
ನವದೆಹಲಿ(ಮಾ.15): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಶೇನ್ ವಾಟ್ಸನ್ (Shane Watson), ಮುಂಬರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಸಹಾಯಕ ಕೋಚ್ ಆಗಿ ನೇಮಕವಾಗಿದ್ದಾರೆ. ಇದೀಗ 40 ವರ್ಷದ ವಾಟ್ಸನ್, ಹೆಡ್ ಕೋಚ್ ರಿಕಿ ಪಾಂಟಿಂಗ್, ಪ್ರವೀಣ್ ಆಮ್ರೆ(ಸಹಾಯಕ ಕೋಚ್), ಅಜಿತ್ ಅಗರ್‌ಕರ್(ಸಹಾಯಕ ಕೋಚ್) ಹಾಗೂ ಜೇಮ್ಸ್ ಹೋಪ್ಸ್(ಬೌಲಿಂಗ್ ಕೋಚ್) ಅವರನ್ನೊಳಗೊಂಡ ಕೋಚ್ ಪಡೆ ಸೇರಿಕೊಂಡಿದ್ದಾರೆ.
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿ ನೇಮಕವಾದ ಬಳಿಕ ಮಾತನಾಡಿದ ಶೇನ್ ವಾಟ್ಸನ್, ಐಪಿಎಲ್ ಜಗತ್ತಿನ ಅತ್ಯುತ್ತಮ ಟಿ20 ಟೂರ್ನಮೆಂಟ್ ಆಗಿದೆ. ಆಟಗಾರನಾಗಿ ನನಗೆ ಐಪಿಎಲ್‌ನಲ್ಲಿ ಸಾಕಷ್ಟು ಅವಿಸ್ಮರಣೀಯ ನೆನಪುಗಳಿವೆ. ಅವುಗಳಲ್ಲಿ ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರನಾಗಿ 2008ರಲ್ಲಿ ಚೊಚ್ಚಲ ಆವೃತ್ತಿಯ ಐಪಿಎಲ್ ಟ್ರೋಫಿಯನ್ನು ಜಯಿಸಿದ್ದು, ಹಾಗೂ ಆರ್‌ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದು ಒಳ್ಳೆಯ ಅನುಭವ ಎಂದು ವಾಟ್ಸನ್ ಹೇಳಿದ್ದಾರೆ.
ಮೊದಲೇ ಹೇಳಿದಂತೆ ಆಟಗಾರನಾಗಿ ನನಗೆ ಸಾಕಷ್ಟು ಸ್ಮರಣೀಯ ನೆನಪುಗಳು ಐಪಿಎಲ್‌ನಲ್ಲಿವೆ, ಇದೀಗ ಕೋಚ್ ಅಗಿ ಕಾರ್ಯನಿರ್ವಹಿಸುವ ಅವಕಾಶ ಬಂದೊದಗಿದೆ. ಅದರಲ್ಲೂ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ (Ricky Ponting) ಅಡಿಯಲ್ಲಿ ಕೆಲಸ ಮಾಡುವುದು ನನ್ನ ಅದೃಷ್ಟವೆಂದು ಭಾವಿಸುತ್ತೇನೆ. ಒಬ್ಬ ಯಶಸ್ವಿ ನಾಯಕನಾಗಿ ಹಾಗೂ ಕೋಚ್ ಆಗಿ ರಿಕಿ ಪಾಂಟಿಂಗ್ ಓರ್ವ ಅದ್ಭುತ ವ್ಯಕ್ತಿ. ಸದ್ಯ ಪಾಂಟಿಂಗ್ ವಿಶ್ವದ ಶ್ರೇಷ್ಠ ಕೋಚ್‌ಗಳಲ್ಲಿ ಒಬ್ಬರು. ರಿಕಿ ಪಾಂಟಿಂಗ್ ಅಡಿಯಲ್ಲಿ ಹಲವು ವಿಚಾರಗಳನ್ನು ಕಲಿಯಲು ನನಗೆ ಉತ್ತಮ ಅವಕಾಶ ಇದಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಲು ತಾವು ಉತ್ಸುಕರಾಗಿರುವುದಾಗಿ ಶೇನ್ ವಾಟ್ಸನ್ ತಿಳಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಗ್ಗೆ ಹೇಳುವುದಾದರೆ, ಡೆಲ್ಲಿ ಉತ್ತಮ ಆಟಗಾರರನ್ನೊಳಗೊಂಡ ತಂಡವನ್ನು ಹೊಂದಿದೆ. ಇದೀಗ ಚೊಚ್ಚಲ ಐಪಿಎಲ್ ಟ್ರೋಫಿ (IPL Trophy) ಗೆಲ್ಲಲು ಸಜ್ಜಾಗಿದೆ. ನಾನಂತೂ ಈ ಆಟಗಾರರ ಜತೆ ಕೆಲಸ ಮಾಡಲು ತುದಿಗಾಲಿನಲ್ಲಿ ನಿಂತಿದ್ದೇನೆ. ನನ್ನ ಕೈಯಿಂದ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನೆಲ್ಲವನ್ನು ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೊಚ್ಚಲ ಬಾರಿಗೆ ಐಪಿಎಲ್ ಗೆಲ್ಲುವಂತೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಶೇನ್ ವಾಟ್ಸನ್ ಹೇಳಿದ್ದಾರೆ.
Faf du Plessis: ನನ್ನ, ಧೋನಿ ನಾಯಕತ್ವದಲ್ಲಿ ಹೆಚ್ಚು ಸಾಮತ್ಯಯಿದೆ..!
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ (Australian Cricket Team) ಕಂಡ ಶ್ರೇಷ್ಠ ಆಲ್ರೌಂಡರ್‌ಗಳ ಪೈಕಿ ಒಬ್ಬರೆನಿಸಿಕೊಂಡಿರುವ ಶೇನ್ ವಾಟ್ಸನ್, 2007 ಹಾಗೂ 2015ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆದ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದರು. 2012ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶೇನ್ ವಾಟ್ಸನ್, ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು. ಶೇನ್ ವಾಟ್ಸನ್, ಆಸ್ಟ್ರೇಲಿಯಾ ತಂಡದ ಪರ 190 ಏಕದಿನ ಹಾಗೂ 58 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟಾರೆ 7,000ಕ್ಕೂ ಅಧಿಕ ರನ್ ಹಾಗೂ 200ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ.
ಇನ್ನು ಐಪಿಎಲ್‌ನಲ್ಲಿ ಶೇನ್ ವಾಟ್ಸನ್, ರಾಜಸ್ಥಾನ ರಾಯಲ್ಸ್ (Rajasthan Royals), ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ ವಾಟ್ಸನ್ 3,875 ರನ್ ಹಾಗೂ 92 ವಿಕೆಟ್ ಕಬಳಿಸಿದ್ದಾರೆ. ಅದರಲ್ಲೂ 2018ರ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಪಟ್ಟಕ್ಕೇರುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.