IPL 2024 ಲಖನೌ ಶಿಸ್ತಬದ್ದ ದಾಳಿಗೆ ಮುಂಬೈ ಕಂಗಾಲು..! ಸಾಧಾರಣ ಮೊತ್ತ ಕಲೆಹಾಕಿದ ಪಾಂಡ್ಯ ಪಡೆ

By Naveen Kodase  |  First Published Apr 30, 2024, 9:28 PM IST

ಇಲ್ಲಿನ ಏಕಾನ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಮುಂಬೈ ಇಂಡಿಯನ್ಸ್ ತಂಡವು ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಬರ್ತ್‌ ಡೇ ಬಾಯ್ ರೋಹಿತ್ ಶರ್ಮಾ ಕೇವಲ 4 ರನ್ ಗಳಿಸಿ ಮೊಹ್ಸಿನ್ ಖಾನ್‌ಗೆ ವಿಕೆಟ್ ಒಪ್ಪಿಸಿದರು.


ಲಖನೌ(ಏ.30): ಲಖನೌ ಸೂಪರ್ ಜೈಂಟ್ಸ್ ಬೌಲರ್‌ಗಳ ಕರಾರುವಕ್ಕಾದ ದಾಳಿಗೆ 5 ಬಾರಿಯ ಚಾಂಪಿಯ್ ಮುಂಬೈ ಇಂಡಿಯನ್ಸ್ ತತ್ತರಿಸಿ ಹೋಗಿದೆ. ಇಶಾನ್ ಕಿಶನ್ ಹಾಗೂ ನೆಹಾಲ್ ವದೇರಾ ಸಮಯೋಚಿತ ಬ್ಯಾಟಿಂಗ್ ಹೊರತಾಗಿಯೂ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 145 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿದೆ. 

ಇಲ್ಲಿನ ಏಕಾನ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಮುಂಬೈ ಇಂಡಿಯನ್ಸ್ ತಂಡವು ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಬರ್ತ್‌ ಡೇ ಬಾಯ್ ರೋಹಿತ್ ಶರ್ಮಾ ಕೇವಲ 4 ರನ್ ಗಳಿಸಿ ಮೊಹ್ಸಿನ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಸೂರ್ಯಕುಮಾರ್ ಯಾದವ್ ಕೇವಲ 10 ರನ್ ಗಳಿಸಿ ಮಾರ್ಕಸ್ ಸ್ಟೋಯ್ನಿಸ್‌ಗೆ ವಿಕೆಟ್ ಒಪ್ಪಿಸಿದರು. ತಿಲಕ್ ವರ್ಮಾ 7 ರನ್ ಗಳಿಸಿ ರನೌಟ್ ಆದರೆ, ನಾಯಕ ಹಾರ್ದಿಕ್ ಪಾಂಡ್ಯ ಶೂನ್ಯ ಸುತ್ತಿ ನವೀನ್ ಉಲ್‌ ಹಕ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಪರಿಣಾಮ ಮುಂಬೈ ಇಂಡಿಯನ್ಸ್ ತಂಡವು 27 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಯಿತು.

Tap to resize

Latest Videos

ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಹಾಗೂ ನೆಹಾಲ್ ವದೇರಾ ಆಸರೆಯಾದರು. ಸಾಕಷ್ಟು ರಕ್ಷಣಾತ್ಮಕ ಅಟವಾಡಿದ ಇಶಾನ್ ಕಿಶನ್ 36 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 32 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ನೆಹಾಲ್ ವದೇರಾ 41 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 46 ರನ್ ಗಳಿಸಿ ಮೊಹ್ಸಿನ್ ಖಾನ್‌ಗೆ ಎರಡನೇ ಬಲಿಯಾದರು. 

ಇನ್ನು ಕೊನೆಯಲ್ಲಿ ಟಿಮ್ ಡೇವಿಡ್ ಕೇವಲ 18 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 35 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 140ರ ಗಡಿ ದಾಟಿಸಿದರು. 

ಲಖನೌ ಸೂಪರ್ ಜೈಂಟ್ಸ್ ಪರ ಮೊಹ್ಸಿನ್ ಖಾನ್ 2 ವಿಕೆಟ್ ಪಡೆದರೆ, ಮಾರ್ಕಸ್ ಸ್ಟೋಯ್ನಿಸ್, ನವೀನ್ ಉಲ್ ಹಕ್, ಮಯಾಂಕ್ ಯಾದವ್ ಹಾಗೂ ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.

click me!