
19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಎಲ್ಲಾ 10 ತಂಡಗಳು ಅಂತಿಮ ಹಂತದ ಸಿದ್ದತೆ ನಡೆಯುತ್ತಿವೆ. ಎಲ್ಲಾ ತಂಡಗಳು ಈಗಾಗಲೇ ತಮ್ಮ ರಣತಂತ್ರಗಳನ್ನು ಸಿದ್ದಪಡಿಸಿಕೊಂಡಿದ್ದು, ಟೂರ್ನಿ ಆರಂಭವಾಗುವುದನ್ನೇ ಕಾಯುತ್ತಿವೆ. ಪ್ರತಿ ತಂಡದ ಬಲಾಬಲ ಹೇಗಿದೆ ಎನ್ನುವ ವಿವರವನ್ನು ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್‌ನ ಸೋದರ ಸಂಸ್ಥೆ 'ಕನ್ನಡಪ್ರಭ' ನಿಮ್ಮ ಮುಂದಿಡಲಿದೆ. ಇಂದು ಮೂರು ತಂಡಗಳ ಕುರಿತ ಮಾಹಿತಿ ಪ್ರಕಟಗೊಳ್ಳಲಿದ್ದು, ಮುಂದಿನ ಎರಡು ದಿನಗಳಲ್ಲಿ ಬಾಕಿ ಏಳು ತಂಡಗಳ ವಿವರ ಇರಲಿದೆ.
ಕಳೆದ ಆವೃತ್ತಿಯ ಸಾಧನೆ: ಚಾಂಪಿಯನ್
ಆರ್‌ಸಿಬಿಯ 18 ವರ್ಷಗಳ ಕಾಯುವಿಕೆಗೆ ಕಳೆದ ವರ್ಷ ತೆರೆ ಬಿದ್ದಿತ್ತು. ಟೂರ್ನಿಯುದ್ಧಕ್ಕೂ ಅತ್ಯುತ್ತಮ ಆಟವಾಡಿದ್ದ ತಂಡ ಕೊನೆಗೂ ಮೊದಲ ಬಾರಿಗೆ ಟ್ರೋಫಿ ಜಯಿಸಿ ಸಂಭ್ರಮಿಸಿತ್ತು.
2026ರಲ್ಲಿ ತಂಡ ಹೇಗಿದೆ?
ಚಾಂಪಿಯನ್ ಆಗಲು ನೆರವಾದ ಬಹುತೇಕ ಆಟಗಾರರನ್ನು ಈ ವರ್ಷಕ್ಕೂ ಆರ್‌ಸಿಬಿ ಉಳಿಸಿಕೊಂಡಿದೆ. ಪ್ರಮುಖವಾಗಿ ಆಡುವ ಹನ್ನೆರಡು (ಇಂಪ್ಯಾಕ್ಟ್ ಆಟಗಾರ ಸೇರಿ) ಆಟಗಾರರ ಬಳಗ ಹೆಚ್ಚೂ ಕಡಿಮೆ ಕಳೆದ ಆವೃತ್ತಿಯಂತೆಯೇ ಇರಲಿದೆ. ಈ ಸಲ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಎಡಗೈ ವೇಗಿ ಯಶ್ ದಯಾಳ್‌ರನ್ನು ಆಡಿಸುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಅವರ ಬದಲು ಮಂಗೇಶ್ ಯಾದವ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದು, ಅವರಿಗೆ ಅವಕಾಶ ಸಿಗಬಹುದು.
ದೌರ್ಬಲ್ಯಗಳೇನು?: ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಇನ್ನೂ ತಂಡ ಕೂಡಿಕೊಂಡಿಲ್ಲ. ಅವರ ಅನುಪಸ್ಥಿತಿ ತಂಡವನ್ನು ಕಾಡಬಹುದು. ನ್ಯೂಜಿಲೆಂಡ್‌ನ ಜೇಕಬ್ ಡಫಿ, ಹೇಜಲ್‌ವುಡ್‌ರ ಪಾತ್ರವನ್ನು ನಿರ್ವಹಿಸಬೇಕಿದೆ. ತಂಡದಲ್ಲಿರುವ ಅನೇಕರು ಕೊನೆಯದಾಗಿ ಸ್ಪರ್ಧಾತ್ಮಕ ಟಿ20 ಪಂದ್ಯವನ್ನಾಡಿ ಬಹಳ ದಿನಗಳಾಗಿವೆ. ಹೀಗಾಗಿ, ಆಟಕ್ಕೆ ಒಗ್ಗಿಕೊಳ್ಳಲು ಸಮಯ ಹಿಡಿಯಬಹುದು.
ಅತ್ಯುತ್ತಮ 12 ಆಯ್ಕೆ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಪಡಿಕ್ಕಲ್/ವೆಂಕಿ ಅಯ್ಯರ್, ರಜತ್ ಪಾಟೀದಾರ್ (ನಾಯಕ), ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ದಯಾಳ್/ಮಂಗೇಶ್, ಜೇಕಬ್ ಡಫಿ, ಸುಯಶ್ ಶರ್ಮಾ (ಇಂಪ್ಯಾಕ್ಟ್ ಆಟಗಾರ).
ಕಳೆದ ಆವೃತ್ತಿಯ ಸಾಧನೆ: ಕೊನೆ ಸ್ಥಾನ
2025ರಲ್ಲಿ ಸಿಎಸ್‌ಕೆ ತೀರಾ ಕಳಪೆ ಪ್ರದರ್ಶನ ತೋರಿತು. ಮೊದಲು ಸತತ 5, ಆ ಬಳಿಕ ಸತತ 4 ಸೋಲುಗಳನ್ನು ಕಂಡಿತು. 14 ಪಂದ್ಯಗಳಲ್ಲಿ ಕೇವಲ 4 ಗೆಲುವು ಸಾಧಿಸಿ ಕೊನೆ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
2026ರಲ್ಲಿ ತಂಡ ಹೇಗಿದೆ?
ಡ್ಯಾಡ್ಸ್ ಆರ್ಮಿ (ಹಿರಿಯ ಆಟಗಾರರಿಂದಲೇ ಕೂಡಿದ ತಂಡ) ಎಂದು ಕರೆಸಿಕೊಳ್ಳುತ್ತಿದ್ದ ಚೆನ್ನೈ ತಂಡದಲ್ಲೀಗ ಯುವಕರೇ ತುಂಬಿ ತುಳುಕುತ್ತಿದ್ದಾರೆ. ಸಂಪೂರ್ಣವಾಗಿ ಹೊಸ ತಂಡ ಕಟ್ಟುವ ಪ್ರಯತ್ನವನ್ನು ಫ್ರಾಂಚೈಸಿ ಆರಂಭಿಸಿದೆ. ಅಲ್ಲದೇ, ವಿಶ್ವಕಪ್ ವಿಜೇತ ವಿಕೆಟ್ ಕೀಪರ್‌ನ ಆಗಮನವಾಗಿದೆ. 2008ರಲ್ಲಿ ಎಂ.ಎಸ್.ಧೋನಿಯನ್ನು ತಂಡ ಖರೀದಿಸಿತ್ತು. ಅವರು ತಂಡವನ್ನು ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ಬೆಳೆಸಿದರು. ಈಗ ಸಂಜು ಸ್ಯಾಮ್ಸನ್‌ರ ಆಗಮನವಾಗಿದೆ. ಅವರೂ ಧೋನಿ ರೀತಿ ಯಶಸ್ಸು ತಂದುಕೊಡಲಿದ್ದಾರೆ ಎನ್ನುವ ನಂಬಿಕೆಯನ್ನು ಫ್ರಾಂಚೈಸಿ ಹೊಂದಿದೆ.
ಆಯುಷ್ ಮ್ಹಾತ್ರೆ, ಡೆವಾಲ್ಡ್ ಬ್ರೆವಿಸ್, ಕಾರ್ತಿಕ್ ಶರ್ಮಾ, ಪ್ರಶಾಂತ್ ವೀರ್, ಸರ್ಫರಾಜ್ ಖಾನ್, ನೂರ್ ಅಹ್ಮದ್, ರಾಮಕೃಷ್ಣ ಘೋಷ್‌ರಂತಹ ಯುವ ಪ್ರತಿಭೆಗಳು ತಂಡದಲ್ಲಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ತೋರಿದ ಪ್ರದರ್ಶನವನ್ನು ಶಿವಂ ದುಬೆ ಐಪಿಎಲ್‌ನಲ್ಲೂ ಮುಂದುವರಿಸುತ್ತಾರಾ, ಋತುರಾಜ್‌ರ ನಾಯಕತ್ವ ಕೌಶಲ್ಯ ಎಷ್ಟು ಸುಧಾರಿಸಿದೆ ಎನ್ನುವ ಬಗ್ಗೆ ಕುತೂಹಲವಿದೆ.
ದೌರ್ಬಲ್ಯಗಳೇನು?: ಜಡೇಜಾ, ಕರ್ರನ್, ಬ್ರಾವೋ, ದೀಪಕ್ ಚಹರ್ ಹೀಗೆ ತಜ್ಞ ಬೌಲರ್‌ಗಳನ್ನು ಹೊಂದಿದ್ದ ಸಿಎಸ್‌ಕೆ, ಈಗ ಅನುಭವಿಗಳ ಕೊರತೆ ಎದುರಿಸುತ್ತಿದೆ.
ಅತ್ಯುತ್ತಮ 12 ಆಯ್ಕೆ: ಸಂಜು ಸ್ಯಾಮ್ಸನ್, ಆಯುಷ್ ಮ್ಹಾತ್ರೆ, ಋತುರಾಜ್ ಗಾಯಕ್ವಾಡ್ (ನಾಯಕ), ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್, ಕಾರ್ತಿಕ್ ಶರ್ಮಾ/ಸರ್ಫರಾಜ್, ಪ್ರಶಾಂತ್ ವೀರ್, ಎಂ.ಎಸ್.ಧೋನಿ, ಓವರ್‌ಟನ್/ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಮ್ಯಾಟ್ ಹೆನ್ರಿ/ಅಕೀಲ್ ಹೊಸೆನ್, ಖಲೀಲ್ ಅಹ್ಮದ್(ಇಂಪ್ಯಾಕ್ಟ್ ಆಟಗಾರ).
ಕಳೆದ ಆವೃತ್ತಿಯ ಸಾಧನೆ: 7ನೇ ಸ್ಥಾನ
ಲಖನೌ ಸೂಪರ್ ಜೈಂಟ್ಸ್ 2025ರ ಐಪಿಎಲ್‌ನಲ್ಲಿ 7ನೇ ಸ್ಥಾನ ಗಳಿಸಿತು. ಟೂರ್ನಿಯ ದ್ವಿತೀಯಾರ್ಧದಲ್ಲಿ ಸತತ 4 ಸೋಲು ಕಂಡ ಬಳಿಕ ತಂಡದ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾದವು.
2026ರಲ್ಲಿ ತಂಡ ಹೇಗಿದೆ?
ಅಗ್ರ 3 ಬ್ಯಾಟರ್‌ಗಳು, ಮೂವರು ಅಂ.ರಾ. ಅನುಭವ ಇರುವ ಬೌಲರ್‌ಗಳು ತಂಡದ ಟ್ರಂಪ್‌ಕಾರ್ಡ್‌ಗಳು. ಜೊತೆಗೆ ಸಾರಥಿ ಸ್ಥಾನದಲ್ಲಿರುವ ರಿಷಭ್ ಪಂತ್. ಏಡನ್ ಮಾರ್ಕ್‌ರಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್. ಈ ಮೂವರಲ್ಲಿ ಒಬ್ಬರು ಸಿಡಿದರೂ ಎದುರಾಳಿಗಳಿಗೆ ಸಂಕಷ್ಟ ಖಚಿತ. ಇನ್ನು ವನಿಂಡು ಹಸರಂಗ, ಏನ್ರಿಚ್ ನೋಕಿಯ, ಮೊಹಮದ್ ಶಮಿ ಯ ಅನುಭವ ತಂಡಕ್ಕೆ ಪ್ಲಸ್ ಪಾಯಿಂಟ್. ಆದರೆ ಹಸರಂಗ ಹಾಗೂ ನೋಕಿಯ ನಡುವೆ ಒಂದು ಸ್ಥಾನಕ್ಕೆ ಪೈಪೋಟಿ ಏರ್ಪಡಲಿದೆ. ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ಹಸರಂಗ, ಫ್ಲ್ಯಾಟ್ ಪಿಚ್‌ಗಳಲ್ಲಿ ನೋಕಿಯರನ್ನು ಆಡಿಸಬಹುದು.
ಇನ್ನು, ಭಾರತೀಯ ವೇಗಿಗಳಾದ ಮಯಾಂಕ್ ಯಾದವ್, ಆವೇಶ್ ಖಾನ್, ಮೊಹ್ಸಿನ್ ಖಾನ್ ಕೂಡ ಮಿಂಚಲು ಸಿದ್ಧರಾಗಿದ್ದಾರೆ. ಕಳೆದ ವರ್ಷ ಗಮನ ಸೆಳೆದಿದ್ದ ಸ್ಪಿನ್ನರ್ ದಿಗ್ವೇಶ್ ರಾಠಿ ಮೇಲೂ ನಿರೀಕ್ಷೆ ಇದೆ.
ದೌರ್ಬಲ್ಯಗಳೇನು?: ನಾಯಕ ಹಾಗೂ ಬ್ಯಾಟರ್ ಆಗಿ ಪಂತ್ ಹೇಗೆ ಜವಾಬ್ದಾರಿ ನಿಭಾಯಿಸಲಿದ್ದಾರೆ ಎನ್ನುವುದು ತಂಡದ ಸ್ಥಾನಮಾನ ನಿರ್ಧರಿಸಬಹುದು. ಮೇಲ್ನೋಟಕ್ಕೆ ಲಖನೌ ಅತ್ಯಂತ ಸಮತೋಲಿತವಾಗಿ ಕಾಣುತ್ತಿದ್ದರೂ, ಎಲ್ಲ ಆಟಗಾರರು ಒಟ್ಟಿಗೆ ವೈಫಲ್ಯ ಅನುಭವಿಸಬಹುದು ಎನ್ನುವ ಅಂಶಗಳನ್ನು ಕಡೆಗಣಿಸುವಂತಿಲ್ಲ.
ಅತ್ಯುತ್ತಮ 12 ಆಯ್ಕೆ: ಮಿಚೆಲ್ ಮಾರ್ಷ್, ಏಡನ್ ಮಾರ್ಕ್‌ರಮ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ), ಆಯುಷ್ ಬದೋನಿ, ಅಬ್ದುಲ್ ಸಮದ್, ವನಿಂಡು ಹಸರಂಗ/ಏನಿಚ್ ನೋಕಿಯ, ಶಾಬಾಜ್ ಅಹ್ಮದ್, ಆವೇಶ್ ಖಾನ್, ಮೊಹಮದ್ ಶಮಿ, ಮಯಾಂಕ್ ಯಾದವ್, ದಿಗ್ವೇಶ್ ರಾಠಿ (ಇಂಪ್ಯಾಕ್ಟ್ ಆಟಗಾರ).
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.