
ಕೊಲಂಬೊ(ಆ.10): ಆರ್ಥಿಕ ದುಸ್ಥಿತಿ ಹಾಗೂ ರಾಜಕೀಯ ಅರಾಜಕತೆಯಿಂದಾಗಿ ಮುಂದೂಡಲ್ಪಟ್ಟಿದ್ದ ಲಂಕಾ ಪ್ರೀಮಿಯರ್ ಟೂರ್ನಿ ಆಯೋಜಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತೀರ್ಮಾನಿಸಿದ್ದು, ಡಿಸೆಂಬರ್ 06ರಿಂದ ಡಿಸೆಂಬರ್ 23ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಈ ಮೊದಲು ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಆಗಸ್ಟ್ 01ರಿಂದ 21ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ದ್ವೀಪರಾಷ್ಟ್ರದಲ್ಲಿ ತಲೆದೂರಿದ್ದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.
ಇದೀಗ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯ ಆಯೋಜಕರಾದ ಸಮಂಥ ದೊಡ್ನಾವೆಲ್ಲಾ ಖ್ಯಾತ ಕ್ರಿಕೆಟ್ ವೆಬ್‌ಸೈಟ್ ESPNCricinfo ಗೆ ಪ್ರತಿಕ್ರಿಯೆ ನೀಡಿದ್ದು, ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯು ಡಿಸೆಂಬರ್ 06ರಿಂದ ಡಿಸೆಂಬರ್ 23ರವರೆಗೆ ನಡೆಯಲಿದೆ ಎಂದು ತಿಳಿಸಲು ನನಗೆ ಖುಷಿಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಆರ್ಥಿಕ ದುಸ್ಥಿತಿ ಹಾಗೂ ರಾಜಕೀಯ ಅರಾಜಕತೆಯ ಹೊರತಾಗಿಯೂ ಕಳೆದ ಜುಲೈನಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತವರಿನಲ್ಲಿ ಆಸ್ಟ್ರೇಲಿಯಾ ಎದುರು ದೀರ್ಘಕಾಲಿಕ ದ್ವಿಪಕ್ಷೀಯ ಸರಣಿಯನ್ನು ಆಯೋಜಿಸಿ ಸೈ ಎನಿಸಿಕೊಂಡಿತ್ತು. ಇದರ ಹೊರತಾಗಿಯೂ ಲಂಕಾ ಕ್ರಿಕೆಟ್ ಮಂಡಳಿಯು ತಮ್ಮ ತವರಿನಲ್ಲಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲು ಹಿಂದೆ ಸರಿದಿತ್ತು. ಬಹುನಿರೀಕ್ಷಿತ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಮುಂಬರುವ ಆಗಸ್ಟ್ 27ರಿಂದ ಸೆಪ್ಟಂಬರ್ 11ರವರೆಗೆ ಜರುಗಲಿದೆ.
Asia Cup 2022 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಪಾಕ್ ಎದುರಾಳಿ..!
ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಸದ್ಯ ದೇಶದಲ್ಲಿರುವ ಆರ್ಥಿಕ ಪರಿಸ್ಥಿತಿ ಹಾಗೂ ರಾಜಕೀಯ ಘರ್ಷಣೆ ಮುಂತಾದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅದರಲ್ಲೂ ಮುಖ್ಯವಾಗಿ ವಿದೇಶಿ ವಿನಿಮಯವನ್ನು ಗಮನದಲ್ಲಿಟ್ಟುಕೊಂಡು 6 ರಾಷ್ಟ್ರಗಳು ಪಾಲ್ಗೊಳ್ಳಲಿರುವ ಮಹತ್ವದ ಟೂರ್ನಿಯನ್ನು ಸದ್ಯ ದ್ವೀಪರಾಷ್ಟ್ರದಲ್ಲಿ ಆಯೋಜಿಸಲು ಸಾಧ್ಯವಿಲ್ಲ ಎಂದು ತೀರ್ಮಾನಕ್ಕೆ ಬಂದಿತ್ತು ಎಂದು ವರದಿಯಾಗಿದೆ.
ಬಹುನಿರೀಕ್ಷಿತ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯು ನಡೆಯಲಿದೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ, ಭಾರತ, ಪಾಕಿಸ್ತಾನ, ಆಪ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಜತೆಗೆ ಏಷ್ಯಾದ ಯುಎಇ, ಕುವೈತ್, ಸಿಂಗಾಪುರ ಅಥವಾ ಹಾಂಕಾಂಗ್ ಈ ತಂಡಗಳ ಪೈಕಿ ಒಂದು ತಂಡ ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡು ಪ್ರಧಾನ ಸುತ್ತಿಗೆ ಲಗ್ಗೆಯಿಡಲಿದೆ.
ಈ ಬಾರಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನದ ಜತೆಗೆ 'ಎ' ಗುಂಪಿನಲ್ಲಿ ಅರ್ಹತಾ ಸುತ್ತಿನಲ್ಲಿ ವಿಜೇತವಾದ ತಂಡವು ಸ್ಥಾನ ಪಡೆಯಲಿದೆ. ಇನ್ನು 'ಬಿ' ಗುಂಪಿನಲ್ಲಿ ಶ್ರೀಲಂಕಾ, ಆಪ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿವೆ. ಗ್ರೂಪ್ ಹಂತದ ಪಂದ್ಯಗಳು ಆಗಸ್ಟ್ 27ರಿಂದ ಸೆಪ್ಟೆಂಬರ್ 02ರವರೆಗೆ ನಡೆಯಲಿವೆ. ಇದಾದ ಬಳಿಕ ಸೂಪರ್ 4 ಹಂತದ ಪಂದ್ಯಗಳು ಸೆಪ್ಟೆಂಬರ್ 03ರಿಂದ ಸೆಪ್ಟೆಂಬರ್ 09ರವರೆಗೆ ನಡೆಯಲಿವೆ. ಇನ್ನು ಏಷ್ಯಾಕಪ್ ಫೈನಲ್ ಪಂದ್ಯವು ಸೆಪ್ಟಂಬರ್ 11ರಂದು ಜರುಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.