
ಮುಂಬೈ(ಸೆ.23): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಅಕ್ಟೋಬರ್ 05ರಂದು ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಕಣಕ್ಕಿಳಿಯುವುದರೊಂದಿಗೆ ಟೂರ್ನಿಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಹೀಗಿರುವಾಗಲೇ 2023ರ ವಿಶ್ವಕಪ್ ಗೆಲ್ಲುವವರು ಯಾರು ಎನ್ನುವ ಲೆಕ್ಕಾಚಾರ ಜೋರಾಗಿದೆ. ಇದೀಗ ಈ ಕುರಿತಂತೆ ಶ್ರೀಲಂಕಾದ ಮಾಜಿ ನಾಯಕ ಹಾಗೂ ದಿಗ್ಗಜ ಕ್ರಿಕೆಟಿಗ ಕುಮಾರ ಸಂಗಕ್ಕರ ಭವಿಷ್ಯ ನುಡಿದಿದ್ದಾರೆ.
ಹೌದು, ಮಾಜಿ ಕ್ರಿಕೆಟಿಗರಾದ ಕುಮಾರ ಸಂಗಕ್ಕರ ಹಾಗೂ ಇಯಾನ್ ಮಾರ್ಗನ್, ಭಾರತ ಈ ಬಾರಿ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿದೆ ಎಂದು ಭವಿಷ್ಯ ನುಡಿದಿದ್ದಾರೆ. ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳುತ್ತಿದ್ದು, ಸಂಪೂರ್ಣ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಿದೆ. ಈಗಾಗಲೇ ಏಷ್ಯಾಕಪ್ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾ, ಮೇಲ್ನೋಟಕ್ಕೆ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.
ಕೊನೆಗೂ ತನ್ನ ಇನಿಯನ ಮೇಲಿರುವ ಪ್ರೀತಿಯ ಗುಟ್ಟು ಬಿಚ್ಚಿಟ್ಟ ಸಾರಾ..! ತೆಂಡುಲ್ಕರ್ ಪುತ್ರಿಯ ಟ್ವೀಟ್ ವೈರಲ್
Sky Sports ವಾಹಿನಿಯಲ್ಲಿ ವಿಶ್ವಕಪ್ ಟೂರ್ನಿಯ ಕುರಿತಂತೆ ಮಾತನಾಡಿದ ಕುಮಾರ ಸಂಗಕ್ಕರ, ಈ ಬಾರಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ವಿಶ್ವಕಪ್ ಗೆಲ್ಲಲು ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ ಎಂದು ಲಂಕಾ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಹೇಳಿದ್ದಾರೆ.
"ನನ್ನ ಪ್ರಕಾರ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಈ ಬಾರಿಯ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿವೆ. ಇನ್ನು ಶ್ರೀಲಂಕಾ ತಂಡವು ಏಷ್ಯಾಕಪ್ ಟೂರ್ನಿಯುದ್ದಕ್ಕೂ ಆಡಿದ್ದನ್ನು ಗಮನಿಸಿದರೆ, ಲಂಕಾ ಕೂಡಾ ಪ್ಲೇ ಆಫ್ ಸ್ಥಾನಕ್ಕಾಗಿ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ. ಪಂದ್ಯದ ದಿನ ಚೆನ್ನಾಗಿ ಪ್ರದರ್ಶನ ತೋರಿದರೆ ಫೈನಲ್‌ಗೇರುವುದು ಕಷ್ಟವೇನಲ್ಲ" ಎಂದು 45 ವರ್ಷದ ಸಂಗಕ್ಕರ ಹೇಳಿದ್ದಾರೆ.
ಇನ್ನು 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ಇಂಗ್ಲೆಂಡ್‌ಗೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಇಯಾನ್ ಮಾರ್ಗನ್ ಕೂಡಾ, ಈ ಬಾರಿ ಭಾರತ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿದೆ ಎಂದು ಹೇಳಿದ್ದಾರೆ. ಅದರಲ್ಲೂ ಹಾರ್ದಿಕ್ ಪಾಂಡ್ಯ ಅವರ ಪಾತ್ರ ಬಹುಮುಖ್ಯವಾಗಿರಲಿದೆ ಎಂದು ಮಾರ್ಗನ್ ಹೇಳಿದ್ದಾರೆ.
ವಿಶ್ವಕಪ್ ಗೆದ್ದರೆ ಸಿಗುತ್ತೆ ಕೋಟಿ-ಕೋಟಿ ಹಣ; ವಿಶ್ವಕಪ್ ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?
"ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಲೆವೆಲ್ ಗಮನಿಸಿದರೆ, ಅವರು ಚೆನ್ನಾಗಿಯೇ ಬೌಲಿಂಗ್ ಮಾಡಲಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲೂ ಹಾರ್ದಿಕ್ ಪಾಂಡ್ಯ ಚೆನ್ನಾಗಿಯೇ ಬೌಲಿಂಗ್ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಆರನೇ ಬೌಲರ್ ಜತೆಗೆ ಬ್ಯಾಟಿಂಗ್‌ನಲ್ಲೂ ಸ್ಪೋಟಕ ಇನಿಂಗ್ಸ್ ಆಡುವ ಸಾಮರ್ಥ್ಯ ಹೊಂದಿರುವುದು ಟೀಂ ಇಂಡಿಯಾ ಪಾಲಿಗೆ ವರವಾಗಲಿದೆ" ಎಂದು ಮಾರ್ಗನ್ ಅಭಿಪ್ರಾಯಪಟ್ಟಿದ್ದಾರೆ.
"ಹಾರ್ದಿಕ್ ಪಾಂಡ್ಯ ಸಂಪೂರ್ಣ ಫಿಟ್ ಆಗಿ 5-6 ಓವರ್ ಕ್ವಾಲಿಟಿ ಬೌಲಿಂಗ್ ಮಾಡಿದರೆ, ಖಂಡಿತವಾಗಿಯೂ ನನ್ನ ದೃಷ್ಟಿಯಲ್ಲಿ ಭಾರತ ಈ ಬಾರಿ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡ ಎಂದು ಹೇಳಬಹುದು ಎಂದು ಇಯಾನ್ ಮಾರ್ಗನ್ ಹೇಳಿದ್ದಾರೆ.
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಂದು ಆರಂಭವಾಗಲಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಇನ್ನು ಟೂರ್ನಿಗೆ ಆತಿಥ್ಯ ವಹಿಸಿರುವ ಭಾರತ ತಂಡವು ಅಕ್ಟೋಬರ್ 08ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ 5 ಬಾರಿಯ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
ವಿಶ್ವಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ ನೋಡಿ:
ರೋಹಿತ್ ಶರ್ಮಾ(ನಾಯಕ), ಹಾರ್ದಿಕ್ ಪಾಂಡ್ಯ(ಉಪನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.