ಟೆಸ್ಟ್ ಕ್ರಿಕೆಟ್‌ನಲ್ಲಿ ಬಲಿಷ್ಠವಾಗಿದ್ದ ಟೀಂ ಇಂಡಿಯಾ ಇದೀಗ ತವರಿನಲ್ಲೇ ಮುಖಭಂಗ ಅನುಭವಿಸಿದೆ. ಇಂಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದೆ.
ಹೈದರಾಬಾದ್(ಜ.28) ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಇಂಗ್ಲೆಂಡ್ ನೀಡಿದ 231 ರನ್ ಟಾರ್ಗೆಟ್ ಚೇಸ್ ಮಾಡಿದ ಟೀಂ ಇಂಡಿಯಾ 4ನೇ ದಿನದಲ್ಲಿ 202 ರನ್‌ಗೆ ಆಲೌಟ್ ಆಗಿದೆ. ಟೊಮ್ ಹಾರ್ಟ್ಲೇ ಬೌಲಿಂಗ್ ಎದುರಿಸಲು ರೋಹಿತ್ ಶರ್ಮಾ ಸೈನ್ಯ ಪರದಾಡಿದೆ. ಪರಿಣಾಮ ನಾಲ್ಕನೇ ದಿನದಲ್ಲೇ ಭಾರತ , ಇಂಗ್ಲೆಂಡ್ ತಂಡಕ್ಕೆ ಶರಣಾಗಿದೆ. ಅಂತಿಮ ಹಂತದಲ್ಲಿ ಬೌಲರ್‌ಗಳು ದಿಟ್ಟ ಹೋರಾಟ ನೀಡಿದರೂ ಗೆಲುವು ಸಾಧ್ಯವಾಗಲಿಲ್ಲ. ಆದರೆ ಸೋಲಿನ ಅಂತರ ತಗ್ಗಿಸುವಲ್ಲಿ ಬೌಲರ್ಸ್ ನೆರವಾಗಿದ್ದಾರೆ.
4ನೇ ದಿನಾದಟದಲ್ಲಿ ಇಂಗ್ಲೆಂಡ್ ತನ್ನ 2ನೇ ಇನ್ನಿಂಗ್ಸ್ ಮುಂದುವರಿಸಿತು. ಒಲಿ ಪೋಪ್ 196 ರನ್ ಸಿಡಿಸಿ ಇಂಗ್ಲೆಂಡ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದರು. ಇಂಗ್ಲೆಂಡ್ 2ನೇ ಇನ್ನಿಂಗ್ಸ್‌ನಲ್ಲಿ 420 ರನ್ ಸಿಡಿಸಿ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದ್ದ ಕಾರಣ ಭಾರತಕ್ಕೆ 231 ರನ್ ಟಾರ್ಗೆಟ್ ಸಿಕ್ಕಿತು. ಎರಡು ದಿನಗಳ ಕಾಲ ಬ್ಯಾಟಿಂಗ್ ಮಾಡುವ ಅವಕಾಶವೂ ಭಾರತದ ಮುಂದಿತ್ತು.
ಆದರ ಟೊಮ್ ಹಾರ್ಟ್ಲೇ ಸೇರಿದಂತೆ ಇಂಗ್ಲೆಂಡ್ ಬೌಲಿಂಗ್ ದಾಳಿ ಆರಂಭಗೊಳ್ಳುತ್ತಿದ್ದಂತೆ ಭಾರತ ಬೆಚ್ಚಿ ಬಿದ್ದಿತ್ತು. ರೋಹಿತ್ ಶರ್ಮಾ 39 ರನ್ ಸಿಡಿಸಿದರೆ, ಯಶಸ್ವಿ ಜೈಸ್ವಾಲ್ ಹಾಗೂ ಶುಬಮನ್ ಗಿಲ್ ಅಬ್ಬರಿಸಲಿಲ್ಲ. ಇತ್ತ ಕೆಎಲ್ ರಾಹುಲ್ ಕೇವಲ 22 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಅಕ್ಸರ್ ಪಟೇಲ್ 17 ರನ್ ಕಾಣಿಕೆ ನೀಡಿದರೆ, ಶ್ರೇಯಸ್ ಅಯ್ಯರ್ 13 ರನ್ ಸಿಡಿಸಿದರು.
ಟೊಮ್ ಭೀಕರ ದಾಳಿಗೆ ಟೀಂ ಇಂಡಿಯಾ ಕುಸಿತ ಕಂಡಿತು. ರವೀಂದ್ರ ಜಡೇಜಾ 2 ರನ್ ಸಿಡಿಸಿ ನಿರ್ಗಮಿಸಿದರು. ಎಸ್ ಭರತ್ ಹಾಗೂ ರವಿಚಂದ್ರನ್ ಅಶ್ವಿನ್ ಜೊತೆಯಾಟ ಟೀಂ ಇಂಡಿಯಾ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿತ್ತು. ಕಾರಣ ಚೇಸಿಂಗ್ ಆಸೆ ಬಿಟ್ಟಿದ್ದ ತಂಡಕ್ಕೆ ಅಶ್ವಿನ್ ಹಾಗೂ ಭರತ್ ಜೊತೆಯಾಟದಲ್ಲಿ ಗೆಲುವು ಸಾಧ್ಯ ಅನ್ನೋ ವಿಶ್ವಾಸ ಮೂಡಿತ್ತು. ಎಸ್ ಭರತ್ 28 ಹಾಗೂ ಅಶ್ವಿನ್ 28 ರನ್ ಸಿಡಿಸಿ ಔಟಾದರು. ಈ ಮೂಲಕ ಭಾರತ ಸೋಲಿನ ಸುಳಿಯಲ್ಲಿ ಸಿಲುಕಿತು.
ಮೊಹಮ್ಮದ್ ಸಿರಾಜ್ ವಿಕೆಟ್ ಪತನದೊಂದಿಗೆ ಟೀಂ ಇಂಡಿಯಾ 202 ರನ್ ಸಿಡಿಸಿ ಆಲೌಟ್ ಆಯಿತು. ಇಂಗ್ಲೆಂಡ್ 28 ರನ್ ಗೆಲುವು ದಾಖಲಿತು. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಕಾಯ್ದುಕೊಂಡಿದೆ.