
ಮೊಹಾಲಿ(ಮಾ.05): ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಬಾರಿಸಿದ ಅಮೋಘ 175 ರನ್‌ಗಳ ನೆರವಿನಿಂದ ಮೊಹಾಲಿ ಟೆಸ್ಟ್ (Mohali Test) ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 574 ರನ್ ಬಾರಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಜಡೇಜಾ ಹಾಗೂ ಮೊಹಮ್ಮದ್ ಶಮಿ 9ನೇ ವಿಕೆಟ್‌ಗೆ ಶತಕದ ಜತೆಯಾಟವಾಡುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು.
ಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಐ.ಎಸ್. ಬಿಂದ್ರಾ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ರವೀಂದ್ರ ಜಡೇಜಾ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. 6 ವಿಕೆಟ್ ಕಳೆದುಕೊಂಡು 357 ರನ್‌ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತ ತಂಡಕ್ಕೆ ಏಳನೇ ವಿಕೆಟ್‌ಗೆ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ 130 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸಮಯೋಚಿತ ಬ್ಯಾಟಿಂಗ್ ನಡೆಸಿದ ರವಿಚಂದ್ರನ್ ಅಶ್ವಿನ್ (Ravichandran Ashwin) 82 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 61 ರನ್ ಬಾರಿಸಿ ಸುರಂಗ ಲಕ್ಮಲ್‌ಗೆ ವಿಕೆಟ್ ಒಪ್ಪಿಸಿದರು.
ಲಂಕಾ ಬೌಲರ್‌ಗಳ ಮೇಲೆ ಸವಾರಿ ನಡೆಸಿದ ರವೀಂದ್ರ ಜಡೇಜಾ: ರಿಷಭ್ ಪಂತ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ರವೀಂದ್ರ ಜಡೇಜಾ ಆಕರ್ಷಕ ಬ್ಯಾಟಿಂಗ್ ಮೂಲಕ ಮೊಹಾಲಿಯಲ್ಲಿ ನೆರದಿದ್ದ ಅಭಿಮಾನಿಗಳನ್ನು ರಂಜಿಸಿದರು. ಜಡೇಜಾ ಒಟ್ಟು 160 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ ವೃತ್ತಿಜೀವನದ ಎರಡನೇ ಶತಕ ಸಿಡಿಸಿ ಸಂಭ್ರಮಿಸಿದರು. ಲಂಕಾ ಬೌಲರ್‌ಗಳನ್ನು ಎರಡನೇ ದಿನದಾಟದಲ್ಲಿ ಇನ್ನಿಲ್ಲದಂತೆ ಕಾಡಿದ ಜಡೇಜಾ ಟೆಸ್ಟ್ ವೃತ್ತಿಜೀವನದ ಗರಿಷ್ಠ ವೈಯುಕ್ತಿಕ ಸ್ಕೋರ್ ಬಾರಿಸಿದರು. ಒಟ್ಟು 228 ಎಸೆತಗಳನ್ನು ಬಾರಿಸಿದ ಜಡೇಜಾ 17 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 175 ರನ್ ಬಾರಿಸಿದರು. ಏಳನೇ ಕ್ರಮಾಂಕದಲ್ಲಿ ಭಾರತ ಪರ ಗರಿಷ್ಠ ರನ್ ಬಾರಿಸಿದ ದಾಖಲೆ ಇದೀಗ ಜಡೇಜಾ ಪಾಲಾಗಿದೆ. ಈ ಮೊದಲು ಕಪಿಲ್ ದೇವ್ 7ನೇ ಕ್ರಮಾಂಕದಲ್ಲಿ 163 ರನ್ ಬಾರಿಸಿದ್ದರು. ಜಡೇಜಾಗೆ 9ನೇ ವಿಕೆಟ್‌ಗೆ ಉತ್ತಮ ಸಾಥ್ ನೀಡಿದ ಮೊಹಮ್ಮದ್ ಶಮಿ ಭಾರತ ತಂಡದ ಪರ ಮುರಿಯದ 103 ರನ್‌ಗಳ ಜತೆಯಾಟ ನಿಭಾಯಿಸಿದರು. ಮೊಹಮ್ಮದ್ ಶಮಿ 34 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ ಅಜೇಯ 20 ರನ್ ಬಾರಿಸಿದರು.
ಹೀಗಿತ್ತು ಭಾರತದ ಮೊದಲ ಇನಿಂಗ್ಸ್: ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ರೋಹಿತ್ ಹಾಗೂ ಮಯಾಂಕ್ ಅಗರ್‌ವಾಲ್ 52 ರನ್‌ಗಳ ಜತೆಯಾಟ ನಿಭಾಯಿಸಿದರು. ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ವಿರಾಟ್ ಕೊಹ್ಲಿ (Virat Kohli) 45 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಚೇತೇಶ್ವರ್ ಪೂಜಾರ ಬದಲಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಹನುಮ ವಿಹಾರಿ ಸಮಯೋಚಿತ 58 ರನ್ ಬಾರಿಸಿದರು. ಇನ್ನು ಪಂತ್ ಕೇವಲ 4 ರನ್‌ಗಳ ಅಂತರದಲ್ಲಿ ಶತಕ ವಂಚಿತರಾದರು
ಸಂಕ್ಷಿಪ್ತ ಸ್ಕೋರ್
ಭಾರತ: 574/8 (ಮೊದಲ ಇನಿಂಗ್ಸ್)
ರವೀಂದ್ರ ಜಡೇಜಾ: 175*
ರಿಷಭ್ ಪಂತ್: 96
ಸುರಂಗ ಲಕ್ಮಲ್: 90-2
(* ಎರಡನೇ ದಿನದಾಟದ ಮೊದಲ ಇನಿಂಗ್ಸ್ ಮುಕ್ತಾಯದ ವೇಳೆಗೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.