
ಪುಣೆ(ಮೇ.01): ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎಂ.ಎಸ್.ಧೋನಿ ನಾಯಕನಾಗಿ ಮರಳಿದ್ದಾರೆ. 8 ಪಂದ್ಯಗಳ ಬಳಿಕ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಅಖಾಡಕ್ಕೆ ಇಳಿದಿದೆ. ಆದರೆ ಸನ್‌ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದುಕೊಂಡಿದೆ. ಎಸ್ಆರ್‌ಹೆಚ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಈ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಗೆಲುವು ಮರೀಚಿಕೆಯಾಗುತ್ತಿದೆ. 8 ಪಂದ್ಯಗಳಲ್ಲಿ ಕೇವಲ 2 ಗೆಲುವು ಸಾಧಿಸಿದೆ. ಈ ಬಾರಿ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಮುನ್ನಡೆದ ಚೆನ್ನೈ ತಂಡಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿತ್ತು. ಹೀಗಾಗಿ ಜಡ್ಡು, ಮತ್ತೆ ಧೋನಿಗೆ ನಾಯಕತ್ವ ಹಸ್ತಾಂತರಿಸಿದ್ದಾರೆ. ಈ ಆವೃತ್ತಿಯಲ್ಲಿ ಧೋನಿ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯ ಇದಾಗಿದೆ.
ಚೆನ್ನೈ ತಂಡವನ್ನು ಮತ್ತೆ ಗೆಲುವಿನ ಹಳಿಗೆ ತರಲು ಧೋನಿ ಬಿಟ್ಟರೆ ಇನ್ಯಾರಿಗೂ ಸಾಧ್ಯವಿಲ್ಲ. ಈ ರೀತಿಯ ಹಲವು ಸಂದರ್ಭಗಳನ್ನು ಧೋನಿ ಯಶಸ್ವಿಯಾಗಿ ಎದುರಿಸಿದ್ದಾರೆ. ಇತಿಹಾಸ ರಚಿಸಿದ್ದಾರೆ. ಹೀಗಾಗಿ ಈ ಆವೃತ್ತಿಯಲ್ಲಿನ ಆರಂಭಿಕ 8 ಪಂದ್ಯಗಳ ಲೆಕ್ಕ ಒಂದಾದರೆ, ಇಂದಿನಿಂದ ಹೊಸ ಲೆಕ್ಕ.
ಸನ್‌ರೈಸರ್ಸ್ ಹೈದರಾಬಾದ್ ಆರಂಭದಲ್ಲಿ ಸತತ 3 ಪಂದ್ಯ ಸೋತು ಕಂಗಲಾಗಿತ್ತು. ಆದರೆ ಬಳಿಕ ಸತತ ಗೆಲುವಿನ ಮೂಲಕ ಉತ್ತಮ ಸ್ಥಿತಿಯಲ್ಲಿದೆ. ಅಂಕಪಟ್ಟಿಯಲ್ಲಿ ಹೈದರಾಬಾದ್ 4ನೇ ಸ್ಥಾನದಲ್ಲಿದ್ದರೆ, ಚೆನ್ನೈ 9ನೇ ಸ್ಥಾನದಲ್ಲಿದೆ. ಧೋನಿ ನಾಯಕತ್ವದಲ್ಲಿ ಇದೀಗ ಚೆನ್ನೈ ಹೊಸ ಅಧ್ಯಾಯ ಆರಂಭಿಸುವ ವಿಶ್ವಾಸದಲ್ಲಿದೆ.
ಅಂಕಪಟ್ಟಿ:
ಐಪಿಎಲ್ ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಸ್ಥಾನ ಅಲಂಕರಿಸಿದೆ. ಗುಜರಾತ್ 9 ಪಂದ್ಯಗಳಲ್ಲಿ 8 ಗೆಲುವು ಕಂಡಿದೆ. ಇನ್ನು ರಾಜಸ್ಥಾನ ರಾಯಲ್ಸ್ 9 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಲಖನೌ ಸೂಪರ್‌ಜೈಂಟ್ಸ್ 9 ಪಂದ್ಯಗಳಲ್ಲಿ 6 ಗೆಲುವು ಕಂಡಿದೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ 8 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ 4ನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10 ಪಂದ್ಯಗಳನ್ನಾಡಿದ್ದು 5 ಗೆಲುವು 5 ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ 8ರಲ್ಲಿ 4 ಗೆಲುವು ದಾಖಲಿಸಿ 6ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ 7ನೇ ಸ್ಥಾನದಲ್ಲಿದೆ. ಪಂಜಾಬ್ 9 ಪಂದ್ಯಗಳಲ್ಲಿ 4 ಗೆಲುವು ಕಂಡಿದೆ. ಕೋಲ್ಕತಾ ನೈಟ್ ರೈಡರ್ಸ್ 9 ಪಂದ್ಯಗಳಲ್ಲಿ 3 ಗೆಲುವು ದಾಖಲಿಸಿ 8ನೇ ಸ್ಥಾನದಲ್ಲಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ 9ನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 9 ಪಂದ್ಯಗಳಲ್ಲಿ 1 ಗೆಲುವು ಸಾಧಿಸಿ ಕೊನೆಯ ಸ್ಥಾನದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.