ಇಂದಿನಿಂದ ಮಹಿಳಾ ಟಿ20 ವಿಶ್ವಕಪ್ ಹಬ್ಬ; ಅರಬ್ಬರ ನಾಡಿನಲ್ಲಿ ಕ್ರಿಕೆಟ್ ಕಲವರ

By Kannadaprabha NewsFirst Published Oct 3, 2024, 10:56 AM IST
Highlights

9ನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ಇಂದಿನಿಂದ ಚಾಲನೆ ಸಿಗಲಿದೆ. ಭಾರತ ಸೇರಿದಂತೆ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ದುಬೈ: ಕ್ರಿಕೆಟ್ ಲೋಕ ಈಗ ಮತ್ತೊಂದು ವಿಶ್ವಕಪ್‌ಗೆ ಸಜ್ಜಾಗಿದೆ. ಗುರುವಾರದಿಂದ ಯುಎಇಯಲ್ಲಿ 9ನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಆರಂಭಗೊಳ್ಳಲಿದೆ. ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಭಾರತ, 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಸೇರಿದಂತೆ ಒಟ್ಟು 10 ತಂಡಗಳು ಅರಬ್ ನಾಡಿನಲ್ಲಿ ನಡೆಯಲಿರುವ ಪ್ರತಿಷ್ಠಿತ ಟೂರ್ನಿಯಲ್ಲಿ ಟ್ರೋಫಿಗಾಗಿ ಸೆಣಸಾಡಲಿವೆ.

ಈ ಬಾರಿ ಟೂರ್ನಿ ಬಾಂಗ್ಲಾದೇಶದಲ್ಲಿ ನಿಗದಿಯಾಗಿತ್ತು. ಆದರೆ ಹಿಂಸಾಚಾರ ಹಿನ್ನೆಲೆಯಲ್ಲಿ ಟೂರ್ನಿಯನ್ನು ಇತ್ತೀಚೆಗಷ್ಟೇ ಯುಎಇಗೆ ಸ್ಥಳಾಂತರಿಸಲಾಗಿತ್ತು. ದುಬೈ ಹಾಗೂ ಶಾರ್ಜಾ ಕ್ರೀಡಾಂಗಣಗಳು ಟೂರ್ನಿಗೆ ಆತಿಥ್ಯ ವಹಿಸಲಿದ್ದು, ಫೈನಲ್ ಸೇರಿದಂತೆ ಒಟ್ಟು 23 ಪಂದ್ಯಗಳು ನಡೆಯಲಿವೆ. ಟೂರ್ನಿಯು ಅ.20ರ ವರೆಗೆ ನಡೆಯಲಿದೆ. 

Latest Videos

ನೀವು ಕೊಟ್ಟ ಚುರ್ಮಾ ನನ್ನ ತಾಯಿಯನ್ನು ನೆನಪಿಸಿತು: ಚೋಪ್ರಾ ತಾಯಿಗೆ ಮೋದಿ ಭಾವುಕ ಪತ್ರ

ಗುರುವಾರ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ-ಸ್ಕಾಟೆಂಡ್ ಮುಖಾಮುಖಿಯಾಗಲಿದ್ದು, ದಿನದ 2ನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಪರಸ್ಪರ ಸೆಣಸಾಡಲಿವೆ. ಈ ಬಾರಿಯೂ ಆಸ್ಟ್ರೇಲಿಯಾ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡೇ ಟೂರ್ನಿಗೆ ಕಾಲಿಡಲಿದೆ. ಭಾರತ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ತಂಡಗಳೂ ಟ್ರೋಫಿ ಜಯಿಸುವ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ.

ಟೂರ್ನಿಯ ಬಹುತೇಕ ದಿನ 2 ಪಂದ್ಯಗಳು ನಡೆಯಲಿದ್ದು, ದಿನದ ಮೊದಲ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಹಾಗೂ 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭಗೊಳ್ಳಲಿವೆ.

ಟೂರ್ನಿ ಮಾದರಿ ಹೇಗೆ?: 

10 ತಂಡಗಳಿರುವ ಟೂರ್ನಿಯನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ತಲಾ 5 ತಂಡಗಳಿರಲಿವೆ. ಗುಂಪಿನ ಪ್ರತಿ ತಂಡಗಳು ತಲಾ ಒಂದು ಬಾರಿ ಮುಖಾಮುಖಿ ಯಾಗಲಿವೆ. ಅಂದರೆ ಒಂದು ತಂಡಕ್ಕೆ ಗುಂಪು ಹಂತದಲ್ಲಿ 4 ಪಂದ್ಯಗಳು. ಗುಂಪಿನಲ್ಲಿ ಅಗ್ರ -2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಅ.15ರಂದು ಗುಂಪು ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿವೆ. ಅ.17,18ಕ್ಕೆ ಸೆಮಿಫೈನಲ್, ಅ.20ಕ್ಕೆ ಫೈನಲ್ ಪಂದ್ಯ ನಿಗದಿಯಾಗಿದೆ.

ಅಶ್ವಿನ್ ಹಿಂದಿಕ್ಕಿ ಮತ್ತೆ ನಂ.1 ಸ್ಥಾನಕ್ಕೇರಿದ ಜಸ್ಪ್ರೀತ್ ಬುಮ್ರಾ; ಹೊಸ ಎತ್ತರಕ್ಕೇರಿದ ಯಶಸ್ವಿ ಜೈಸ್ವಾಲ್!

ನಾಳೆ ಕಿವೀಸ್ ವಿರುದ್ಧ ಆಡಲಿರುವ ಭಾರತ ತಂಡ

ದುಬೈ: 2020ರ ರನ್ನರ್-ಅಪ್ ಭಾರತ ತಂಡ ಈ ಬಾರಿ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಹರ್ಮನ್‌ ಪ್ರೀತ್ ಕೌರ್ ನಾಯಕತ್ವದ ತಂಡ ಶುಕ್ರವಾರ ನ್ಯೂಜಿಲೆಂಡ್ ವಿರುದ್ಧ ಆಡುವ ಮೂಲಕ ಈ ಬಾರಿ ಅಭಿಯಾನ ಆರಂಭಿಸಲಿದೆ. ಭಾರತ ತಂಡಕ್ಕೆ ಗುಂಪು ಹಂತದಲ್ಲೇ  ಬಲಿಷ್ಠ ಆಸ್ಟ್ರೇಲಿಯಾ, ಬದ್ಧವೈರಿ ಪಾಕಿಸ್ತಾನ, ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ವಿರುದ್ಧ ಆಡಬೇಕಿದೆ. ತಂಡದಲ್ಲಿ ಸ್ಮೃತಿ ಮಂಧನಾ, ಶಫಾಲಿ ವರ್ಮಾ, ರಿಚಾ ಘೋಷ್, ಜೆಮಿಮಾ ರೋಡ್ರಿಗ್ಸ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್ ಹಾಗೂ ಕರ್ನಾಟಕದ ಶ್ರೇಯಾಂಕ ಪಾಟೀಲ್ ಅವರಂತಹ ತಾರಾ ಆಟಗಾರ್ತಿಯರಿದ್ದಾರೆ. ನಾಯಕಿ ಹರ್ಮನ್‌ ಈ ವರೆಗೂ 3 ಬಾರಿ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದು, ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಈ ಬಾರಿ ಚಾಂಪಿಯನ್ ಆಗದಿದ್ದರೆ ಅವರು ನಾಯಕತ್ವ ಕಳೆದು ಕೊಳ್ಳುವ ಸಾಧ್ಯತೆ ಹೆಚ್ಚು.

ಟಿ20 ವಿಶ್ವಕಪ್ ಪಂದ್ಯಗಳು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ (ಟಿವಿ) ಹಾಗೂ ಡಿಸ್ನಿ+ಹಾಟ್ ಸ್ಟಾರ್ ಆ್ಯಪ್‌ಗಳಲ್ಲಿ ನೇರ ಪ್ರಸಾರಗೊಳ್ಳಲಿವೆ.
 

click me!