ಆರೆಂಜ್ ಕ್ಯಾಪ್ ರೇಸ್: ವಿರಾಟ್ ಕೊಹ್ಲಿಗೆ ಕಠಿಣ ಪೈಪೋಟಿ ನೀಡಲು ರೆಡಿಯಾಗಿದ್ದಾರೆ ಈ ಯುವ ಕ್ರಿಕೆಟರ್ಸ್!

Published : Mar 28, 2026, 04:48 PM IST
Virat Kohli

ಸಾರಾಂಶ

2026ರ ಐಪಿಎಲ್ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಫಾಫ್ ಡು ಪ್ಲೆಸಿಸ್ ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿಯ ಜೊತೆಗೆ, ಕೆಎಲ್ ರಾಹುಲ್, ಶುಭ್‌ಮನ್ ಗಿಲ್, ಸಾಯಿ ಸುದರ್ಶನ್, ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಸ್ಥಿರ ಪ್ರದರ್ಶನ ನೀಡುವ ಆಟಗಾರರು ಕೂಡ ಈ ಪ್ರಶಸ್ತಿಯ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಬೆಂಗಳೂರು: 2026ರ ಐಪಿಎಲ್ ಸೀಸನ್‌ನಲ್ಲಿ ಆರೆಂಜ್ ಕ್ಯಾಪ್ ಯಾರು ಗೆಲ್ಲಬಹುದು? ಅಂತ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಫಾಫ್ ಡು ಪ್ಲೆಸಿಸ್‌ಗೆ ಕೇಳಿದಾಗ, ಅವರು ತಕ್ಷಣ ಒಂದು ಉತ್ತರ ಕೊಟ್ಟರು. "ವಿರಾಟ್ ಕೊಹ್ಲಿ ಹೆಸರನ್ನು ಹೇಳದಿದ್ದರೆ ನಾನು ಮೂರ್ಖನಾಗುತ್ತೇನೆ" ಅಂದರು. 18 ಸೀಸನ್‌ಗಳು ಮುಗಿದು, ಕೊಹ್ಲಿಗೆ 37 ವರ್ಷ ವಯಸ್ಸಾಗಿದ್ದರೂ, ಇವತ್ತಿಗೂ ಅವರೇ ಈ ರೇಸ್‌ನಲ್ಲಿ ಮೊದಲ ಹೆಸರು. ಈ 19ನೇ ಆವೃತ್ತಿಯಲ್ಲಿ ರನ್ ಬೇಟೆಯಲ್ಲಿ ಯಾರೆಲ್ಲಾ ಮುಂಚೂಣಿಯಲ್ಲಿದ್ದಾರೆ ನೋಡೋಣ.

ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಕೊಹ್ಲಿಗೆ ಮೊದಲ ಸ್ಥಾನ

ವಿರಾಟ್ ಕೊಹ್ಲಿ, ಈ ಹೆಸರಿನ ನಂತರವೇ ಬೇರೆಯವರ ಬಗ್ಗೆ ಯೋಚಿಸಬೇಕು. ಯಾಕಂದ್ರೆ ಅವರು ಸೆಟ್ ಮಾಡಿರುವ ಬೆಂಚ್‌ಮಾರ್ಕ್ ಅಂಥದ್ದು. ಐಪಿಎಲ್‌ನಲ್ಲಿ 8,661 ರನ್ ಗಳಿಸಿರುವ ಕೊಹ್ಲಿ, ಎರಡನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾಗಿಂತ 1500ಕ್ಕೂ ಹೆಚ್ಚು ರನ್‌ಗಳಿಂದ ಮುಂದಿದ್ದಾರೆ. ಎಂಟು ಸೀಸನ್‌ಗಳಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2016ರಲ್ಲಿ ಬರೋಬ್ಬರಿ 973 ರನ್ ಬಾರಿಸಿ, ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾರೆ. ವೃತ್ತಿಜೀವನದ ಕೊನೆಯ ಹಂತದಲ್ಲಿದ್ದರೂ, ಕಳೆದ ಮೂರು ಐಪಿಎಲ್‌ಗಳಲ್ಲಿ ಕೊಹ್ಲಿ ಕ್ರಮವಾಗಿ 639, 741, ಮತ್ತು 657 ರನ್ ಗಳಿಸಿದ್ದಾರೆ. ಇದನ್ನೇ 'ಪೀಕ್ ಕನ್ಸಿಸ್ಟೆನ್ಸಿ' ಅನ್ನೋದು. ಈಗಾಗಲೇ ಎರಡು ಬಾರಿ ಆರೆಂಜ್ ಕ್ಯಾಪ್ ಗೆದ್ದ ಇತಿಹಾಸವೂ ಕೊಹ್ಲಿಗಿದೆ.

ಕನ್ನಡಿಗ ಕೆ ಎಲ್ ರಾಹುಲ್ ಮೇಲೆ ಎಲ್ಲರ ಕಣ್ಣು

ಮುಂದಿನ ಹೆಸರು ಡೆಲ್ಲಿ ಕ್ಯಾಪಿಟಲ್ಸ್‌ನ ಓಪನರ್ ಕೆ ಎಲ್ ರಾಹುಲ್. ಐಪಿಎಲ್‌ನಲ್ಲಿ 100ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಬ್ಯಾಟರ್‌ಗಳ ಪಟ್ಟಿ ತೆಗೆದರೆ, ಕೊಹ್ಲಿಗಿಂತಲೂ ರಾಹುಲ್ ಹೆಚ್ಚು ಸ್ಥಿರತೆ ಹೊಂದಿದ್ದಾರೆ. ಅವರ ಸರಾಸರಿ 46 ಇದೆ. ಕಳೆದ ಒಂಬತ್ತು ಸೀಸನ್‌ಗಳಲ್ಲಿ ಏಳು ಬಾರಿ 500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ, 2020 ರಿಂದ 22ರವರೆಗೆ ಸತತ ಮೂರು ಆವೃತ್ತಿಗಳಲ್ಲಿ 600ರ ಗಡಿ ದಾಟಿದ್ದಾರೆ. ಈ ಬಲಗೈ ಬ್ಯಾಟರ್ 2020ರಲ್ಲಿ ಆರೆಂಜ್ ಕ್ಯಾಪ್ ಕೂಡ ಗೆದ್ದಿದ್ದರು.

ಶುಭ್‌ಮನ್ ಗಿಲ್

ಕೊಹ್ಲಿಯ 973 ರನ್‌ಗಳ ದಾಖಲೆಯನ್ನು ಮುರಿಯಬಲ್ಲ ಆಟಗಾರ ಎಂಬ ಹೆಗ್ಗಳಿಕೆ ಪಡೆದವರು ಶುಭ್‌ಮನ್ ಗಿಲ್. 2023ರಲ್ಲಿ ಗುಜರಾತ್ ನಾಯಕ ಗಿಲ್ 890 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಕಳೆದ ಸೀಸನ್‌ನಲ್ಲಿ 155ರ ಸ್ಟ್ರೈಕ್ ರೇಟ್‌ನಲ್ಲಿ 650 ರನ್ ಗಳಿಸಿದ್ದರು. ಈ ಬಾರಿ ಭಾರತ ಟಿ20 ತಂಡದಿಂದ ಕೈಬಿಟ್ಟ ನೋವಿನಲ್ಲೇ ಗಿಲ್ ಕಣಕ್ಕಿಳಿಯುತ್ತಿದ್ದಾರೆ. ಹಾಗಾಗಿ, ಈ ರೇಸ್‌ನಲ್ಲಿ ಗಿಲ್‌ಗೆ ಗೆಲ್ಲುವ ಅವಕಾಶ ಹೆಚ್ಚಿದೆ.

ಸಾಯಿ ಸುದರ್ಶನ್

ಗುಜರಾತ್‌ನಲ್ಲಿ ಗಿಲ್ ಅವರ ಆರಂಭಿಕ ಜೊತೆಗಾರ ಸಾಯಿ ಸುದರ್ಶನ್. ಕೊಹ್ಲಿ ಮತ್ತು ರಾಹುಲ್ ಅವರಂತೆ ಸಾಯಿ ಕೂಡ ಸ್ಥಿರತೆಗೆ ಮತ್ತೊಂದು ಹೆಸರು. ಕಳೆದ ಸೀಸನ್‌ನ (2025) ಆರೆಂಜ್ ಕ್ಯಾಪ್ ವಿನ್ನರ್ ಇವರೇ. ಈ ಎಡಗೈ ಬ್ಯಾಟರ್ 2025ರಲ್ಲಿ 156ರ ಸ್ಟ್ರೈಕ್ ರೇಟ್‌ನಲ್ಲಿ 759 ರನ್ ಗಳಿಸಿದ್ದರು. ದೇಶೀಯ ಕ್ರಿಕೆಟ್‌ನಲ್ಲಿನ ಭರ್ಜರಿ ಫಾರ್ಮ್‌ನ ಆತ್ಮವಿಶ್ವಾಸದೊಂದಿಗೆ ಸಾಯಿ ಈ ಬಾರಿ ಕಣಕ್ಕಿಳಿಯಲಿದ್ದಾರೆ.

ಸೂರ್ಯಕುಮಾರ್ ಯಾದವ್

2010ರಲ್ಲಿ ಸಚಿನ್ ತೆಂಡೂಲ್ಕರ್ ನಂತರ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರೆಂಜ್ ಕ್ಯಾಪ್ ಬಂದಿಲ್ಲ. ಆ ಕೊರಗನ್ನು ನೀಗಿಸಬಲ್ಲ ಆಟಗಾರ ಯಾರು ಎಂಬ ಪ್ರಶ್ನೆಗೆ ಸೂರ್ಯಕುಮಾರ್ ಯಾದವ್ ಉತ್ತರ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನ ಸಾಧಾರಣವಾಗಿದ್ದರೂ, ಐಪಿಎಲ್‌ನಲ್ಲಿ ಮಾತ್ರ ಸೂರ್ಯ ಅಸಾಧಾರಣ ಫಾರ್ಮ್ ಪ್ರದರ್ಶಿಸುತ್ತಾರೆ. 2025ರಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಎರಡಂಕಿ ದಾಟಿದ್ದ ಸೂರ್ಯ, 65ರ ಸರಾಸರಿ ಮತ್ತು 167ರ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 717 ರನ್ ಚಚ್ಚಿದ್ದರು.

ಯಶಸ್ವಿ ಜೈಸ್ವಾಲ್

ಕಡಿಮೆ ಸಮಯದಲ್ಲಿ ಭಾರತದ ಭವಿಷ್ಯದ ತಾರೆ ಎಂಬ ಹೆಸರು ಗಳಿಸಿದ ಯಶಸ್ವಿ ಜೈಸ್ವಾಲ್, ರಾಜಸ್ಥಾನ ರಾಯಲ್ಸ್‌ನ ಓಪನರ್. ರಾಜಸ್ಥಾನ್ ಕಪ್ ಗೆಲ್ಲುವ ಸಾಧ್ಯತೆಗಳಲ್ಲಿ ಜೈಸ್ವಾಲ್ ಫಾರ್ಮ್ ನಿರ್ಣಾಯಕ ಪಾತ್ರ ವಹಿಸಲಿದೆ. ಬಹುಶಃ, ರಿಯಾನ್ ಪರಾಗ್ ಅವರ ತಂಡದಲ್ಲಿ ಸಂಪೂರ್ಣವಾಗಿ ನಂಬಿಕೆ ಇಡಬಹುದಾದ ಏಕೈಕ ಆಟಗಾರ ಜೈಸ್ವಾಲ್. ಕಳೆದ ಮೂರು ಆವೃತ್ತಿಗಳಲ್ಲಿ ಜೈಸ್ವಾಲ್ ಮಾಜಿ ಚಾಂಪಿಯನ್ನರಿಗಾಗಿ 1619 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು 12 ಅರ್ಧಶತಕಗಳು ಸೇರಿವೆ.

ಶ್ರೇಯಸ್ ಅಯ್ಯರ್ - ಋತುರಾಜ್ ಗಾಯಕ್ವಾಡ್

ಈ ರೇಸ್‌ನಲ್ಲಿ ಇಬ್ಬರು ಕ್ಯಾಪ್ಟನ್‌ಗಳೂ ಇದ್ದಾರೆ. ಪಂಜಾಬ್ ಕಿಂಗ್ಸ್‌ನ ಶ್ರೇಯಸ್ ಅಯ್ಯರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ಋತುರಾಜ್ ಗಾಯಕ್ವಾಡ್. 2021ರಿಂದ ಋತುರಾಜ್ ಚೆನ್ನೈ ಬ್ಯಾಟಿಂಗ್‌ನ ಬೆನ್ನೆಲುಬು. 2021ರಲ್ಲಿ ಅತಿ ಹೆಚ್ಚು ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದರು. ಕಳೆದ ಸೀಸನ್‌ನಲ್ಲಿ ಗಾಯದ ಕಾರಣದಿಂದ ಹೊರಗುಳಿದಿದ್ದ ಬೇಸರವನ್ನು ಈ ಬಾರಿ ತೀರಿಸಿಕೊಳ್ಳಬೇಕಿದೆ. ಇತ್ತ, ಶ್ರೇಯಸ್ ಅಯ್ಯರ್ ಪಂಜಾಬ್ ನಾಯಕರಾದ ಮೊದಲ ಸೀಸನ್‌ನಲ್ಲೇ 604 ರನ್ ಗಳಿಸಿ ಮಿಂಚಿದ್ದರು. ಸ್ಥಿರತೆಯೇ ಶ್ರೇಯಸ್‌ಗೆ ಪ್ಲಸ್ ಪಾಯಿಂಟ್.

ಇವರಲ್ಲದೆ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಟ್ರಾವಿಸ್ ಹೆಡ್, ಮತ್ತು ವೈಭವ್ ಸೂರ್ಯವಂಶಿ ಅವರಂತಹ ಕೆಲವು ಆಟಗಾರರು ಕೂಡ ಈ ರೇಸ್‌ನಲ್ಲಿದ್ದಾರೆ. ಈ ಬಾರಿಯ ಯಾವ ಬ್ಯಾಟರ್ ಆರೆಂಜ್ ಕ್ಯಾಪ್ ಗೆಲ್ಲಬಹುದು ಎನ್ನುವುದನ್ನು ಕಮೆಂಟ್ ಮಾಡಿ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್‌ ಕ್ರೇಜ್‌ಗೆ ಕಂಗಾಲಾದ ಬಾಂಗ್ಲಾದೇಶ! ಐಪಿಎಲ್ ಪ್ರಸಾರಕ್ಕೆ ಗ್ರೀನ್ ಸಿಗ್ನಲ್! ನಿಷೇಧ ಹಿಂಪಡೆದ ಬಾಂಗ್ಲಾ ಸರ್ಕಾರ
ಆರ್‌ಸಿಬಿಯ ಮೊದಲ ಪಂದ್ಯಕ್ಕೆ ಕನ್ನಡದಲ್ಲೇ ಶುಭ ಹಾರೈಸಿದ ವಿಜಯ್ ಮಲ್ಯ! ಬೆಂಗಳೂರು ಫ್ಯಾನ್ಸ್ ಫುಲ್ ಖುಷ್