IPL 2024: ಆರೆಂಜ್ ಆರ್ಮಿ ಎದುರು ಹೀನಾಯ ಸೋಲು ಕಂಡ ಡೆಲ್ಲಿ ಕ್ಯಾಪಿಟಲ್ಸ್..!

By Naveen KodaseFirst Published Apr 20, 2024, 11:19 PM IST
Highlights

ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಗೆಲ್ಲಲು 267 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ಮೊದಲ ಓವರ್‌ನಲ್ಲೇ ಇಂಪ್ಯಾಕ್ಟ್ ಆಟಗಾರ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು. ಪೃಥ್ವಿ 5 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ನವದೆಹಲಿ(ಏ.20): ಟ್ರಾವಿಸ್ ಹೆಡ್, ಶಹಬಾಜ್ ಅಹಮದ್ ಸ್ಪೋಟಕ ಅರ್ಧಶತಕ, ಅಭಿಷೇಕ್ ಶರ್ಮಾ ಮಿಂಚಿನ ಬೌಲಿಂಗ್ ಹಾಗೂ ಟಿ ನಟರಾಜನ್ ಮಾರಕ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸನ್‌ರೈಸರ್ಸ್ ಹೈದರಾಬಾದ್ ತಂಡವು 67 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿತು. ಗೆಲ್ಲಲು 267 ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 199 ರನ್‌ಗಳಿಗೆ ಸರ್ವಪತನ ಕಂಡಿತು.

ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಗೆಲ್ಲಲು 267 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ಮೊದಲ ಓವರ್‌ನಲ್ಲೇ ಇಂಪ್ಯಾಕ್ಟ್ ಆಟಗಾರ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು. ಪೃಥ್ವಿ 5 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಕೇವಲ 1 ರನ್ ಗಳಿಸಿ ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಇದು ಸನ್‌ರೈಸರ್ಸ್ ಹೈದರಾಬಾದ್ ಪರ ಭುವನೇಶ್ವರ್ ಕುಮಾರ್ ಕಬಳಿಸಿದ 150ನೇ ವಿಕೆಟ್ ಎನಿಸಿಕೊಂಡಿತು.

IPL 2024 ಸನ್‌ರೈಸರ್ಸ್ ಹೈದರಾಬಾದ್ ಎದುರು ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ

ಅತಿವೇಗದ ಅರ್ಧಶತಕ ಸಿಡಿಸಿದ ಜೇಕ್‌ ಫ್ರೇಸರ್‌: ಆಸ್ಟ್ರೇಲಿಯಾದ ಯುವ ಪ್ರತಿಭಾನ್ವಿತ ಬ್ಯಾಟರ್ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್ ಮತ್ತೊಮ್ಮೆ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದರು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್, ವಾಷಿಂಗ್ಟನ್ ಸುಂದರ್‌ಗೆ ತಲಾ 3 ಬೌಂಡರಿ ಹಾಗೂ ಸಿಕ್ಸರ್ ಸಹಿತ 30 ರನ್ ಸಿಡಿಸಿದರು. ಇದಾದ ಬಳಿಕವೂ ಅಬ್ಬರಿಸಿದ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್, ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅತಿವೇಗವಾಗಿ ಫಿಫ್ಟಿ ಬಾರಿಸಿದ ದಾಖಲೆ ನಿರ್ಮಿಸಿದರು. ಇದಕ್ಕೂ ಮೊದಲು ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ತಲಾ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.

A happy bowler and a happy captain!

T Natarajan finishes with bowling figures of 4-19 including a maiden 🫡

Scorecard ▶️ https://t.co/LZmP9Tevto | pic.twitter.com/fdjlubQLsj

— IndianPremierLeague (@IPL)

ಮೂರನೇ ವಿಕೆಟ್‌ಗೆ ಅಭಿಷೇಕ್ ಪೋರೆಲ್ ಹಾಗೂ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್ ಜೋಡಿ ಕೇವಲ 30 ಎಸೆತಗಳಲ್ಲಿ 84 ರನ್‌ಗಳ ಜತೆಯಾಟವಾಡುವ ಮೂಲಕ ಡೆಲ್ಲಿ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿತು. ಆದರೆ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಮಯಾಂಕ್ ಮಾರ್ಕಂಡೆ ಯಶಸ್ವಿಯಾದರು. ಮಾರ್ಕಂಡೆಗೆ ಹ್ಯಾಟ್ರಿಕ್ ಸಿಡಿಸಿದ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್ 18 ಎಸೆತಗಳಲ್ಲಿ 5 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 65 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. 

ಐಪಿಎಲ್‌ನಲ್ಲಿ ಕ್ರಿಸ್ ಗೇಲ್‌ ಅಪರೂಪದ ದಾಖಲೆ ಮುರಿದ ಎಂ ಎಸ್ ಧೋನಿ..!

ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಅಭಿಷೇಕ್ ಪೋರೆಲ್ ಕೂಡಾ ಮಯಾಂಕ್ ಮಾರ್ಕಂಡೆಗೆ ವಿಕೆಟ್ ಒಪ್ಪಿಸಿದರು. ಅಭಿಷೇಕ್ ಕೇವಲ 22 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 42 ರನ್ ಗಳಿಸಿ ಸ್ಟಂಪೌಟ್ ಆಗಿ ಪೆವಿಲಿಯನ್ ಸೇರಿದರು.

ಈ ಜೋಡಿ ಬೇರ್ಪಡುತ್ತಿದ್ದಂತೆಯೇ ಡೆಲ್ಲಿ ತಂಡವು ಸೋಲಿನತ್ತ ಮುಖ ಮಾಡಿತು. ಟ್ರಿಸ್ಟನ್ ಸ್ಟಬ್ಸ್‌ 10 ರನ್ ಗಳಿಸಿ ನಿತೀಶ್ ರೆಡ್ಡಿಗೆ ವಿಕೆಟ್ ಒಪ್ಪಿಸಿದರೆ, ಲಲಿತ್ ಯಾದವ್ ಕೇವಲ 7 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಇನ್ನು ಕೊನೆಯಲ್ಲಿ ನಾಯಕ ರಿಷಭ್ ಪಂತ್ 44 ರನ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಸನ್‌ರೈಸರ್ಸ್ ಹೈದರಾಬಾದ್ ಪರ ಟಿ ನಟರಾಜನ್ 19 ರನ್ ನೀಡಿ 4 ವಿಕೆಟ್ ಪಡೆದರೆ, ನಿತೀಶ್ ರೆಡ್ಡಿ, ಮಯಾಂಕ್ ಮಾರ್ಕಂಡೆ ತಲಾ 2 ವಿಕೆಟ್ ಪಡೆದರು. ಇನ್ನು ವಾಷಿಂಗ್ಟನ್ ಸುಂದರ್ ಹಾಗೂ ಭುವನೇಶ್ವರ್ ಕುಮಾರ್ ಒಂದೊಂದು ವಿಕೆಟ್ ಪಡೆದರು.

ಇನ್ನು ಇದಕ್ಕೂ ಮೊದಲು ಟಾಸ್ ಬ್ಯಾಟಿಂಗ್ ಮಾಡಲಿಳಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ವಿಸ್ಪೋಟಕ ಆರಂಭವನ್ನೇ ಪಡೆಯಿತು. ಟ್ರಾವಿಸ್ ಹೆಡ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಮೊದಲ 5 ಓವರ್‌ನಲ್ಲೇ ನೂರರ ಗಡಿ ದಾಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪವರ್‌ಪ್ಲೇನಲ್ಲಿ 125 ರನ್ ಸಿಡಿಸುವ ಮೂಲಕ, ಐಪಿಎಲ್‌ ಇತಿಹಾಸದಲ್ಲೇ ಪವರ್‌ಪ್ಲೇ ಓವರ್‌ನಲ್ಲಿ ಗರಿಷ್ಠ ರನ್ ಕಲೆಹಾಕಿದ ಹೊಸ ದಾಖಲೆ ಬರೆಯಿತು. 

ಅಭಿಷೇಕ್ ಶರ್ಮಾ ಕೇವಲ 12 ಎಸೆತಗಳಲ್ಲಿ 46 ರನ್ ಸಿಡಿಸಿದರೆ, ಟ್ರಾವಿಸ್ ಹೆಡ್ ಕೇವಲ 32 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 89 ರನ್ ಸಿಡಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ರೆಡ್ಡಿ 37 ರನ್ ಬಾರಿಸಿದರೆ, ಕೊನೆಯಲ್ಲಿ ಶಹಬಾಜ್ ಅಹಮದ್ ಅಜೇಯ 59 ರನ್ ಸಿಡಿಸಿದರು. ಅಂತಿಮವಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 266 ರನ್ ಕಲೆಹಾಕಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಗರಿಷ್ಠ ಮೊತ್ತ ಕಲೆಹಾಕಿದ ಸಾಧನೆ ಮಾಡಿತು.
 

click me!