ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!

Naveen Kodase   | Kannada Prabha
Published : Dec 09, 2025, 08:32 AM IST
Team India

ಸಾರಾಂಶ

2026ರ ಟಿ20 ವಿಶ್ವಕಪ್‌ಗೆ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಸರಣಿಯೊಂದಿಗೆ ತನ್ನ ತಯಾರಿಯನ್ನು ಆರಂಭಿಸಲಿದೆ. ಗಾಯದಿಂದ ಚೇತರಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಮತ್ತು ಶುಭಮನ್ ಗಿಲ್ ತಂಡಕ್ಕೆ ಮರಳಿದ್ದು, ಅಭಿಷೇಕ್ ಶರ್ಮಾ ಅವರಂತಹ ಯುವ ಆಟಗಾರರ ಮೇಲೆ ಎಲ್ಲರ ಕಣ್ಣಿದೆ.  

ಕಟಕ್‌: 2024ರಲ್ಲಿ ಗೆದ್ದಿರುವ ಟಿ20 ವಿಶ್ವಕಪ್‌ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಎದುರು ನೋಡುತ್ತಿರುವ ಭಾರತ ತಂಡ, 2026ರ ಟಿ20 ವಿಶ್ವಕಪ್‌ಗೆ ಮಂಗಳವಾರದಿಂದ ಅಧಿಕೃತವಾಗಿ ತಯಾರಿ ಆರಂಭಿಸಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ ಆಡಲಿರುವ ಟೀಂ ಇಂಡಿಯಾ, ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವ ಯೋಜನೆಯಲ್ಲಿದೆ. ಮೊದಲ ಪಂದ್ಯ ಒಡಿಶಾದ ಕಟಕ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮುಂದಿನ ವಿಶ್ವಕಪ್‌ ಫೆಬ್ರವರಿಯಲ್ಲಿ ಆರಂಭಗೊಳ್ಳಲಿದೆ. ಅದಕ್ಕೂ ಮುನ್ನ ಭಾರತಕ್ಕೆ ಇರುವುದು 10 ಟಿ20 ಪಂದ್ಯ. ದ.ಆಫ್ರಿಕಾ ವಿರುದ್ಧ 5 ಪಂದ್ಯ ಆಡಿದ ಬಳಿಕ ತವರಿನಲ್ಲೇ ನ್ಯೂಜಿಲೆಂಡ್‌ ವಿರುದ್ಧ 5 ಟಿ20 ಆಡಲಿದೆ. ಈ 10 ಪಂದ್ಯಗಳಲ್ಲಿ ಅಳೆದುತೂಗಿ ಬಲಿಷ್ಠ ತಂಡವನ್ನು ಆಯ್ಕೆ ಮಾಡುವುದು ಈಗ ಆಯ್ಕೆ ಸಮಿತಿ, ಕೋಚ್‌ ಮುಂದಿರುವ ಸವಾಲು. ಮಹತ್ವದ ಟೂರ್ನಿಯಲ್ಲಿ ಆಡಲು ಕಾತರಿಸುತ್ತಿರುವ ಆಟಗಾರರು, ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಹೋರಾಡಲಿದ್ದಾರೆ.

ಗಿಲ್‌, ಹಾರ್ದಿಕ್‌ ಲಭ್ಯ:

ಗಾಯದಿಂದಾಗಿ ಕೆಲ ತಿಂಗಳುಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಹಾರ್ದಿಕ್‌ ಪಾಂಡ್ಯ ಈ ಸರಣಿ ಮೂಲಕ ಕಮ್‌ಬ್ಯಾಕ್‌ ಮಾಡಲಿದ್ದಾರೆ. ಅವರು ಬರೋಡಾ ಪರ ರಾಷ್ಟ್ರೀಯ ಟಿ20ಯಲ್ಲಿ ಮಿಂಚಿದ್ದು, ದ.ಆಫ್ರಿಕಾ ವಿರುದ್ಧವೂ ಅಬ್ಬರಿಸುವ ಕಾತರದಲ್ಲಿದ್ದಾರೆ. ಇನ್ನು, ಟೆಸ್ಟ್‌ ಸರಣಿ ವೇಳೆ ಗಾಯಗೊಂಡು ಬಳಿಕ ಏಕದಿನ ಸರಣಿಗೆ ಗೈರಾಗಿದ್ದ ಶುಭ್‌ಮನ್‌ ಗಿಲ್‌ ಕೂಡಾ ಈ ಸರಣಿಯಲ್ಲಿ ಆಡಲಿದ್ದಾರೆ.

ಸರಣಿಯಲ್ಲಿ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್‌ ಮುನ್ನಡೆಸಲಿದ್ದಾರೆ. ಆದರೆ ಅವರ ಲಯದ ಬಗ್ಗೆ ತಂಡಕ್ಕೆ ಈಗಲೇ ತಲೆನೋವು ಆರಂಭವಾಗಿದೆ. ಅವರು ಕಳೆದ ಜುಲೈನಲ್ಲಿ ತಂಡದ ಪೂರ್ಣಾವಧಿ ನಾಯಕನಾಗಿ ಆಯ್ಕೆಯಾದ ಬಳಿಕ ಕಳಪೆ ಆಟವಾಡುತ್ತಿದ್ದು, 15 ಇನ್ನಿಂಗ್ಸ್‌ಗಳಲ್ಲಿ 15.33ರ ಸರಾಸರಿಯಲ್ಲಿ ಕೇವಲ 184 ರನ್‌ ಗಳಿಸಿದ್ದಾರೆ. ಮುಷ್ತಾಕ್‌ ಅಲಿ ಟಿ20ಯಲ್ಲೂ ಅವರು ವಿಫಲವಾಗಿದ್ದು, 5 ಪಂದ್ಯಗಳಲ್ಲಿ 165 ರನ್‌ ಗಳಿಸಿದ್ದಾರೆ. ಹೀಗಾಗಿ ದ.ಆಫ್ರಿಕಾ ವಿರುದ್ಧ ಸರಣಿಯಲ್ಲಿ ಅಬ್ಬರಿಸಲೇಬೇಕಾದ ಅಗತ್ಯವಿದೆ.ಅಭಿಷೇಕ್‌ ಆಕರ್ಷಣೆ:

ಈ ಸರಣಿಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು ಅಭಿಷೇಕ್‌ ಶರ್ಮಾ. ಭಾರತ ತಂಡ, ಐಪಿಎಲ್‌, ಮುಷ್ತಾಕ್‌ ಅಲಿ ಟಿ20...ಹೀಗೆ ಆಡಿದ ಎಲ್ಲಾ ಟೂರ್ನಿಗಳಲ್ಲೂ ಅಬ್ಬರಿಸುತ್ತಿರುವ ಅಭಿಷೇಕ್, ದ.ಆಫ್ರಿಕಾ ವಿರುದ್ಧ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬ ಕುತೂಹಲವಿದೆ. ವಿಕೆಟ್‌ ಕೀಪರ್‌ ಸ್ಥಾನಕ್ಕೆ ಸಂಜು ಸ್ಯಾಮ್ಸನ್‌ ಹಾಗೂ ಜಿತೇಶ್‌ ಶರ್ಮಾ ನಡುವೆ ಪೈಪೋಟಿಯಿದೆ. ತಂಡದಲ್ಲಿ ತಿಲಕ್‌ ವರ್ಮಾ, ಅಕ್ಷರ್‌ ಪಟೇಲ್‌, ಶಿವಂ ದುಬೆ, ಬೂಮ್ರಾ, ಹರ್ಷಿತ್ ರಾಣಾ, ಕುಲ್ದೀಪ್‌ ಕೂಡಾ ಇದ್ದಾರೆ.

ಮತ್ತೊಂದೆಡೆ, ಟೆಸ್ಟ್‌ ಸರಣಿ ಗೆಲುವಿನ ಬಳಿಕ ಏಕದಿನ ಸರಣಿ ಕಳೆದುಕೊಂಡರೂ ದ.ಆಫ್ರಿಕಾ ತಂಡ ಈ ಪ್ರವಾಸದಲ್ಲಿ ತನ್ನ ಪ್ರದರ್ಶನದ ಬಗ್ಗೆ ತೃಪ್ತಿ ಹೊಂದಿದೆ. ಏಡನ್‌ ಮಾರ್ಕ್‌ರಮ್‌ ನಾಯಕತ್ವದ ತಂಡದಲ್ಲಿ ಬ್ರೆವಿಸ್‌, ಡೇವಿಡ್‌ ಮಿಲ್ಲರ್‌, ಕ್ವಿಂಟನ್‌ ಡಿಕಾಕ್‌ ಸೇರಿ ಹಲವು ಸ್ಫೋಟಕ ಆಟಗಾರರಿದ್ದಾರೆ.

ಒಟ್ಟು ಮುಖಾಮುಖಿ: 31

ಭಾರತ: 18

ದ.ಆಫ್ರಿಕಾ: 12

ಫಲಿತಾಂಶವಿಲ್ಲ: 01

ಸಂಭಾವ್ಯ ಆಟಗಾರರು:

ಭಾರತ: ಅಭಿಷೇಕ್‌, ಗಿಲ್‌, ಸೂರ್ಯ(ನಾಯಕ), ತಿಲಕ್‌, ಜಿತೇಶ್‌/ಸಂಜು, ಹಾರ್ದಿಕ್‌, ಅಕ್ಷರ್‌, ಹರ್ಷಿತ್/ವಾಷಿಂಗ್ಟನ್‌/ದುಬೆ, ಕುಲ್ದೀಪ್‌, ವರುಣ್‌, ಬೂಮ್ರಾ

ದ.ಆಫ್ರಿಕಾ: ಡಿ ಕಾಕ್‌, ಮಾರ್ಕ್‌ರಮ್‌(ನಾಯಕ), ಹೆಂಡ್ರಿಕ್ಸ್‌, ಬ್ರೆವಿಸ್‌, ಮಿಲ್ಲರ್‌, ಸ್ಟಬ್ಸ್‌, ಕಾರ್ಬಿನ್‌ ಬಾಶ್‌/ಜಾರ್ಜ್‌ ಲಿಂಡೆ, ಯಾನ್ಸನ್‌, ಕೇಶವ್‌, ಲುಂಗಿ, ನೋಕಿಯಾ

ಪಿಚ್‌ ರಿಪೋರ್ಟ್‌

ಕಟಕ್‌ನ ಪಿಚ್‌ ಸ್ಪರ್ಧಾತ್ಮಕವಾಗಿದ್ದು, ಆರಂಭದಲ್ಲಿ ವೇಗಿಗಳು, ಬಳಿಕ ಸ್ಪಿನ್ನರ್‌ಗಳಿಗೆ ನೆರವಾಗುವ ಸಾಧ್ಯತೆಯಿದೆ. ರಾತ್ರಿ ವೇಳೆ ಮಂಜು ಬೀಳುವ ಸಾಧ್ಯತೆ ಇರುವುದರಿಂದ ಟಾಸ್ ಗೆದ್ದ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆಯಿದೆ.

ಪಂದ್ಯ ಆರಂಭ: ಸಂಜೆ 7 ಗಂಟೆಗೆ

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್‌

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!