* ಹಾಲಿ ಚಾಂಪಿಯನ್ ಸಿಎಸ್‌ಕೆ ಸಾಧನೆಗೆ ಮತ್ತೊಂದು ಗರಿ
* ಭಾರತದ ಅತ್ಯಂತ ಜನಪ್ರಿಯ ಕ್ರೀಡಾ ಫ್ರಾಂಚೈಸಿ ಎನ್ನುವ ಹೆಗ್ಗಳಿಕೆ ಸಿಎಸ್‌ಕೆಯದ್ದು
* ಸಿಎಸ್‌ಕೆ ತಂಡ ಸುಮಾರು 4.9 ಕೋಟಿ ಅಭಿಮಾನಿಗಳನ್ನು ಹೊಂದಿದೆ
ನವದೆಹಲಿ(ಏ.14): ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ) ಭಾರತದ ಅತ್ಯಂತ ಜನಪ್ರಿಯ ಕ್ರೀಡಾ ಫ್ರಾಂಚೈಸಿ ಎಂದು ಸಮೀಕ್ಷೆಯೊಂದು ತಿಳಿಸಿದೆ. ಒರ್‌ಮ್ಯಾಕ್ಸ್ ಮೀಡಿಯಾ ಎನ್ನುವ ಸಂಸ್ಥೆ ನಡೆಸಿದ ಸಮೀಕ್ಷೆಯ ವರದಿ ಪ್ರಕಾರ ಸಿಎಸ್‌ಕೆ ತಂಡ ಸುಮಾರು 4.9 ಕೋಟಿ ಅಭಿಮಾನಿಗಳನ್ನು ಹೊಂದಿದೆ. ಈ ಪೈಕಿ 2.25 ಕೋಟಿ ಮಂದಿ ಸಿಎಸ್‌ಕೆ ತಂಡದ ಅಪ್ಪಟ ಅಭಿಮಾನಿಗಳಾಗಿದ್ದು, ಈ ಸಂಖ್ಯೆ ಭಾರತದಲ್ಲಿರುವ ಒಟ್ಟು ಫುಟ್ಬಾಲ್ ಪ್ರೇಮಿಗಳಷ್ಟು ಎನಿಸಿದೆ.
ಐಪಿಎಲ್ ಇತಿಹಾಸದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದು ಎನಿಸಿಕೊಂಡಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದಷ್ಟೇ ಅಲ್ಲದೇ ಐಪಿಎಲ್‌ನಲ್ಲಿ 10ಕ್ಕಿಂತ ಹೆಚ್ಚುಬಾರಿ ಪ್ಲೇ ಆಫ್ ಪ್ರವೇಶಿಸಿದ ಏಕೈಕ ತಂಡ ಎನ್ನುವ ಹೆಗ್ಗಳಿಕೆ ಕೂಡಾ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿದೆ. ಭಾರತದಲ್ಲಿ ಅಂದಾಜು 12.5 ಕೋಟಿ ಕ್ರಿಕೆಟ್ ಅಭಿಮಾನಿಗಳಿದ್ದು, ದೇಶದ ಅತಿಜನಪ್ರಿಯ ಕ್ರೀಡೆ ಎನಿಸಿದೆ. 2.3 ಕೋಟಿಯಿಂದ 2.8 ಕೋಟಿ ಅಭಿಮಾನಿಗಳನ್ನು ಹೊಂದಿರುವ ಕಬಡ್ಡಿ, ಫುಟ್ಬಾಲ್, ಕುಸ್ತಿ ಕ್ರೀಡೆಗಳು 2ನೇ ಸ್ಥಾನಕ್ಕಾಗಿ ಪೈಪೋಟಿಯಲ್ಲಿವೆ ಎಂದು ಸಮೀಕ್ಷೆ ತಿಳಿಸಿದೆ.
4 ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿದ ಚೆನ್ನೈ: 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ಸಿಎಸ್‌ಕೆ ನಾಯಕತ್ವದಿಂದ ಕೆಳಗಿಳಿದಿದ್ದರು. ಇದರ ಬೆನ್ನಲ್ಲೇ ರವೀಂದ್ರ ಜಡೇಜಾಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. ಆದರೆ ಜಡೇಜಾ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತಾನಾಡಿದ ಮೊದಲ 4 ಪಂದ್ಯಗಳಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿತ್ತು. ಇದಾದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ.
ಹರ್ಷಲ್ ಅನುಪಸ್ಥಿತಿ ನಮ್ಮನ್ನು ಕಾಡಿತು: ಫಾಫ್
ನವಿ ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ವೇಗಿ ಹರ್ಷಲ್ ಪಟೇಲ್ ಅವರ ಅನುಪಸ್ಥಿತಿ ತಂಡವನ್ನು ಬಲವಾಗಿ ಕಾಡಿತು ಎಂದು ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ. ‘ಹರ್ಷಲ್ ಯಾವುದೇ ಹಂತದಲ್ಲಿ ಬೇಕಿದ್ದರೂ ಪಂದ್ಯ ನಮ್ಮ ಪರ ವಾಲುವಂತೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ನಾವು ಡೆತ್ ಓವರ್‌ಗಳಲ್ಲಿ ಬಹಳಷ್ಟು ರನ್ ಬಿಟ್ಟುಕೊಟ್ಟೆವು’ ಎಂದು ಡು ಪ್ಲೆಸಿಸ್ ಪಂದ್ಯದ ಬಳಿಕ ತಿಳಿಸಿದರು. ಸೋದರಿಯ ನಿಧನದಿಂದಾಗಿ ಬಯೋಬಬಲ್ ತೊರೆದಿರುವ ಹರ್ಷಲ್ ಪಟೇಲ್, ತಂಡಕ್ಕೆ ಮರಳಿರುವ ಬಗ್ಗೆ ಮಾಹಿತಿ ಇಲ್ಲ. ಏಪ್ರಿಲ್ 16ರಂದು ಡೆಲ್ಲಿ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಅವರು ಆಡಲಿದ್ದಾರೆಯೇ ಎನ್ನುವ ಬಗ್ಗೆಯೂ ತಂಡ ಇನ್ನೂ ಸ್ಪಷ್ಟನೆ ನೀಡಿಲ್ಲ.
IPL 2022: ನಾನಿನ್ನು ನಾಯಕತ್ವವನ್ನು ಕಲಿಯುತ್ತಿದ್ದೇನೆಂದ ಜಡೇಜಾ..!
ಟಿ20ಯಲ್ಲಿ ರೋಹಿತ್ 10,000 ರನ್: ವಿಶ್ವದ 7ನೇ ಕ್ರಿಕೆಟಿಗ
ಪುಣೆ: ಭಾರತ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ್ದಾರೆ. ಬುಧವಾರ ಪಂಜಾಬ್ ಕಿಂಗ್‌್ಸ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. ಈ ಮೈಲಿಗಲ್ಲು ತಲುಪಿದ ಭಾರತದ 2ನೇ ಹಾಗೂ ವಿಶ್ವದ 7ನೇ ಆಟಗಾರ ಎನ್ನುವ ಹಿರಿಮೆಗೆ ಅವರು ಪಾತ್ರರಾದರು. ರೋಹಿತ್ 375 ಪಂದ್ಯಗಳಲ್ಲಿ 10003 ರನ್ ಗಳಿಸಿದ್ದಾರೆ. ಕ್ರಿಸ್ ಗೇಲ್(14,562 ರನ್), ಶೋಯಿಬ್ ಮಲಿಕ್(11,698), ಪೊಲ್ಲಾರ್ಡ್(11,474), ಫಿಂಚ್(10,499), ಕೊಹ್ಲಿ(10,379), ವಾರ್ನರ್(10,373) ಪಟ್ಟಿಯಲ್ಲಿ ಮೊದಲ 6 ಸ್ಥಾನಗಳಲ್ಲಿದ್ದಾರೆ.