Ind vs Ban: ಕುಸಿದ ಬಾಂಗ್ಲಾಗೆ ಮೆಹದಿ ಹಸನ್‌ ಶತಕದಾಸರೆ, ಟೀಂ ಇಂಡಿಯಾಗೆ ಸ್ಪರ್ಧಾತ್ಮಕ ಗುರಿ

By Naveena K V  |  First Published Dec 7, 2022, 3:35 PM IST

ಎರಡನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸ್ಪರ್ಧಾತ್ಮಕ ಗುರಿ
ಆಕರ್ಷಕ ಬ್ಯಾಟಿಂಗ್ ಮೂಲಕ ಮಿಂಚಿದ ಮೆಹದಿ ಹಸನ್
3 ವಿಕೆಟ್ ಕಬಳಿಸಿ ಗಮನ ಸೆಳೆದ ವಾಷಿಂಗ್ಟನ್ ಸುಂದರ್


ಢಾಕಾ(ಡಿ.07): ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದ್ದ ಬಾಂಗ್ಲಾದೇಶ ತಂಡಕ್ಕೆ ಮೆಹದಿ ಹಸನ್(100*) ಹಾಗೂ ಮೊಹಮದುಲ್ಲಾ(77) ಆಕರ್ಷಕ ಶತಕದ ಜತೆಯಾಟವಾಡಿ ಆಸರೆಯಾಗಿದ್ದಾರೆ. ಮೆಹದಿ ಹಸನ್ ಬಾರಿಸಿದ ಅಜೇಯ ಶತಕ(100*) ಹಾಗೂ ಮೊಹಮ್ಮದುಲ್ಲಾ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಬಾಂಗ್ಲಾದೇಶ ತಂಡವು 7 ವಿಕೆಟ್ ಕಳೆದುಕೊಂಡು 271 ರನ್ ಬಾರಿಸಿದ್ದು, ಟೀಂ ಇಂಡಿಯಾಗೆ ಸವಾಲಿನ ಗುರಿ ನೀಡಿದೆ. 

ಇಲ್ಲಿನ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಆರಂಭವಾದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಲಿಟನ್ ದಾಸ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಆರಂಭದಲ್ಲೇ ವೇಗಿ ಸಿರಾಜ್, ಅನ್ಮೂಲ್ ಹಕ್(11)  ಹಾಗೂ ನಾಯಕ ಲಿಟನ್ ದಾಸ್(7) ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇನ್ನು ನಜ್ಮುಲ್ ಹೊಸೈನ್ ಶಾಂಟೋ 21 ರನ್ ಬಾರಿಸಿ ವೇಗಿ ಉಮ್ರಾನ್ ಮಲಿಕ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಶಕೀಬ್ ಅಲ್ ಹಸನ್, ಮುಷ್ಫಿಕುರ್ ರಹೀಂ ಹಾಗೂ ಅಫಿಫ್ ಹೊಸೈನ್‌ಗೆ ವಾಷಿಂಗ್ಟನ್ ಸುಂದರ್ ಪೆವಿಲಿಯನ್ ಹಾದಿ ತೋರಿಸಿದರು. 19 ಓವರ್ ಅಂತ್ಯದ ವೇಳೆಗೆ ಬಾಂಗ್ಲಾದೇಶ ತಂಡವು 69 ರನ್‌ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು.

Tap to resize

Latest Videos

ಮೊಹಮದುಲ್ಲಾ-ಮೆಹದಿ ಹಸನ್ ಆಸರೆ: ಹೌದು, ಕೇವಲ 19 ಓವರ್‌ಗಳೊಳಗಾಗಿ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಬಾಂಗ್ಲಾದೇಶ ತಂಡಕ್ಕೆ 7ನೇ ವಿಕೆಟ್‌ಗೆ ಮೊಹಮದುಲ್ಲಾ ಹಾಗೂ ಮೆಹದಿ ಹಸನ್ ಆಕರ್ಷಕ ಶತಕದ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ 165 ಎಸೆತಗಳನ್ನು ಎದುರಿಸಿ 148 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. 

Rohit Sharma: ಭಾರತ ತಂಡಕ್ಕೆ ಶಾಕ್, X-ray ಮಾಡಿಸಲು ಆಸ್ಪತ್ರೆಗೆ ತೆರಳಿದ ಟೀಂ ಇಂಡಿಯಾ ನಾಯಕ..!

ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದ ಮೆಹದಿ ಹಸನ್, ಇದೀಗ ಎರಡನೇ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. 55 ಎಸೆತಗಳನ್ನು ಎದುರಿಸಿ ಮೆಹದಿ ಹಸನ್, ಏಕದಿನ ಕ್ರಿಕೆಟ್ ವೃತ್ತಿಜೀವನದ ಮೂರನೇ ಹಾಗೂ ಭಾರತ ವಿರುದ್ದ ಮೊದಲ ಅರ್ಧಶತಕ ಸಿಡಿಸಿ ಮಿಂಚಿದರು. ಮೆಹದಿ ಹಸನ್‌ಗೆ ಮತ್ತೊಂದು ತುದಿಯಲ್ಲಿ ಮೊಹಮದುಲ್ಲಾ ಕೂಡಾ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಉತ್ತಮ ಸಾಥ್ ನೀಡಿದರು. ಮೊಹಮದುಲ್ಲಾ 96 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 77 ರನ್ ಬಾರಿಸಿ ಉಮ್ರಾನ್ ಮಲಿಕ್‌ಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಅಮೋಘ ಇನಿಂಗ್ಸ್ ಆಡಿದ ಮೆಹದಿ ಹಸನ್ 83 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 100 ರನ್ ಬಾರಿಸಿ ಮಿಂಚಿದರು.

ನಾಯಕ ರೋಹಿತ್ ಶರ್ಮಾಗೆ ಗಾಯ: ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ ಮೊಹಮ್ಮದ್ ಸಿರಾಜ್ ಎಸೆದ ಚೆಂಡು ಅನ್ಮೊಲ್ ಹಕ್ ಬ್ಯಾಟ್ ಸವರಿ  ಎರಡನೇ ಸ್ಲಿಪ್‌ನಲ್ಲಿ ನಿಂತಿದ್ದ ರೋಹಿತ್ ಶರ್ಮಾ ಬಳಿ ಹೋಯಿತು. ರೋಹಿತ್ ಶರ್ಮಾ ಕ್ಯಾಚ್ ಕೈಚೆಲ್ಲಿದ್ದೂ ಅಲ್ಲದೇ ಕೈ ಬೆರಳಿಗೂ ಗಾಯ ಮಾಡಿಕೊಂಡರು. ಈ ಕುರಿತಂತೆ ಟ್ವೀಟ್ ಮಾಡಿರುವ ಬಿಸಿಸಿಐ, "ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಎರಡನೇ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುವ ಸಂದರ್ಭದಲ್ಲಿ ಹೆಬ್ಬೆರಳಿನ ಗಾಯಕ್ಕೆ ಒಳಗಾಗಿದ್ದಾರೆ. ಬಿಸಿಸಿಐ ವೈದ್ಯಕೀಯ ಸಿಬ್ಬಂದಿಯೂ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ಈಗ ಅವರು ಸ್ಕ್ಯಾನ್‌ ಮಾಡಿಸಲು ತೆರಳಿದ್ದಾರೆ ಎಂದು ಟ್ವೀಟ್ ಮಾಡಿದೆ. 35 ವರ್ಷದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ತಮ್ಮ ಗಾಯದ ತೀವ್ರತೆ ಅರಿಯಲು ಎಕ್ಸ್-ರೇ ಮಾಡಿಸಲು ಸ್ಥಳೀಯ ಆಸ್ಪತ್ರೆಗೆ ತೆರಳಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯುತ್ತಾರೆಯೇ ಅಥವಾ ಇಲ್ಲವೇ ಎನ್ನುವ ವಿಚಾರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

 

click me!