ಮಹಾರಾಜ ಟ್ರೋಫಿ, ಬೆಂಗಳೂರು ಬ್ಲಾಸ್ಟರ್ಸ್‌ಗೆ 221 ಟಾರ್ಗೆಟ್ ನೀಡಿದ ಗುಲ್ಬರ್ಗ!

By Suvarna NewsFirst Published Aug 26, 2022, 9:06 PM IST
Highlights

ದೇವದತ್ ಪಡಿಕ್ಕಲ್ ಹೋರಾಟ, ಜೆಶ್ವತ್ ಆಚಾರ್ಯ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಗುಲ್ಬರ್ಗಾ ಮಿಸ್ಟಿಕ್ಸ್ 220 ರನ್ ಸಿಡಿಸಿದೆ.  ಈ ಮೂಲಕ ಮಹಾರಾಜ ಟ್ರೋಫಿ ಯಾರ ಪಾಲಾಗಲಿದೆ ಅನ್ನೋ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. 

ಬೆಂಗಳೂರು(ಆ.26):  ಚೊಚ್ಚಲ ಆವೃತ್ತಿ ಮಹಾರಾಜ ಟ್ರೋಫಿ ಫೈನಲ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಗುಲ್ಬರ್ಗ ಮಿಸ್ಟಿಕ್ಸ್ 3 ವಿಕೆಟ್ ನಷ್ಟಕ್ಕೆ 220 ರನ್ ಸಿಡಿಸಿದೆ.  ದೇವದತ್ ಪಡಿಕ್ಕಲ್ ಹಾಫ್ ಸೆಂಚುರಿ, ನಾಯಕ ಮನೀಶ್ ಪಾಂಡೆ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಲ್ಬರ್ಗ ಉತ್ತಮ ಮೊತ್ತ ಮೇರಿಸಿದೆ. ಟಾಸ್ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಈ ಮೂಲಕ ಗುಲ್ಬರ್ಗ ಮಿಸ್ಟಿಕ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆದರೆ ಜೆಶ್ವತ್ ಆಚಾರ್ಯ ಹಾಗೂ ರೋಹನ್ ಪಾಟಿಲ್ ಅಬ್ಬರಕ್ಕೆ ಬೆಂಗಳೂರು ಬೆಚ್ಚಿ ಬಿದ್ದಿತು. ಸ್ಫೋಟಕ ಬ್ಯಾಟಿಂಗ್ ಮೂಲಕ ಗುಲ್ಬರ್ಗಾ ಉತ್ತಮ ಆರಂಭ ಪಡೆಯಿತು. ಜೆಶ್ವತ್ ಆಚಾರ್ಯ 17 ಎಸೆತದಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಮೂಲಕ 39 ರನ್ ಸಿಡಿಸಿ ಔಟಾದರು. ಇತ್ತ ರೋಹನ್ ಪಾಟಿಲ್ 21 ಎಸೆತದಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 38 ರನ್ ಕಾಣಿಕೆ ನೀಡಿದರು.

ದೇವದತ್ ಪಡಿಕ್ಕಲ್ ತಂಡಕ್ಕೆ ಆಸರೆಯಾದರು. ಕೃಷ್ಣನ್ ಶ್ರೀಜಿತ್ ಜೊತೆ ಸೇರಿದ ಪಡಿಕ್ಕಲ್ ಇನ್ನಿಂಗ್ಸ್ ಮುಂದುವರಿಸಿದರು. ಕೃಷ್ಣನ್ ಶ್ರೀಜಿತ್ 25 ಎಸೆತದಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 38 ರನ್ ಸಿಡಿಸಿದರು. ಶ್ರೀಜಿತ್ ವಿಕೆಟ್ ಪತನದ ಬಳಿಕ ಪಡಿಕ್ಕಲ್ ಹಾಗೂ ನಾಯಕ ಮನೀಶ್ ಪಾಂಡೆ ರನ್ ವೇಗ ಹೆಚ್ಚಿಸಲು ಪ್ರಯತ್ನಿಸಿದರು. ದೇವದತ್ ಪಡಿಕ್ಕಲ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ಮನೀಶ್ ಪಾಂಡೆ ಉತ್ತಮ ಸಾಥ್ ನೀಡಿದರು. 

ಅಂತಿಮ ಹಂತದಲ್ಲಿ ಮನೀಶ್ ಪಾಂಡೆ ಬ್ಯಾಟಿಂಗ್ ಗುಲ್ಬರ್ಗ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಪಡಿಕ್ಕಲ್ ಅಜೇಯ 56 ರನ್ ಸಿಡಿಸಿದರೆ, ಪಾಂಡೆ 17 ಎಸೆದಲ್ಲಿ 41 ರನ್ ಕಾಣಿಕೆ ನೀಡಿದರು. ಈ ಮೂಲಕ ಗುಲ್ಬರ್ಗ 3 ವಿಕೆಟ್ ನಷ್ಟಕ್ಕೆ 220 ರನ್ ಸಿಡಿಸಿತು.

ಮೈಸೂರು ಮಣಿಸಿ ಫೈನಲ್‌ಗೇರಿದ್ದ ಗುಲ್ಬರ್ಗ
ದೇವದತ್‌ ಪಡಿಕ್ಕಲ್‌ ಅಬ್ಬರದ ನೆರವಿನಿಂದ ಮೈಸೂರು ವಾರಿಯ​ರ್‍ಸ್ ವಿರುದ್ಧದ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್‌ 6 ವಿಕೆಟ್‌ ಗೆಲುವು ಸಾಧಿಸಿತ್ತು. ಈ ಮೂಲಕ ಚೊಚ್ಚಲ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಫೈನಲ್‌ ಪ್ರವೇಶಿಸಿತ್ತು. ಮೊದಲು ಬ್ಯಾಟ್‌ ಮಾಡಿದ ಮೈಸೂರು 20 ಓವರಲ್ಲಿ 5 ವಿಕೆಟ್‌ಗೆ 157 ರನ್‌ ಕಲೆ ಹಾಕಿತು. ನಾಯಕ ಕರುಣ್‌ ನಾಯರ್‌ 42, ಪವನ್‌ ದೇಶಪಾಂಡೆ 38 ರನ್‌ ಗಳಿಸಿದರೆ, ನಾಗ ಭರತ್‌ ಕೊನೆಯಲ್ಲಿ 12 ಎಸೆತಗಳಲ್ಲಿ ಔಟಾಗದೆ 27 ರನ್‌ ಸಿಡಿಸಿ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ವಿದ್ವತ್‌ ಕಾವೇರಪ್ಪ, ಕುಶಾಲ್‌ ವಧ್ವಾಣಿ ತಲಾ 2 ವಿಕೆಟ್‌ ಕಿತ್ತರು. ಸಾಧಾರಣ ಗುರಿ ಬೆನ್ನತ್ತಿದ ಗುಲ್ಬರ್ಗಾ 19.4 ಓವರ್‌ಗಳಲ್ಲಿ ಗುರಿ ತಲುಪಿತು. 11.3 ಓವರಲ್ಲಿ 78ಕ್ಕೆ 4 ವಿಕೆಟ್‌ ಕಳೆದುಕೊಂಡಿದ್ದ ತಂಡ ಸೋಲಿನತ್ತ ಮುಖಮಾಡಿತ್ತು. ಆದರೆ ದೇವದತ್‌ ಪಡಿಕ್ಕಲ್‌(64 ಎಸೆತಗಳಲ್ಲಿ ಔಟಾಗದೆ 96) ಹಾಗೂ ಮನೋಜ್‌ ಭಂಡಾಜೆ(35) ಭರ್ಜರಿ ಆಟದ ಮೂಲಕ ತಂಡವನ್ನು ಫೈನಲ್‌ಗೇರಿಸಿದರು. ಪವನ್‌ ದೇಶಪಾಂಡೆ 16 ರನ್‌ಗೆ 2 ವಿಕೆಟ್‌ ಕಿತ್ತರು.

click me!