
ಮುಂಬೈ (ಏ. 21): ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ (Mumbai Indians) ತಂಡ 15ನೇ ಆವೃತ್ತಿಯ ಐಪಿಎಲ್ ನ (IPL 2022) ತನ್ನ 7ನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸಿದೆ. ಮುಂಬೈ ಇಂಡಿಯನ್ಸ್ ರೀತಿಯೇ ನಿರ್ವಹಣೆ ತೋರಿರುವ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸಾಧಾರಣ ಮೊತ್ತದ ಗುರಿ ನೀಡಿದೆ.
ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಹಾಲಿ ಐಪಿಎಲ್ ನ ಮೆಗಾ ಮ್ಯಾಚ್ ನಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಬೌಲಿಂಗ್ ಆಯ್ದುಕೊಂಡಿತು. ಯುವ ವೇಗಿ ಮುಖೇಶ್ ಚೌಧರಿ (19ಕ್ಕೆ 3) ಸಾಹಸಿಕ ಬೌಲಿಂಗ್ ದಾಳಿಯ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ನ (MI) ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು 7 ವಿಕೆಟ್ ಗೆ 155 ರನ್ ಗಳಿಗೆ ಕಟ್ಟಿಹಾಕಲು ಯಶಸ್ವಿಯಾಯಿತು. ಮುಂಬೈ ಇಂಡಿಯನ್ಸ್ ಪರವಾಗಿ ಹೋರಾಟ ತೋರಿದ ತಿಲಕ್ ವರ್ಮ (51 ರನ್, 43 ಎಸೆತ, 3 ಬೌಂಡರಿ, 2 ಸಿಕ್ಸರ್ಸ) ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ನೆರವಾದರು.
ಮೊದಲ ಓವರ್ ನಲ್ಲಿ ಮುಖೇಶ್ ಚೌಧರಿ (Mukesh Choudhary) ಮಾರಕ ದಾಳಿ ಮುಂಬೈ ಇಂಡಿಯನ್ಸ್ ತಂಡವನ್ನು ಕಂಗೆಡಿಸಿತು. ಇನ್ ಸ್ವಿಂಗರ್ ಆಗಿದ್ದ ಇನ್ನಿಂಗ್ಸ್ ನ ಮೊದಲ ಎಸೆತವನ್ನು ರೋಹಿತ್ ಶರ್ಮ ಸಲೀಸಾಗಿ ಬಿಟ್ಟರೆ, ಲೆಂಥ್ ಬಾಲ್ ಇನ್ ಸ್ವಿಂಗರ್ ಆಗಿದ್ದ 2ನೇ ಎಸೆತವನ್ನು ಬಾರಿಸಲು ಯತ್ನಿಸಿ ರೋಹಿತ್ ಶರ್ಮ, ಮಿಡ್ ಆನ್ ನಲ್ಲಿದ್ದ ಮಿಚೆಲ್ ಸ್ಯಾಂಟ್ನರ್ ಗೆ ಕ್ಯಾಚ್ ನೀಡಿದರು. ಆದರೆ, ಅವರ ಆರಂಭಿಕ ಓವರ್ ನ ಆರ್ಭಟ ಇಲ್ಲಿಗೇ ಮುಕ್ತಾಯವಾಗಲಿಲ್ಲ. ಇಶಾನ್ ಕಿಶನ್ ಗೆ ಅತ್ಯಂತ ಪರ್ಫೆಕ್ಟ್ ಆದ ಯಾರ್ಕರ್ ಎಸೆದ ಮುಖೇಶ್ ಚೌಧರಿ ಅದಕ್ಕೆ ಫಲ ಪಡೆದರು. ಇದರಿಂದಾಗಿ ಮುಂಬೈ ಇಂಡಿಯನ್ಸ್ ಇಬ್ಬರೂ ಆರಂಭಿಕರನ್ನು ಸೊನ್ನೆಗೆ ಕಳೆದುಕೊಂಡಿತು.
2ನೇ ಓವರ್ ನ ವೇಳೆಗೆ ಮುಂಬೈ ತಂಡ ನಾಲ್ಕು ವಿಕೆಟ್ ಕಳೆದುಕೊಳ್ಳುವ ಹಾದಿಯಲ್ಲಿತ್ತು. ಆದರೆ, ಎಂಎಸ್ ಧೋನಿ, ಸೂರ್ಯಕುಮಾರ್ ಯಾದವ್ ಅವರ ಸ್ಟಂಪಿಂಗ್ ಅವಕಾಶ ಕೈಚೆಲ್ಲಿದರೆ, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೇವಿಸ್ ಅವರ ಕ್ಯಾಚ್ ಕೈಚೆಲ್ಲಿದರು. ಈ ಎರಡೂ ಚಾನ್ಸ್ ಗಳನ್ನು ಸ್ಪಿನ್ನರ್ ಮಿಚೆನ್ ಸ್ಯಾಂಟ್ನರ್ ಸೃಷ್ಟಿಸಿದ್ದರು. ಡೆವಾಲ್ಡ್ ಬ್ರೇವಿಸ್ ಇದರ ಲಾಭ ಪಡೆದುಕೊಳ್ಳಲು ವಿಫಲವಾದರು. 7 ಎಸೆತಗಳಲ್ಲಿ 4 ರನ್ ಬಾರಿಸಿದ ಬೇಬಿ ಎಬಿ, 3ನೇ ಓವರ್ ನ ಕೊನೇ ಎಸೆತದಲ್ಲಿ ಮುಖೇಶ್ ಚೌಧರಿಗೆ ವಿಕೆಟ್ ನೀಡಿದರು. ಈ ವೇಳೆ ಮುಂಬೈ 29 ರನ್ ಬಾರಿಸಿತ್ತು.
ಒಂದೆಡೆ ಮುಂಬೈ ಪರವಾಗಿ ರನ್ ಬಾರಿಸುತ್ತಿದ್ದ ಸೂರ್ಯಕುಮಾರ್ ಯಾದವ್ 32 ರನ್ (21 ಎಸೆತ, 3 ಬೌಂಡರಿ, 1 ಸಿಕ್ಸರ್) ಬಾರಿಸಿ 8ನೇ ಓವರ್ ನಲ್ಲಿ ಮುಖೇಶ್ ಚೌಧರಿಗೆ ಕ್ಯಾಚ್ ನೀಡಿ ಹೊರನಡೆದರು. ಈ ಹಂತದಲ್ಲಿ ಮುಂಬೈ ಇಂಡಿಯನ್ಸ್ 47 ರನ್ ಬಾರಿಸಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. 5ನೇ ವಿಕೆಟ್ ಗೆ ಜೊತೆಯಾದ ತಿಲಕ್ ವರ್ಮ ಹಾಗೂ ಹೃತಿಕ್ ಶೋಕೇನ್ (25 ರನ್, 25 ಎಸೆತ, 3 ಬೌಂಡರಿ) 28 ರನ್ ಗಳ ಜೊತೆಯಾಟವಾಡಿ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ ಈ ಹೋರಾಟದ ಜೊತೆಯಾಟಕ್ಕೆ ಡ್ವೇನ್ ಬ್ರಾವೋ ಕಡಿವಾಣ ಹಾಕಿದರು. ಉತ್ತಮವಾಗಿ ಆಡುತ್ತಿದ್ದ ಹೃತಿಕ್, ಬ್ರಾವೋ ಎಸೆತದಲ್ಲಿ ಉತ್ತಪ್ಪಗೆ ಕ್ಯಾಚ್ ನೀಡಿ ನಿರ್ಗಮಿಸಿದರೆ, ಅನುಭವಿ ಕೈರಾನ್ ಪೊಲ್ಲಾರ್ಡ್ (14) ಮತ್ತೊಮ್ಮೆ ವೈಫಲ್ಯ ಕಂಡರು. ಆದರೆ, ತಂಡದ ಮೊತ್ತ 110ರ ಗಡಿ ದಾಟುವವರೆಗೆ ಇವರು ಕ್ರೀಸ್ ನಲ್ಲಿದ್ದರು. ಕೈರಾನ್ ಪೊಲ್ಲಾರ್ಡ್ ಹಾಗೂ ಡೇನಿಯಲ್ ಸ್ಯಾಮ್ಸ್ 9 ರನ್ ಗಳ ಅಂತರದಲ್ಲಿ ಡಗ್ ಔಟ್ ಸೇರಿಕೊಳ್ಳುವುದರೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ದೊಡ್ಡ ಗುರಿಯ ಆಸೆ ಕಮರಿತು.
14ನೇ ಬಾರಿಗೆ ಸೊನ್ನೆ ಸುತ್ತಿದ ರೋಹಿತ್ ಶರ್ಮ: ರೋಹಿತ್ ಶರ್ಮ ಐಪಿಎಲ್ ನಲ್ಲಿ ಗರಿಷ್ಠ ಬಾರಿ ಸೊನ್ನೆಗೆ ಔಟಾದ ಬ್ಯಾಟ್ಸ್ ಮನ್ ಎನಿಸಿಕೊಂಡರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅವರ ಡಕ್, ಐಪಿಎಲ್ ನಲ್ಲಿ 14ನೇ ಶೂನ್ಯ ಎನಿಸಿದೆ. ಒಟ್ಟಾರೆ ಐಪಿಎಲ್ ನ 220 ಪಂದ್ಯಗಳಿಂದ 14 ಬಾರಿ ಸೊನ್ನೆ ಸುತ್ತಿದ್ದಾರೆ. ಪೀಯುಷ್ ಚಾವ್ಲಾ, ಹರ್ಭಜನ್ ಸಿಂಗ್, ಮಂದೀಪ್ ಸಿಂಗ್ ಹಾಗೂ ಪಾರ್ಥಿವ್ ಪಟೇಲ್ ಜಂಟಿ 2ನೇ ಸ್ಥಾನದಲ್ಲಿದ್ದಯ, 13 ಬಾರಿ ಸೊನ್ನೆಗೆ ಔಟ್ ಆಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.