾವಿಡ್ ಅವರು ತಾವು ಕ್ರಿಕೆಟ್ ಆಡುವ ವೇಳೆಯಲ್ಲಿ ಸಾಕಷ್ಟು ಬದ್ದತೆ, ನಿಖರತೆ ಹಾಗೂ ವೃತ್ತಿಪರ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಅವರು ಕ್ರಿಕೆಟ್ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಆದರೆ ಈಗ ಬದಲಾಗಿದ್ದೇನು ಎಂದರೆ, ಅವರು ಭಾರತ ಪರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿಯುತ್ತಿಲ್ಲ. ಅವರು ಕ್ರಿಕೆಟ್ ಆಡುವ ಸಂದರ್ಭದಲ್ಲಿ ಸಾಕಷ್ಟು ಕಠಿಣ ಎದುರಾಳಿ ಬೌಲರ್‌ಗಳನ್ನು ಎದುರಿಸಿದ್ದಾರೆ ಹಾಗೂ ದೀರ್ಘಕಾಲ ಭಾರತ ಪರ ಸ್ಥಿರ ಪ್ರದರ್ಶನ ತೋರಿದ್ದಾರೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ರಾಹುಲ್ ದ್ರಾವಿಡ್ ಕೋಚ್ ಆಗಿ ಕೂಡಾ ಭಾರತ ತಂಡಕ್ಕೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅವರು ತಂಡ ಕಟ್ಟುವ ವಿಚಾರದಲ್ಲಿ ಸಾಕಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಹಾಗೂ ಅವರಲ್ಲಿ ಪ್ರತಿಭೆಯಿದೆ ಎಂದು ಸೌರವ್ ಗಂಗೂಲಿ 'ದ ವಾಲ್' ಖ್ಯಾತಿಯ ದ್ರಾವಿಡ್ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡದ ಕೋಚ್ ಆಗುವಲ್ಲಿ ಸೌರವ್ ಗಂಗೂಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯವಾಗುತ್ತಿದ್ದಂತೆ ಹೆಡ್ ಕೋಚ್ ಆಗಿದ್ದ ರವಿಶಾಸ್ತ್ರಿ ಒಪ್ಪಂದಾವಧಿ ಕೂಡಾ ಅಂತ್ಯವಾಗಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ರಾಹುಲ್ ದ್ರಾವಿಡ್ ಅವರನ್ನು ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ನೇಮಕ ಮಾಡಿಕೊಂಡಿತ್ತು.
Aus vs Pak: 20 ವರ್ಷಗಳ ಬಳಿಕ ಆಸ್ಟ್ರೇಲಿಯಾ ಎದುರು ಮೊದಲ ಸರಣಿ ಗೆದ್ದ ಪಾಕಿಸ್ತಾನ..!
ಎಲ್ಲರೂ ಸಹಜವಾಗಿ ಮಾಡುವಂತೆ ರಾಹುಲ್ ದ್ರಾವಿಡ್ ಕೂಡಾ ತಪ್ಪುಗಳನ್ನು ಮಾಡುತ್ತಾರೆ. ಆದರೆ ಹಲವು ಪ್ರಯೋಗಗಳ ಬಳಿಕ ದ್ರಾವಿಡ್ ಉಳಿದವರಿಗಿಂತ ಹೆಚ್ಚು ಯಶಸ್ಸು ಗಳಿಸುತ್ತಾರೆ ಎಂದು ಹೇಳಿದ್ದಾರೆ. ಇದೇ ವೇಳೆ ರಾಹುಲ್ ದ್ರಾವಿಡ್ ಹಾಗೂ ರವಿಶಾಸ್ತ್ರಿ ನಡುವಿನ ಕೋಚ್ ಹೋಲಿಕೆ ಕುರಿತಂತೆ ಪ್ರತಿಕ್ರಿಯಿಸಲು ದಾದಾ ನಿರಾಕರಿಸಿದ್ದಾರೆ.
ಇಬ್ಬರು ಬೇರೆ ಬೇರೆ ವ್ಯಕ್ತಿತ್ವ ಹೊಂದಿರುವ ಬೇರೆ ಬೇರೆ ವ್ಯಕ್ತಿಗಳಾಗಿದ್ದಾರೆ. ಒಬ್ಬರು ಒಂದು ರೀತಿಯ ಶಕ್ತಿ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇನ್ನೊಬ್ಬರು ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರಾಗಿದ್ದರೂ ಸಹ ತಮ್ಮ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಾರೆ ಎಂದು ಹೇಳಿ ಸೌರವ್ ಮಾತು ಮುಗಿಸಿದ್ದಾರೆ
ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ನೇಮಕವಾದ ಬಳಿಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರುತ್ತಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಕೊಂಚ ಹಿನ್ನೆಡೆ ಅನುಭವಿಸಿದ್ದನ್ನು ಬಿಟ್ಟರೆ, ಉಳಿದಂತೆ ಟೀಂ ಇಂಡಿಯಾ ಅಜೇಯ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದೆ.