ಫಿಟ್ ಇದ್ರೂ ಜಸ್ಪ್ರೀತ್ ಬುಮ್ರಾ ಎಜ್‌ಬಾಸ್ಟನ್ ಟೆಸ್ಟ್ ಆಡುತ್ತಿಲ್ಲವೇಕೆ? ಕ್ಯಾಪ್ಟನ್ ಗಿಲ್ ಹೇಳಿದ್ದೇನು?

Published : Jul 02, 2025, 04:57 PM IST
Bumrah and Gill

ಸಾರಾಂಶ

ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಕಣಕ್ಕಿಳಿದಿದೆ. ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್‌ಗಾಗಿ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ ಎಂದು ಗಿಲ್ ಸ್ಪಷ್ಟಪಡಿಸಿದ್ದಾರೆ. ಆರಂಭಿಕ ಆಘಾತದ ನಡುವೆಯೂ ಭಾರತ ಸ್ಥಿರವಾಗಿ ರನ್ ಗಳಿಸುತ್ತಿದೆ.

ಬರ್ಮಿಂಗ್‌ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಎಜ್‌ಬಾಸ್ಟನ್‌ನಲ್ಲಿಂದು ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಿವೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಮೊದಲ ಪಂದ್ಯ ಜಯಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿರುವ ಟೀಂ ಇಂಡಿಯಾ ಇಂದು ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ.

ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಜಸ್ಪ್ರೀತ್ ಬುಮ್ರಾ, ಸಾಯಿ ಸುದರ್ಶನ್ ಹಾಗೂ ಶಾರ್ದೂಲ್ ಠಾಕೂರ್ ಅವರನ್ನು ಎರಡನೇ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದ್ದು, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ಆಕಾಶ್‌ದೀಪ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಮಣೆ ಹಾಕಲಾಗಿದೆ. ಈ ಪೈಕಿ ಹೆಚ್ಚು ಗಮನ ಸೆಳೆದದ್ದು ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಕೈಬಿಟ್ಟಿದ್ದು.

ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯದೇ ಹೋದದ್ದು ಸಾಕಷ್ಟು ಅಚ್ಚರಿಗೆ ಕಾರಣವಾಯಿತು. ಈ ಕುರಿತಂತೆ ಟಾಸ್ ವೇಳೆ ನಾಯಕ ಶುಭ್‌ಮನ್ ಗಿಲ್ ಸ್ಪಷ್ಟನೆ ನೀಡಿದ್ದಾರೆ. ಬೆನ್ನು ನೋವಿನಿಂದ ಚೇತರಿಸಿಕೊಂಡ ಬಳಿಕ ಜಸ್ಪ್ರೀತ್ ಬುಮ್ರಾ ಅವರನ್ನು ಸಾಕಷ್ಟು ಎಚ್ಚರಿಕೆಯಿಂದ ನಿರ್ವಹಿಸಲಾಗುತ್ತಿದೆ. ವರ್ಕ್‌ಲೋಡ್ ಮ್ಯಾನೇಜ್‌ ಮಾಡುವ ಉದ್ದೇಶದಿಂದ ಎರಡನೇ ಟೆಸ್ಟ್ ಪಂದ್ಯದಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಶುಭ್‌ಮನ್ ಗಿಲ್ ಹೇಳಿದ್ದಾರೆ. ಈ ಹಿಂದೆ ಟೀಂ ಇಂಡಿಯಾ ಹೆಡ್‌ ಕೋಚ್ ಗೌತಮ್ ಗಂಭೀರ್, ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಕೇವಲ 3 ಪಂದ್ಯಗಳನ್ನು ಮಾತ್ರ ಆಡಲಿದ್ದಾರೆ ಎಂದು ಹೇಳಿದ್ದರು.

'ವರ್ಕ್‌ಲೋಡ್ ಮ್ಯಾನೇಜ್ ಮಾಡುವ ಉದ್ದೇಶದಿಂದ ನಾವು ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಿದ್ದೇವೆ. ನಮಗೆ ಒಂದು ವಾರಗಳ ಕಾಲ ವಿಶ್ರಾಂತಿ ಸಿಕ್ಕಿದೆ. ಇದು ನಮ್ಮ ಪಾಲಿಗೆ ತುಂಬಾ ಮುಖ್ಯವಾದ ಪಂದ್ಯವಾಗಿದೆ. ಆದರೆ ಮೂರನೇ ಟೆಸ್ಟ್ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದ್ದು, ಅಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳಲು ತೀರ್ಮಾನಿಸಿದ್ದೇವೆ' ಎಂದು ಶುಭ್‌ಮನ್ ಗಿಲ್ ಹೇಳಿದ್ದಾರೆ.

ಆರಂಭಿಕ ಆಘಾತದ ಬಳಿಕ ಎಚ್ಚರಿಯ ಆಟ:

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ 15 ರನ್ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ರಾಹುಲ್ ಕೇವಲ 2 ರನ್ ಗಳಿಸಿ ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಹಾಗೂ ಕರುಣ್ ನಾಯರ್ ಎಚ್ಚರಿಕೆಯ ಜತೆಯಾಟವಾಡುತ್ತಿದ್ದಾರೆ. 17 ಓವರ್ ಅಂತ್ಯದ ವೇಳೆಗೆ ಭಾರತ ಒಂದು ವಿಕೆಟ್ ಕಳೆದುಕೊಂಡು 63 ರನ್ ಗಳಿಸಿದೆ. ಕರುಣ್ ನಾಯರ್ 24 ಹಾಗೂ ಯಶಸ್ವಿ ಜೈಸ್ವಾಲ್ 36 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಆಟಗಾರರ ಪಟ್ಟಿ:

ಭಾರತ: ಜೈಸ್ವಾಲ್‌, ರಾಹುಲ್‌, ಕರುಣ್ ನಾಯರ್, ಗಿಲ್‌(ನಾಯಕ), ರಿಷಭ್‌, ನಿತೀಶ್ ಕುಮಾರ್ ರೆಡ್ಡಿ, ಜಡೇಜಾ, ವಾಷಿಂಗ್ಟನ್ ಸುಂದರ್, ಆಕಾಶ್‌ದೀಪ್ ಸಿಂಗ್, ಸಿರಾಜ್‌, ಪ್ರಸಿದ್ಧ್‌.

ಇಂಗ್ಲೆಂಡ್‌: ಜ್ಯಾಕ್‌ ಕ್ರಾವ್ಲಿ, ಬೆನ್‌ ಡಕೆಟ್‌, ಪೋಪ್‌, ರೂಟ್‌, ಬ್ರೂಕ್‌, ಸ್ಟೋಕ್ಸ್(ನಾಯಕ), ಜೆಮೀ ಸ್ಮಿತ್‌, ವೋಕ್ಸ್‌, ಬ್ರೈಡನ್‌ ಕಾರ್ಸ್‌, ಜೋಶ್‌ ಟಂಗ್‌, ಬಶೀರ್‌.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಎಸ್‌ಸಿಎ ಚುನಾವಣೆ: ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ಭಾರತ-ಆಫ್ರಿಕಾ ಫೈನಲ್ ಫೈಟ್: ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?