* ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾಗೆ ಗಾಯದ ಶಾಕ್
* ಜಸ್ಪ್ರೀತ್ ಬುಮ್ರಾ ಗಾಯದ ಬಗ್ಗೆ ಅಧಿಕೃತ ಮಾಹಿತಿ ನೀಡಿದ ಕೋಚ್ ರಾಹುಲ್ ದ್ರಾವಿಡ್
* ಈಗಾಗಲೇ ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಿಂದ ಹೊರಬಿದ್ದಿರುವ ಬುಮ್ರಾ
ಗುವಾಹಟಿ(ಅ.02): ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಹೆಡ್‌ಕೋಚ್ ರಾಹುಲ್ ದ್ರಾವಿಡ್, ವರ್ಚುವಲ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ್ದಾರೆ.
ವೇಗಿ ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್ ತಂಡದಿಂದ ಹೊರಬೀಳುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದರೂ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಧಿಕೃತ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಬುಮ್ರ ಅವರ ಗಾಯದ ಬಗ್ಗೆ ಅಧಿಕೃತ ವರದಿ ಇನ್ನಷ್ಟೇ ಬರಬೇಕಿದೆ. ಅವರು ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಬಿದ್ದಿದ್ದಾರೆ. ಆದರೆ ಮುಂದೆ ಏನಾಗಲಿದೆ ಎಂದು ಗೊತ್ತಿಲ್ಲ. ಈಗಿರುವ ಪರಿಸ್ಥಿತಿಯಲ್ಲಿ ಅವರು ಟಿ20 ವಿಶ್ವಕಪ್‌ಗೆ ಗೈರಾಗಲಿದ್ದಾರೆ. ಆದರೆ ಅಧಿಕೃತ ವರದಿ ಬಂದರಷ್ಟೇ ಖಚಿತವಾಗಿ ಹೇಳಬಹುದು. ಅವರು ತಂಡಕ್ಕೆ ಸೇರಿಕೊಳ್ಳುವ ಭರವಸೆ ಇದೆ’ ಎಂದಿದ್ದಾರೆ.
undefined
ತವರಿನಲ್ಲಿ ಅಸ್ಟ್ರೇಲಿಯಾ ಎದುರಿನ ಎರಡು ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದ ಜಸ್ಪ್ರೀತ್ ಬುಮ್ರಾ, ಬೆನ್ನು ನೋವಿನ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಿಂದ ಹೊರಬಿದ್ದಿದ್ದರು. ಆಸ್ಟ್ರೇಲಿಯಾ ಎದುರಿನ ಸರಣಿಗೂ ಮುನ್ನ ಬುಮ್ರಾ, ಏಷ್ಯಾಕಪ್ ಟಿ20 ಟೂರ್ನಿಯಿಂದಲೂ ಹೊರಗುಳಿದಿದ್ದರು.
ಸದ್ಯ, ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಿಂದ ಹೊರಬಿದ್ದಿರುವ ಜಸ್ಪ್ರೀತ್ ಬುಮ್ರಾ, ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ ಬಂದಿಳಿದಿದ್ದಾರೆ. ಸೂಕ್ತ ತಪಾಸಣೆಯ ಬಳಿಕ ಇನ್ನು ಎರಡರಿಂದ ಮೂರು ದಿನಗಳಲ್ಲಿ ವರದಿ ಬಂದ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಆ ನಂತರ ನಾವು ಮಾಹಿತಿಯನ್ನು ನೀಡಲಿದ್ದೇವೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರ ಗಾಯದ ಸ್ಥಿತಿಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್ ದ್ರಾವಿಡ್, ನಾನು ಮೆಡಿಕಲ್ ರಿಪೋರ್ಟ್ ಸಂಪೂರ್ಣವಾಗಿ ಓದಿಲ್ಲ. ಈ ಬಗ್ಗೆ ತಜ್ಞರು ಏನೆಂದು ತಿಳಿಸುತ್ತಾರೆ ಎಂದು ದ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಈ ಮೊದಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡಾ, ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ಆರಂಭವಾದರೂ, ಟೀಂ ಇಂಡಿಯಾ ತನ್ನ ಪಾಲಿನ ಮೊದಲ ಪಂದ್ಯವನ್ನುಅಕ್ಟೋಬರ್ 23ರಂದು ಪಾಕಿಸ್ತಾನ ವಿರುದ್ದ ಕಣಕ್ಕಿಳಿಯಲಿದೆ. ಹೀಗಾಗಿ ಇನ್ನೂ ಸಾಕಷ್ಟು ಕಾಲಾವಕಾಶ ಇರುವುದರಿಂದ ಈಗಲೇ ಬುಮ್ರಾ ಅಲಭ್ಯತೆ ಬಗ್ಗೆ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು
ICC T20 World Cup: ಜಸ್ಪ್ರೀತ್ ಬುಮ್ರಾ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ಸೌರವ್ ಗಂಗೂಲಿ..!
ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16ರಿಂದ ಆರಂಭವಾಗಿ ನವೆಂಬರ್ 13ರ ವರೆಗೆ ನಡೆಯಲಿದೆ. ಇನ್ನು ಭಾರತ ತಂಡವು ಅಕ್ಟೋಬರ್ 06ರಂದು ಆಸ್ಟ್ರೇಲಿಯಾಗೆ ವಿಮಾನವೇರಲಿದ್ದು, ಟೂರ್ನಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಎದುರು ತಲಾ ಒಂದೊಂದು ಅಭ್ಯಾಸ ಪಂದ್ಯವನ್ನಾಡಲಿದೆ. ಇದಾದ ಬಳಿಕ ಅಕ್ಟೋಬರ್ 23ರಂದು ಟೀಂ ಇಂಡಿಯಾ, ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯಜುವೇಂದ್ರ ಚಹಲ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆರ್ಶ್‌ದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯಿ, ದೀಪಕ್ ಚಹರ್