ಲಂಕಾ ಎದುರು ಸತತ ನಾಲ್ಕನೇ ಗೆಲುವಿನ ಮೇಲೆ ಕಣ್ಣಿಟ್ಟ ಹರ್ಮನ್‌ಪ್ರೀತ್ ಕೌರ್ ಪಡೆ!

Naveen Kodase, Kannadaprabha News |   | Kannada Prabha
Published : Dec 28, 2025, 09:53 AM IST
Smriti mandhana Shafali Verma

ಸಾರಾಂಶ

ಶ್ರೀಲಂಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ 3-0 ಮುನ್ನಡೆ ಸಾಧಿಸಿರುವ ಭಾರತ ಮಹಿಳಾ ತಂಡ, ಕ್ಲೀನ್‌ ಸ್ವೀಪ್‌ ಮಾಡುವ ಗುರಿ ಹೊಂದಿದೆ. ಭಾನುವಾರ ನಡೆಯಲಿರುವ 4ನೇ ಪಂದ್ಯದಲ್ಲೂ ಗೆದ್ದು, ಟಿ20 ವಿಶ್ವಕಪ್‌ಗೆ ತಮ್ಮ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸಲು ಹರ್ಮನ್‌ಪ್ರೀತ್ ಪಡೆ ಸಜ್ಜಾಗಿದೆ.

ತಿರುವನಂತಪುರಂ: ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಭಾರತ ಮಹಿಳಾ ತಂಡ, ತವರಿನಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡುವ ಗುರಿ ಹೊಂದಿದೆ. 5 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಹೊಂದಿರುವ ಭಾರತ, ಭಾನುವಾರ ನಡೆಯಲಿರುವ 4ನೇ ಪಂದ್ಯದಲ್ಲೂ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದು, ಮತ್ತೊಂದು ಅಧಿಕಾರಯುತ ಪ್ರದರ್ಶನ ತೋರಲು ಕಾತರಿಸುತ್ತಿದೆ. 

ಸಾಂಘಿಕ ಪ್ರದರ್ಶನ ತೋರುತ್ತಿರುವ ಹರ್ಮನ್‌ಪ್ರೀತ್ ಕೌರ ಪಡೆ

ಈ ವರೆಗಿನ ಮೂರೂ ಪಂದ್ಯಗಳಲ್ಲಿ ಎಲ್ಲಾ ಮೂರೂ ವಿಭಾಗಗಳಲ್ಲಿ ಭಾರತ ಮೇಲುಗೈ ಸಾಧಿಸಿದೆ. ರೇಣುಕಾ ಸಿಂಗ್‌ ಠಾಕೂರ್‌ ನೇತೃತ್ವದ ಬೌಲಿಂಗ್‌ ಪಡೆ, ಲಂಕಾಕ್ಕೆ ದೊಡ್ಡ ಮೊತ್ತ ದಾಖಲಿಸಲು ಅವಕಾಶ ನೀಡುತ್ತಿಲ್ಲ. ಸರಣಿಯಲ್ಲಿ ಲಂಕಾದ ಯಾವ ಬ್ಯಾಟರ್‌ನ ವೈಯಕ್ತಿಕ ಮೊತ್ತ 40 ರನ್‌ ದಾಟಿಲ್ಲ. ಇನ್ನು, ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳೇ ಪಂದ್ಯ ಮುಗಿಸುತ್ತಿದ್ದಾರೆ. ಪ್ರಮುಖವಾಗಿ ಶಫಾಲಿ ವರ್ಮಾ ಅತ್ಯುತ್ತಮ ಲಯದಲ್ಲಿದ್ದು, ವಿಶ್ವಕಪ್‌ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ. ಜೆಮಿಮಾ ರೋಡ್ರಿಗ್ಸ್‌ ಸಹ ಈಗಾಗಲೇ ಅರ್ಧಶತಕ ದಾಖಲಿಸಿದ್ದು, ಮತ್ತೊಂದು ದೊಡ್ಡ ಇನ್ನಿಂಗ್ಸ್‌ ನಿರೀಕ್ಷೆಯಲ್ಲಿದ್ದಾರೆ. ಸ್ಮೃತಿ ಮಂಧನಾ 3 ಪಂದ್ಯಗಳಿಂದ 40 ರನ್‌ ದಾಖಲಿಸಿದ್ದು, ಲಯ ಕಂಡುಕೊಳ್ಳಲು ಕಾಯುತ್ತಿದ್ದಾರೆ.

ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌/ಜಿಯೋ ಹಾಟ್‌ಸ್ಟಾರ್‌

ಮಹಿಳಾ ಅಂ.ರಾ.ಟಿ20: ದೀಪ್ತಿ ಶರ್ಮಾ ವಿಶ್ವ ದಾಖಲೆ

ತಿರುವನಂತಪುರಂ: ಮಹಿಳಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ದೀಪ್ತಿ ಶರ್ಮಾ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಶ್ರೀಲಂಕಾ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ 3 ವಿಕೆಟ್‌ ಕಬಳಿಸಿದ ದೀಪ್ತಿ, ಆಸ್ಟ್ರೇಲಿಯಾದ ಮೆಗನ್‌ ಶ್ಯುಟ್‌ರ ದಾಖಲೆ ಸರಿಗಟ್ಟಿದರು.

ದೀಪ್ತಿ ಶರ್ಮಾ 131 ಪಂದ್ಯಗಳಲ್ಲಿ 151 ವಿಕೆಟ್‌ ಕಬಳಿಸಿದರೆ, ಶ್ಯುಟ್‌ 123 ಪಂದ್ಯಗಳಲ್ಲಿ 151 ವಿಕೆಟ್‌ ಪಡೆದಿದ್ದಾರೆ. ದೀಪ್ತಿ ಅಂ.ರಾ. ಕ್ರಿಕೆಟ್‌ನಲ್ಲಿ ಒಟ್ಟಾರೆ 333 ವಿಕೆಟ್‌ ಪಡೆದಿದ್ದು, ಸದ್ಯದಲ್ಲೇ ಜೂಲನ್‌ ಗೋಸ್ವಾಮಿ (355 ವಿಕೆಟ್‌) ಹೆಸರಿನಲ್ಲಿರುವ ವಿಶ್ವ ದಾಖಲೆ ಮುರಿಯುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೌತಮ್ ಗಂಭೀರ್‌ಗೆ ಸಂಕಷ್ಟ? ಭಾರತ ಟೆಸ್ಟ್‌ ತಂಡದ ಕೋಚ್‌ ಆಗಲು ಲಕ್ಷ್ಮಣ್‌ಗೆ ಬಿಸಿಸಿಐ ಆಫರ್‌!
ಎರಡೇ ದಿನದಲ್ಲಿ ಮುಗಿದ ಪಂದ್ಯ: ಕ್ರಿಕೆಟ್‌ ಆಸ್ಟ್ರೇಲಿಯಾಗೆ ಮತ್ತೊಮ್ಮೆ ಭಾರೀ ನಷ್ಟ!