T20 World Cup: Aus vs Ban ಆಸೀಸ್‌ ಅಬ್ಬರಕ್ಕೆ ಬಾಂಗ್ಲಾದೇಶ ಧೂಳೀಪಟ..!

By Suvarna NewsFirst Published Nov 4, 2021, 6:40 PM IST
Highlights

* ದುಬೈನಲ್ಲಿ ಬಾಂಗ್ಲಾವನ್ನು ಬಗ್ಗುಬಡಿದ ಆಸ್ಟ್ರೇಲಿಯಾ

* ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಆಸೀಸ್

* ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಂಡ ಫಿಂಚ್ ಬಳಗ

ದುಬೈ(ನ.04): ಲೆಗ್‌ ಸ್ಪಿನ್ನರ್ ಆ್ಯಡಂ ಜಂಪಾ(19/5) ಮಾರಕ ಬೌಲಿಂಗ್ ಹಾಗೂ ನಾಯಕ ಆ್ಯರೋನ್ ಫಿಂಚ್ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಬಾಂಗ್ಲಾದೇಶ ಎದುರು ಆಸ್ಟ್ರೇಲಿಯಾ ತಂಡವು 8 ವಿಕೆಟ್‌ಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಸೂಪರ್‌ 12 ಹಂತದ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದು, ಸೆಮಿಫೈನಲ್‌ ಪ್ರವೇಶಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದೆ.
  
ಇಲ್ಲಿನ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ ಕೇವಲ 74 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಸ್ಫೋಟಕ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಡೇವಿಡ್ ವಾರ್ನರ್ ಹಾಗೂ ಆ್ಯರೋನ್ ಫಿಂಚ್ ಜೋಡಿ ಕೇವಲ 5 ಓವರ್‌ನಲ್ಲಿ 58 ರನ್‌ಗಳ ಆರಂಭ ಪಡೆಯಿತು. ನಾಯಕ ಆ್ಯರೋನ್ ಫಿಂಚ್‌ ಕೇವಲ 20 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 40 ರನ್‌ ಬಾರಿಸಿದರು. ಮತ್ತೊಂದು ತುದಿಯಲ್ಲಿ ಡೇವಿಡ್ ವಾರ್ನರ್ 14 ಎಸೆತಗಳಲ್ಲಿ 3 ಬೌಂಡರಿ ಸಹಿತ 18 ರನ್‌ ಬಾರಿಸಿ ಶೌರಿಫುಲ್ ಇಸ್ಲಾಂ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಮಿಚೆಲ್ ಮಾರ್ಶ್‌ ಕೇವಲ 5 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ ಅಜೇಯ 16 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 

T20 World Cup: Aus vs Ban ಜಂಪಾ ಮಿಂಚಿನ ದಾಳಿಗೆ ಅಲ್ಪ ಮೊತ್ತಕ್ಕೆ ಬಾಂಗ್ಲಾದೇಶ ಆಲೌಟ್

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಬಾಂಗ್ಲಾದೇಶ ಕ್ರಿಕೆಟ್‌ ತಂಡವು ಆಸೀಸ್‌ ವೇಗಿಗಳ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಬಾಂಗ್ಲಾದೇಶ 10 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಇನ್ನು ಬಾಂಗ್ಲಾದೇಶದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಜವಾಬ್ದಾರಿಯುತ ಪ್ರದರ್ಶನ ತೋರಲಿಲ್ಲ. ಆ್ಯಡಂ ಜಂಪಾ ಮಾರಕ ದಾಳಿಗೆ ಬಾಂಗ್ಲಾದೇಶ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಬಾಂಗ್ಲಾದೇಶ ಕ್ರಿಕೆಟ್ ತಂಡದ ಪರ ಆರಂಭಿಕ ಬ್ಯಾಟರ್‌ ಮೊಹಮ್ಮದ್ ನಯೀಮ್ (17), ನಾಯಕ ಮೊಹಮದುಲ್ಲಾ (16) ಹಾಗೂ ಶಮೀಮ್‌ ಹೊಸೈನ್ (19) ರನ್ ಬಾರಿಸಿದ್ದು ಬಿಟ್ಟರೆ ಉಳಿದ್ಯಾವ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲಿಲ್ಲ. ಶಮೀಮ್ ಹೊಸೈನ್ 19 ರನ್‌ ಬಾರಿಸಿದ್ದೇ ಬಾಂಗ್ಲಾದೇಶ ಪರ ದಾಖಲಾದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿತು. ಬಾಂಗ್ಲಾದೇಶದ ಏಳು ಬ್ಯಾಟರ್‌ಗಳು ಒಂದಂಕಿ ಮೊತ್ತ ದಾಖಲಿಸಿದರೆ, ಈ ಪೈಕಿ ನಾಲ್ವರು ಬ್ಯಾಟರ್‌ಗಳು ಶೂನ್ಯ ಸುತ್ತಿ ನಿರಾಸೆ ಅನುಭವಿಸಿದರು.

ಸೆಮೀಸ್‌ ಆಸೆ ಜೀವಂತವಾಗಿರಿಸಿಕೊಂಡ ಆಸೀಸ್‌: ಇಂಗ್ಲೆಂಡ್ ಎದುರು ಆಘಾತಕಾರಿ ಸೋಲು ಕಂಡು, ನೆಟ್‌ ರನ್‌ರೇಟ್‌ನಲ್ಲೂ ಕುಸಿತ ಕಂಡಿದ್ದ ಆಸ್ಟ್ರೇಲಿಯಾ ತಂಡವು ಇದೀಗ ಬಾಂಗ್ಲಾದೇಶ ಎದುರು 82 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರುವ ಮೂಲಕ ತನ್ನ ನೆಟ್‌ ರನ್‌ರೇಟ್ ಕೂಡಾ ಉತ್ತಮ ಪಡಿಸಿಕೊಂಡಿದೆ. ಪಂದ್ಯಕ್ಕೂ ಮುನ್ನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಆ್ಯರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡ ಇದೀಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. ದಕ್ಷಿಣ ಆಫ್ರಿಕಾ ತಂಡವು ಸೂಪರ್ 12 ಹಂತದ ಕೊನೆಯ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇನ್ನೊಂದೆಡೆ ಆಸ್ಟ್ರೇಲಿಯಾ ತಂಡವು ತನ್ನ ಪಾಲಿನ ಸೂಪರ್ 12 ಹಂತದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಈ ಎರಡು ಪಂದ್ಯಗಳ ಫಲಿತಾಂಶದ ಬಳಿಕವಷ್ಟೇ ಸೂಪರ್ 12 ಹಂತಕ್ಕೇರುವ ತಂಡಗಳು ಯಾವುವು ಎನ್ನುವುದಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ. ಗ್ರೂಪ್ 01ರಲ್ಲಿ ಸತತ 4 ಪಂದ್ಯಗಳನ್ನು ಜಯಿಸಿರುವ ಇಂಗ್ಲೆಂಡ್ ಈಗಾಗಲೇ ಸೆಮೀಸ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
 

click me!