
ಹರಾರೆ: ಬೌಲರ್‌ಗಳ ಶಿಸ್ತುಬದ್ಧ ದಾಳಿ ಹಾಗೂ ಯಶಸ್ವಿ ಜೈಸ್ವಾಲ್ ಸ್ಫೋಟಕ ಆಟದ ನೆರವಿನಿಂದ ಜಿಂಬಾಬ್ವೆ ವಿರುದ್ಧ 4ನೇ ಟಿ20 ಪಂದ್ಯದಲ್ಲಿ ಭಾರತ 10 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಶುಭ್‌ಮನ್ ಗಿಲ್ ಪಡೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 5 ಪಂದ್ಯಗಳ ಸರಣಿಯನ್ನು 3-1ರಿಂದ ಕೈವಶಪಡಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 7 ವಿಕೆಟ್ ಕಳೆದುಕೊಂಡು 152 ರನ್ ಕಲೆಹಾಕಿತು. ಉತ್ತಮ ಆರಂಭ ಪಡೆದ ಹೊರತಾಗಿಯೂ ಭಾರತಕ್ಕೆ ದೊಡ್ಡ ಗುರಿ ನಿಗದಿಪಡಿಸಲು ಜಿಂಬಾಬ್ವೆ ವಿಫಲವಾಯಿತು.
ಮೊದಲ ವಿಕೆಟ್‌ಗೆ ಮಧೆವೆರೆ ಹಾಗೂ ಮರುಮಾನಿ 63 ರನ್ ಜೊತೆಯಾಟವಾಡಿದರು. ಮಧೆವೆರೆ 25ಕ್ಕೆ ಔಟಾದರೆ, ಮರುಮಾನಿ 32 ರನ್ ಕೊಡುಗೆ ನೀಡಿದರು. ಬಳಿಕ ನಾಯಕ ಸಿಕಂದರ್ ರಝಾ 28 ಎಸೆತಗಳಲ್ಲಿ 46 ರನ್ ಸಿಡಿಸಿ ತಂಡವನ್ನು 150ರ ಗಡಿ ದಾಟಿಸಿದರು. ಖಲೀಲ್ ಅಹ್ಮದ್ 2 ವಿಕೆಟ್ ಕಿತ್ತರು.
ಸ್ಫೋಟಕ ಆಟ: ಸ್ಪರ್ಧಾತ್ಮಕ ಮೊತ್ತವನ್ನು ಭಾರತ ಲೀಲಾಜಾಲವಾಗಿ ಬೆನ್ನತ್ತಿ ಜಯಗಳಿಸಿತು. ಜಿಂಬಾಬ್ವೆ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಯಶಸ್ವಿ ಜೈಸ್ವಾಲ್ ಹಾಗೂ ಶುಭ್‌ಮನ್ ಗಿಲ್ 15.2 ಓವರ್‌ಗಲ್ಲೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಜೈಸ್ವಾಲ್ 53 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್‌ನೊಂದಿಗೆ ಅಜೇಯ 93 ರನ್ ಸಿಡಿಸಿದರೆ, ಗಿಲ್ 39 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್‌ನೊಂದಿಗೆ 58 ರನ್ ಚಚ್ಚಿದರು.
ಸ್ಕೋರ್: ಜಿಂಬಾಬ್ವೆ 20 ಓವರಲ್ಲಿ 152/7 (ಸಿಕಂದರ್ 46, ಮರುಮಾನಿ 32, ಖಲೀಲ್2-32), ಭಾರತ 15.2 ಓವರಲ್ಲಿ 156/0 (ಜೈಸ್ವಾಲ್ 93*, ಗಿಲ್ 58*)
ಪಂದ್ಯಶ್ರೇಷ್ಠ: ಯಶಸ್ವಿ ಜೈಸ್ವಾಲ್
5ನೇ ಬಾರಿ 150+ ರನ್ ಜೊತೆಯಾಟ
ಭಾರತದ ಬ್ಯಾಟರ್‌ಗಳು ಟಿ20ಯಲ್ಲಿ 5ನೇ ಬಾರಿ ಮೊದಲ ವಿಕೆಟ್‌ಗೆ 150+ ರನ್ ಜೊತೆಯಾಟವಾಡಿದರು. 2017ರಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್-ಕೆ.ಎಲ್.ರಾಹುಲ್ 165 ರನ್, 2023ರಲ್ಲಿ ವಿಂಡೀಸ್ ವಿರುದ್ಧ ಜೈಸ್ವಾಲ್-ಗಿಲ್ 165 ರನ್, 2018ರಲ್ಲಿ ಐರ್ಲೆಂಡ್ ವಿರುದ್ಧ ಧವನ್-ರೋಹಿತ್ 160 ರನ್, 2017ರಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಹಿತ್-ಧವನ್ 158 ರನ್ ಜೊತೆಯಾಟವಾಡಿದ್ದರು.
28 ಎಸೆತ: ಭಾರತ 28 ಎಸೆತ ಬಾಕಿಯಿಟ್ಟು ಪಂದ್ಯ ಗೆದ್ದಿತು. ಇದು ಟಿ20 ಕ್ರಿಕೆಟ್‌ನಲ್ಲಿ 150+ ರನ್ ಗುರಿ ಬೆನ್ನತ್ತುವಾಗ ಭಾರತದ ಗರಿಷ್ಠ.
ವಿಕೆಟ್ ನಷ್ಟವಿಲ್ಲದೆ 150+ ಚೇಸ್ ಮಾಡಿದ 4ನೇ ತಂಡ
ಭಾರತ ಟಿ20 ಕ್ರಿಕೆಟ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 150+ ರನ್ ಗುರಿ ಬೆನ್ನತ್ತಿ ಗೆದ್ದ 4ನೇ ತಂಡ. ಪಾಕಿಸ್ತಾನ 2 ಬಾರಿ, ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಲಾ 1 ಬಾರಿ ಈ ಸಾಧನೆ ಮಾಡಿದೆ.
ಇಂದು ಕೊನೆ ಟಿ20
ಭಾರತ ಹಾಗೂ ಜಿಂಬಾಬ್ವೆ ನಡುವಿನ ಸರಣಿಯ 5ನೇ ಹಾಗೂ ಕೊನೆ ಟಿ20 ಪಂದ್ಯ ಭಾನುವಾರ ನಡೆಯಲಿದೆ. ಭಾರತ 4-1ರಲ್ಲಿ ಸರಣಿ ಮುಗಿಸುವ ವಿಶ್ವಾಸದಲ್ಲಿದ್ದರೆ, ಗೆಲುವಿನೊಂದಿಗೆ ಗುಡ್‌ಬೈ ಹೇಳಲು ಆತಿಥೇಯ ಜಿಂಬಾಬ್ವೆ ಕಾಯುತ್ತಿದೆ.
ಪಂದ್ಯ: ಸಂಜೆ 4.30ಕ್ಕೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.