
ಢಾಕಾ(ಡಿ.07): ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಲಿಟನ್ ದಾಸ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ ಆತಿಥೇಯ ಬಾಂಗ್ಲಾದೇಶ ತಂಡವು ಮೊದಲ ಪಂದ್ಯ ಜಯಿಸುವ ಮೂಲಕ 1-0 ಮುನ್ನಡೆ ಸಾಧಿಸಿದ್ದು, ಇದೀಗ ಎರಡನೇ ಪಂದ್ಯವನ್ನು ಜಯಿಸಿ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಇನ್ನೊಂದೆಡೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಪಾಲಿಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ.
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಪಂದ್ಯಕ್ಕೆ ಇಲ್ಲಿನ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಇನ್ನು ನಿರೀಕ್ಷೆಯಂತೆಯೇ ಬಾಂಗ್ಲಾದೇಶ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಹಸನ್ ಮಹಮೂದ್ ಬದಲಿಗೆ ನಸುಮ್ ಅಹಮ್ಮದ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು ಶಹಬಾಜ್ ಅಹಮ್ಮದ್ ಹಾಗೂ ಕುಲ್ದೀಪ್ ಸೆನ್ ಬದಲಿಗೆ ಅಕ್ಷರ್ ಪಟೇಲ್ ಹಾಗೂ ಉಮ್ರಾನ್ ಮಲಿಕ್ ತಂಡ ಕೂಡಿಕೊಂಡಿದ್ದಾರೆ.
ಬಾಂಗ್ಲಾದೇಶ ತಂಡವು 2016ರಿಂದೀಚೆಗೆ ತವರಿನಲ್ಲಿ ಏಕದಿನ ಸರಣಿಯನ್ನು ಸೋತಿಲ್ಲ. ಹೀಗಾಗಿ ಟೀಂ ಇಂಡಿಯಾ ಎದುರೂ ಗೆಲುವಿನ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ. ಮೊದಲ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಕೆ ಎಲ್ ರಾಹುಲ್ ಹೊರತುಪಡಿಸಿ ಟೀಂ ಇಂಡಿಯಾದ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದ್ದರು. ಶಕೀಬ್ ಅಲ್ ಹಸನ್ ಮುಸ್ತಾಫಿಜುರ್ ರೆಹಮಾನ್ ಸೇರಿದಂತೆ ಬಾಂಗ್ಲಾ ಬೌಲರ್‌ಗಳು ಸಂಘಟಿತ ಪ್ರದರ್ಶನದ ಮೂಲಕ ಮಿಂಚಿದ್ದರು.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಒಟ್ಟು 37 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಟೀಂ ಇಂಡಿಯಾ 30 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೇ, ಬಾಂಗ್ಲಾದೇಶ ತಂಡವು 7 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇದೀಗ ಮೊದಲ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ತೋರಿದ್ದ ಬಾಂಗ್ಲಾದೇಶ ತಂಡವು ಇದೀಗ ಮತ್ತೊಮ್ಮೆ ಟೀಂ ಇಂಡಿಯಾ ಎದುರು ಪ್ರಾಬಲ್ಯ ಮೆರೆಯಲು ಹಾತೊರೆಯುತ್ತಿದೆ. ಒಂದು ವೇಳೆ ಎರಡನೇ ಏಕದಿನ ಪಂದ್ಯದಲ್ಲೂ ಬಾಂಗ್ಲಾದೇಶ ತಂಡವು ಟೀಂ ಇಂಡಿಯಾ ಎದುರು ಗೆಲುವು ಸಾಧಿಸಿದರೇ, ತವರಿನಲ್ಲಿ ಟೀಂ ಇಂಡಿಯಾ ಎದುರು ಸತತ ಎರಡನೇ ಬಾರಿಗೆ ಏಕದಿನ ಸರಣಿ ಜಯಿಸಿದ ಕೀರ್ತಿಗೆ ಬಾಂಗ್ಲಾದೇಶ ಪಾತ್ರವಾಗಲಿದೆ. ಈ ಮೊದಲು ಟೀಂ ಇಂಡಿಯಾ 2015ರಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದಾಗಲೂ, ಏಕದಿನ ಸರಣಿಯನ್ನು ಕೈಚೆಲ್ಲಿತ್ತು.
ತಂಡಗಳು ಹೀಗಿವೆ ನೋಡಿ
ಭಾರತ: ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್.
ಬಾಂಗ್ಲಾದೇಶ: ಲಿಟನ್ ದಾಸ್(ನಾಯಕ), ಅನ್ಮೊಲ್ ಹಕ್, ನಜ್ಮುಲ್ ಹೊಸೈನ್ ಶಾಂಟೋ, ಶಕೀಬ್ ಅಲ್ ಹಸನ್, ಮುಷ್ಫಿಕುರ್ ರಹೀಂ(ವಿಕೆಟ್ ಕೀಪರ್), ಮೊಹಮದುಲ್ಲಾ, ಅಫಿಫ್ ಹೊಸೈನ್, ಮೆಹದಿ ಹಸನ್, ನಸುಮ್, ಮುಸ್ತಾಫಿಜುರ್ ರೆಹಮಾನ್, ಎಬೊದತ್ ಹೊಸೈನ್
ಪಂದ್ಯ: ಬೆಳಗ್ಗೆ 11.30ಕ್ಕೆ
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.