ಹೋಟೆಲ್‌ನಲ್ಲಿ ಬಿರಿಯಾನಿ ತಿನ್ನಲು ಬಿಡಲಿಲ್ಲವೆಂದು ಇಡೀ CSK ತಂಡವನ್ನೇ ಬೇರೆಡೆಗೆ ಸ್ಥಳಾಂತರಿಸಿದ್ದ ಧೋನಿ!

Published : Nov 18, 2026, 10:46 AM IST
MS Dhoni

ಸಾರಾಂಶ

2014ರಲ್ಲಿ ಹೈದರಾಬಾದ್‌ನಲ್ಲಿ ನಡೆದಿದ್ದ ಒಂದು ಕುತೂಹಲಕಾರಿ ಘಟನೆ ಇದು. ಅಂಬಟಿ ರಾಯುಡು ಕಳುಹಿಸಿದ್ದ ಹೋಮ್‌ಮೇಡ್‌ ಬಿರಿಯಾನಿ ತಿನ್ನಲು ಹೋಟೆಲ್‌ ಆಡಳಿತ ಅವಕಾಶ ನೀಡದ ಕಾರಣ, ಧೋನಿ ಇಡೀ CSK ತಂಡವನ್ನೇ ಬೇರೆ ಹೋಟೆಲ್‌ಗೆ ಸ್ಥಳಾಂತರಿಸಿದ್ದರು.

ಬೆಂಗಳೂರು(ನ.18): ಮಹೇಂದ್ರ ಸಿಂಗ್‌ ಧೋನಿ ಎಂದರೆ ತಕ್ಷಣ ನೆನಪಾಗುವುದು ಅವರ ತಾಳ್ಮೆ, ಶಾಂತ ಸ್ವಭಾವ ಮತ್ತು ಒತ್ತಡದ ಸಂದರ್ಭದಲ್ಲೂ ತಣ್ಣನೆಯ ನಿರ್ಧಾರ ತೆಗೆದುಕೊಳ್ಳುವ ಗುಣ. ಇದೇ ಕಾರಣಕ್ಕೆ ಅವರಿಗೆ ‘ಕ್ಯಾಪ್ಟನ್‌ ಕೂಲ್‌’ ಎಂಬ ಹೆಸರು ಬಂದಿದೆ. ಆದರೆ ಧೋನಿ ಸಿಟ್ಟಾದರೆ ಅದರ ಪರಿಣಾಮವೂ ದೊಡ್ಡದಾಗಿರುತ್ತದೆ ಎಂಬುದಕ್ಕೆ 2014ರಲ್ಲಿ ನಡೆದಿದ್ದ ಒಂದು ಘಟನೆ ಸಾಕ್ಷಿಯಾಗಿದೆ. ಹೈದರಾಬಾದ್‌ನಲ್ಲಿ ಹೋಮ್‌ಮೇಡ್‌ ಬಿರಿಯಾನಿ ತಿನ್ನಲು ಹೋಟೆಲ್‌ ಆಡಳಿತ ಅವಕಾಶ ನೀಡದ ಕಾರಣ, ಧೋನಿ ಇಡೀ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡವನ್ನೇ ಒಂದೇ ರಾತ್ರಿಯಲ್ಲಿ ಬೇರೆ ಹೋಟೆಲ್‌ಗೆ ಸ್ಥಳಾಂತರಿಸಿದ್ದರು ಎಂಬ ವರದಿಯೊಂದು ಆಗ ಸುದ್ದಿಯಾಗಿತ್ತು.

ಈ ಘಟನೆ ನಡೆದಿದ್ದು 2014ರ ಚಾಂಪಿಯನ್ಸ್‌ ಲೀಗ್‌ ಟಿ20 ಟೂರ್ನಿಯ ಸಂದರ್ಭದಲ್ಲಿ. ಹೈದರಾಬಾದ್‌ನಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ (KKR) ವಿರುದ್ಧದ ಪಂದ್ಯವನ್ನಾಡಲು ಚೆನ್ನೈ ತಂಡ ಆಗಮಿಸಿತ್ತು. ತಂಡದ ಆಟಗಾರರು ನಗರದ ಗ್ರ್ಯಾಂಡ್‌ ಕಾಕತೀಯಾ ಪಂಚತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು.

ಬಿರಿಯಾನಿ ವಿಚಾರಕ್ಕೆ ಹೋಟೆಲ್‌ ಜೊತೆ ವಿವಾದ!

ಒಂದು ದಿನ ಸಂಜೆ ಟೀಂ ಇಂಡಿಯಾದ ಧೋನಿ ಸಹ ಆಟಗಾರ ಅಂಬಟಿ ರಾಯುಡು ಅವರು ಹೈದರಾಬಾದಿ ಶೈಲಿಯ ಮನೆಯಲ್ಲಿ ತಯಾರಿಸಿದ ಬಿರಿಯಾನಿಯನ್ನು ಧೋನಿಗೆ ಕಳುಹಿಸಿದ್ದರು. ಈ ಬಿರಿಯಾನಿಯನ್ನು ಧೋನಿ ಸೇರಿದಂತೆ ಚೆನ್ನೈ ತಂಡದ ಆಟಗಾರರು ಸವಿಯಲು ಬಯಸಿದ್ದರು. ಆದರೆ, ಹೋಟೆಲ್‌ನಲ್ಲಿ ಹೊರಗಿನಿಂದ ಆಹಾರ ತರುವುದಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮವಿತ್ತು.

ಕೆಲವು ವರದಿಗಳ ಪ್ರಕಾರ, ಆಟಗಾರರು ಹೊರಗಿನಿಂದ ತಂದ ಬಿರಿಯಾನಿಯನ್ನು ತಮ್ಮ ಕೊಠಡಿಗಳಿಗೆ ಕೊಂಡೊಯ್ಯುವುದಕ್ಕೂ ಹೋಟೆಲ್‌ ಆರಂಭದಲ್ಲಿ ನಿರ್ಬಂಧ ವಿಧಿಸಿತ್ತು. ಇನ್ನು ಕೆಲವು ವರದಿಗಳ ಪ್ರಕಾರ, ಕೊಠಡಿಗಳಿಗೆ ಆಹಾರ ಕೊಂಡೊಯ್ಯಲು ಅವಕಾಶವಿದ್ದರೂ, ಸಾಮಾನ್ಯ ಬಳಕೆಯ ಪ್ರದೇಶಗಳಲ್ಲಿ ಅದನ್ನು ಸೇವಿಸದಂತೆ ಸೂಚಿಸಲಾಗಿತ್ತು.

ಈ ನಿಯಮದಿಂದ ಧೋನಿ ಅಸಮಾಧಾನಗೊಂಡರು ಎನ್ನಲಾಗಿದೆ. ಇದರ ಬೆನ್ನಲ್ಲೇ ತಂಡದ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಗ್ರ್ಯಾಂಡ್‌ ಕಾಕತೀಯಾ ಹೋಟೆಲ್‌ನಲ್ಲಿದ್ದ ಬುಕಿಂಗ್‌ ರದ್ದುಗೊಳಿಸಿ, ಇಡೀ ತಂಡವನ್ನು ಮತ್ತೊಂದು ಪಂಚತಾರಾ ಹೋಟೆಲ್‌ ತಾಜ್‌ ಕೃಷ್ಣಾಗೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿದ್ದರು ಎಂದು ‘ಮುಂಬೈ ಮಿರರ್‌’ ವರದಿ ಮಾಡಿತ್ತು.

ಧೋನಿ ನಿರ್ಧಾರಕ್ಕೆ ಬಿಸಿಸಿಐ ಅಧಿಕಾರಿಗಳೂ ಸಾಥ್‌!

ಈ ಘಟನೆಯ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಚೆನ್ನೈ ತಂಡದ ಜೊತೆಗೆ ಬಿಸಿಸಿಐ ಅಧಿಕಾರಿಗಳೂ ತಮ್ಮ ವಾಸ್ತವ್ಯವನ್ನು ಬದಲಾಯಿಸಿಕೊಂಡಿದ್ದರು ಎನ್ನಲಾಗಿದೆ. ಆಗಿನ ಬಿಸಿಸಿಐ ಮುಖ್ಯಸ್ಥ ಎನ್‌. ಶ್ರೀನಿವಾಸನ್‌ ಸೇರಿದಂತೆ ಮಂಡಳಿಯ ಅಧಿಕಾರಿಗಳೂ ಧೋನಿ ಅವರ ನಿರ್ಧಾರವನ್ನು ಅನುಸರಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಗ್ರ್ಯಾಂಡ್‌ ಕಾಕತೀಯಾ ಹೋಟೆಲ್‌ನಲ್ಲಿ ತಂಡಗಳು, ಸಹಾಯಕ ಸಿಬ್ಬಂದಿ ಮತ್ತು ಮಂಡಳಿ ಅಧಿಕಾರಿಗಳಿಗಾಗಿ ಸುಮಾರು 180 ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ಈ ಬೆಳವಣಿಗೆ ಕುರಿತು ಗ್ರ್ಯಾಂಡ್‌ ಕಾಕತೀಯಾ ಹೋಟೆಲ್‌ನ ಜನರಲ್‌ ಮ್ಯಾನೇಜರ್‌ ಜಾರ್ಜ್‌ ವರ್ಗೀಸ್‌ ಪ್ರತಿಕ್ರಿಯಿಸಿದ್ದರು. “ನಾವು ಪಂಚತಾರಾ ಡಿಲಕ್ಸ್‌ ಸೌಲಭ್ಯ ಹೊಂದಿರುವ ಹೋಟೆಲ್‌. ನಗರದಲ್ಲಿ ಇಂತಹ ಇನ್ನೂ ಐದು ಹೋಟೆಲ್‌ಗಳಿವೆ. ಯಾರಾದರೂ ತಮಗೆ ಇಷ್ಟವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು” ಎಂದು ಅವರು ಹೇಳಿದ್ದಾಗಿ ESPNcricinfo ವರದಿ ಮಾಡಿತ್ತು.

ಹೋಟೆಲ್‌ ಬದಲಾವಣೆಗೆ ಬೇರೆ ಕಾರಣ ನೀಡಿದ್ದ CSK

ಇನ್ನು ಹೋಟೆಲ್‌ ಬದಲಾವಣೆಯ ಕುರಿತು ಚೆನ್ನೈ ಸೂಪರ್‌ ಕಿಂಗ್ಸ್‌ ವಕ್ತಾರ ರಸೆಲ್‌ ರಾಧಾಕೃಷ್ಣನ್‌ ಅವರು ‘ಹಿಂದೂಸ್ತಾನ್‌ ಟೈಮ್ಸ್‌’ಗೆ ಪ್ರತಿಕ್ರಿಯೆ ನೀಡಿದ್ದರು. “ನಮಗೆ ಹೆಚ್ಚಿನ ವಸತಿ ವ್ಯವಸ್ಥೆಯ ಅಗತ್ಯವಿತ್ತು. ತಾಜ್‌ ಕೃಷ್ಣಾ ಅದನ್ನು ಒದಗಿಸಬಲ್ಲುದಾಗಿತ್ತು. ಇದು ನಮ್ಮ ವೈಯಕ್ತಿಕ ನಿರ್ಧಾರ. ಹೋಟೆಲ್‌ ಬದಲಾವಣೆಯ ಹಿಂದಿನ ಕಾರಣಗಳ ಬಗ್ಗೆ ನಾವು ಪ್ರತಿಕ್ರಿಯಿಸುವ ಅಗತ್ಯವಿಲ್ಲ” ಎಂದು ಅವರು ತಿಳಿಸಿದ್ದರು.

ಆದರೆ, ಈ ವಿವಾದದ ನಡುವೆಯೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಗ್ರ್ಯಾಂಡ್‌ ಕಾಕತೀಯಾ ಹೋಟೆಲ್‌ನಲ್ಲೇ ಉಳಿದುಕೊಂಡಿತ್ತು. ಮರುದಿನ ನಡೆದ ಪಂದ್ಯದಲ್ಲಿ ಕೆಕೆಆರ್‌ ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಗೆಲುವು ಸಾಧಿಸಿತ್ತು. “ಹೋಟೆಲ್‌ ಚೆನ್ನಾಗಿದೆ. ನಮಗೆ ಯಾವುದೇ ಸಮಸ್ಯೆಗಳಿಲ್ಲ” ಎಂದು ಕೆಕೆಆರ್‌ ತಂಡದ ಆಗಿನ ಅಧಿಕಾರಿ ಜಾಯ್‌ ಭಟ್ಟಾಚಾರ್ಯ ‘ಹಿಂದೂಸ್ತಾನ್‌ ಟೈಮ್ಸ್‌’ಗೆ ಹೇಳಿದ್ದರು.

ಒಂದು ಕಡೆ ಬಿರಿಯಾನಿ ವಿಚಾರ, ಮತ್ತೊಂದೆಡೆ ಹೋಟೆಲ್‌ ಬದಲಾವಣೆ ನಿರ್ಧಾರ. ಹೀಗೆ ಧೋನಿಯವರ ಶಾಂತ ಸ್ವಭಾವದ ಹಿಂದಿನ ಮತ್ತೊಂದು ಮುಖವನ್ನು ತೋರಿಸಿದ್ದ ಈ ಘಟನೆ ಹಲವು ವರ್ಷಗಳ ಬಳಿಕವೂ ಕ್ರಿಕೆಟ್‌ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್‌ಗೆ ಧೋನಿ ವಿದಾಯದ ಬೆನ್ನಲ್ಲೇ ಪತ್ನಿ ಸಾಕ್ಷಿ ಭಾವುಕ ಪೋಸ್ಟ್! 'ಮಾಹಿ, ನಿನ್ನ ಬಗ್ಗೆ ಹೆಮ್ಮೆ ಇದೆ' ಎಂದ ಮಡದಿ!
'ನನ್ನ ಕ್ಯಾಪ್ಟನ್ ಶ್ರೇಯಸ್, ನನ್ನ ಕೋಚ್ ರಿಕಿ, ನನ್ನ ತಂಡ ಪಂಜಾಬ್' ಎಂದ ಹಾರ್ದಿಕ್ ಪಾಂಡ್ಯ! ಪೋಸ್ಟ್ ವೈರಲ್ ಆಗಿದ್ದೇಕೆ?