
ಲಂಡನ್: ಇಂಗ್ಲೆಂಡ್ ವಿರುದ್ಧ ನಿರ್ಣಾಯಕ 5ನೇ ಟೆಸ್ಟ್‌ನಲ್ಲಿ ಭಾರತ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದೆ. ಸ್ಪರ್ಧಾತ್ಮಕ ಪಿಚ್‌ನಲ್ಲಿ 224 ರನ್‌ಗೆ ಆಲೌಟಾದ ಭಾರತ, ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತು. ಆದರೆ ಆತಿಥೇಯ ತಂಡ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಯಶಸ್ವಿಯಾಯಿತು. ತಂಡ 247 ರನ್‌ಗೆ ಆಲೌಟಾಗಿ, 23 ರನ್ ಮುನ್ನಡೆ ಪಡೆಯಿತು. ಉತ್ತಮ ಆರಂಭದ ಮೂಲಕ ಬಾಜ್‌ಬಾಲ್ ಆಟವಾಡುತ್ತಿದ್ದ ಇಂಗ್ಲೆಂಡ್‌ಗೆ ಬ್ರೇಕ್ ಹಾಕುವಲ್ಲಿ ಟೀಂ ಇಂಡಿಯಾ ಬೌಲರ್ಸ್ ಯಶಸ್ವಿಯಾಗಿದ್ದಾರೆ.
ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ, ಆರಂಭಿಕ ಆಘಾತದ ಹೊರತಾಗಿಯು ಅಮೂಲ್ಯ ಮುನ್ನಡೆ ಸಾಧಿಸಿದೆ. ಕೆ ಎಲ್ ರಾಹುಲ್ 7 ಹಾಗೂ ಸಾಯಿ ಸುದರ್ಶನ್ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್, ಆಕರ್ಷಕ ಅರ್ಧಶತಕ ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಜೈಸ್ವಾಲ್ 49 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 51 ರನ್ ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನು ನೈಟ್ ವಾಚ್‌ಮನ್ 4 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಮೊದಲ ದಿನ 6 ವಿಕೆಟ್‌ಗೆ 204 ರನ್ ಗಳಿಸಿದ್ದ ಭಾರತ, 2ನೇ ದಿನ ಕೇವಲ 20 ರನ್ ಸೇರಿಸಿತು. ಅರ್ಧಶತಕ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದ ಕರುಣ್ ನಾಯರ್ 57 ರನ್‌ಗೆ ಔಟಾದರು. ಅವರ ನಿರ್ಗಮನದ ಬಳಿಕ ತಂಡ ಆಲೌಟ್ ಆಗಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಕೊನೆ 6 ರನ್‌ಗೆ 4 ವಿಕೆಟ್ ಉರುಳಿತು. ವಾಷಿಂಗ್ಟನ್ ಸುಂದರ್ 26 ರನ್ ಸಿಡಿಸಿದರು. ಗಸ್ ಆಟ್ಕಿನ್ಸನ್ 5 ವಿಕೆಟ್ ಕಿತ್ತರು.
ಸ್ಫೋಟಕ ಆರಂಭ:
ಬಳಿಕ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಸ್ಫೋಟಕ ಆಟವಾಡಿತು. 7 ಓವರ್‌ಗಳಲ್ಲೇ 50ರ ಗಡಿ ದಾಟಿದ ತಂಡ, 15ನೇ ಓವರ್‌ನಲ್ಲಿ 100 ತಲುಪಿತು. ಬೆನ್ ಡಕೆಟ್ 38 ಎಸೆತಕ್ಕೆ 43, ಜ್ಯಾಕ್ ಕ್ರಾಲಿ 57 ಎಸೆತಕ್ಕೆ 64 ರನ್ ಸಿಡಿಸಿದರು. ಇವರಿಬ್ಬರು ಔಟಾದ ಬಳಿಕ ರನ್ ವೇಗ ಕಡಿಮೆಯಾಯಿತು. ಓಲಿ ಪೋಪ್(22), ಜೋ ರೂಟ್(29) ಹಾಗೂ ಜೇಕಬ್ ಬೆಥೆಲ್(6)ರನ್ನು ಸಿರಾಜ್ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ವೇಗವಾಗಿ ಬ್ಯಾಟ್ ಬೀಸಿದ ಹ್ಯಾರಿ ಬ್ರೂಕ್ 53 ರನ್ ಸಿಡಿಸಿ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಗಾಯಾಳು ಕ್ರಿಸ್ ವೋಕ್ಸ್ ಪಂದ್ಯದಿಂದ ಹೊರಬಿದ್ದ ಕಾರಣ ಬ್ಯಾಟಿಂಗ್‌ಗೆ ಆಗಮಿಸಲಿಲ್ಲ. ಸಿರಾಜ್, ಪ್ರಸಿದ್ಧ್ ಕೃಷ್ಣ ತಲಾ 4 ವಿಕೆಟ್ ಕಿತ್ತರು.
ಸಿರಾಜ್‌ಗೆ 200 ವಿಕೆಟ್
ತಾರಾ ವೇಗಿ ಮೊಹಮ್ಮದ್ ಸಿರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ವಿಕೆಟ್ ಪೂರ್ಣಗೊಳಿಸಿದ್ದು, ಈ ಸಾಧನೆ ಮಾಡಿದ ಭಾರತದ 15ನೇ ವೇಗದ ಬೌಲರ್ ಎನಿಸಿಕೊಂಡರು. ಅವರು ಓಲಿ ಪೋಪ್ ವಿಕೆಟ್ ಕಿತ್ತು ಈ ಮೈಲುಗಲ್ಲು ಸಾಧಿಸಿದರು. 31 ವರ್ಷದ ಸಿರಾಜ್ ಟೆಸ್ಟ್‌ನಲ್ಲಿ 115, ಏಕದಿನದಲ್ಲಿ 71, ಅಂ.ರಾ. ಟಿ20ಯಲ್ಲಿ 14 ವಿಕೆಟ್ ಪಡೆದಿದ್ದಾರೆ.
ತವರಲ್ಲಿ ಗರಿಷ್ಠ ರನ್: ರೂಟ್ ಈಗ ನಂ.2
ತವರು ದೇಶದಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ಜೋ ರೂಟ್ 2ನೇ ಸ್ಥಾನಕ್ಕೇರಿದ್ದಾರೆ. ಅವರು ಇಂಗ್ಲೆಂಡ್‌ನಲ್ಲಿ 7224 ರನ್ ಗಳಿಸಿದ್ದು, ಭಾರತದಲ್ಲಿ 7216 ರನ್ ಸಿಡಿಸಿರುವ ಸಚಿನ್ ತೆಂಡುಲ್ಕರ್‌ರನ್ನು ಹಿಂದಿಕ್ಕಿದರು. ರಿಕಿ ಪಾಂಟಿಂಗ್ ಆಸ್ಟ್ರೇಲಿಯಾದಲ್ಲಿ 7578 ರನ್ ಕಲೆಹಾಕಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
01ನೇ ಬ್ಯಾಟರ್
ಭಾರತ ವಿರುದ್ಧ ಟೆಸ್ಟ್‌ನಲ್ಲಿ 2000+ ರನ್ ಗಳಿಸಿದ ಏಕೈಕ ಆಟಗಾರ ಜೋ ರೂಟ್. ರಿಕಿ ಪಾಂಟಿಂಗ್(1893) 2ನೇ ಸ್ಥಾನದಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.