
ಲಾರ್ಡ್ಸ್(ಆ.16): ಮೊಹಮ್ಮದ್ ಶಮಿ ಬಾರಿಸಿದ ಕೆಚ್ಚೆದೆಯ ಅರ್ಧಶತಕ(52*) ಹಾಗೂ ಜಸ್ಪ್ರೀತ್ ಬುಮ್ರಾ(30) ಆಕರ್ಷಕ ಬ್ಯಾಟಿಂಗ್ ನೆರವಿನಿಂದ 5ನೇ ದಿನದಾಟದ ಮೊದಲ ಸೆಷನ್ ಅಂತ್ಯದ ವೇಳೆಗೆ ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ 8 ವಿಕೆಟ್ ಕಳೆದುಕೊಂಡು 286 ರನ್ ಬಾರಿಸಿದ್ದು, ಒಟ್ಟಾರೆ 259 ರನ್‌ಗಳ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಲಾರ್ಡ್ಸ್‌ನಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿದೆ.
ನಾಲ್ಕನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿದ್ದ ಭಾರತ ಕೊನೆಯ ದಿನದಾಟದಲ್ಲಿ ತನ್ನ ಖಾತೆಗೆ 13 ರನ್ ಸೇರಿಸುವಷ್ಟರಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್(22) ವಿಕೆಟ್ ಕಳೆದುಕೊಂಡಿತು. ಇನ್ನು ವೇಗಿ ಇಶಾಂತ್ ಶರ್ಮಾ 16 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.
ಬುಮ್ರಾ-ಶಮಿ ಜುಗಲ್ಬಂದಿ: 209 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಭಾರತ ತಂಡಕ್ಕೆ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. 57 ಎಸೆತಗಳನ್ನು ಎದುರಿಸಿ ಶಮಿ ಆಕರ್ಷಕ ಅರ್ಧಶತಕ ಪೂರೈಸಿದರು. ಮೋಯಿನ್ ಅಲಿ ಬೌಲಿಂಗ್‌ನಲ್ಲಿ ಬೌಂಡರಿ ಬಳಿಕ ಮುಗಿಲೆತ್ತರದ ಸಿಕ್ಸರ್ ಚಚ್ಚುವ ಮೂಲಕ ಶಮಿ ವೃತ್ತಿಜೀವನದ ಎರಡನೇ ಅರ್ಧಶತಕ ಬಾರಿಸಿದರು. ಮತ್ತೊಂದು ತುದಿಯಲ್ಲಿ ಬುಮ್ರಾ 30 ರನ್ ಬಾರಿಸಿ ಶಮಿಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ 9ನೇ ವಿಕೆಟ್‌ಗೆ ಮುರಿಯದ 77 ರನ್‌ಗಳ ಜತೆಯಾಟ ನಿಭಾಯಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.