ಐಸ್‌ ಬಾತ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಬ್ರೆಟ್‌ ಲೀ; ವೇಗಿಗಳ ಗಾಯಗೊಳ್ಳುವುದೇಕೆಂದು ವಿವರಿಸಿದ ಆಸೀಸ್‌ ವೇಗಿ..!

By Naveen KodaseFirst Published Oct 5, 2022, 4:54 PM IST
Highlights

ಯುವ ವೇಗಿಗಳು ಗಾಯದ ಸಮಸ್ಯೆಯಿಂದ ಪಾರಾಗಲು ಸಲಹೆ ನೀಡಿದ ಬ್ರೆಟ್ ಲೀ
ಬ್ರೆಟ್ ಲೀ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್
ಐಸ್‌ ಬಾತ್‌ನಿಂದ ಯಾವುದೇ ಪ್ರಯೋಜನವಿಲ್ಲವೆಂದ ಬ್ರೆಟ್‌ ಲೀ

ನವದೆಹಲಿ(ಅ.05): ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ಭಾರತ ಕ್ರಿಕೆಟ್ ತಂಡದ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ, ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ವೇಗಿ ಬ್ರೆಟ್‌ ಲೀ, ಬೌಲರ್‌ಗಳು ಗಾಯದ ಸಮಸ್ಯೆಯಿಂದ ಪಾರಾಗುವುದು ಹೇಗೆ ಹಾಗೂ ಐಸ್‌ ಬಾತ್‌ನ ಕುರಿತಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಐಸ್‌ ಬಾತ್ ಕುರಿತು ಹೇಳುವುದಾದರೇ, ಅದನ್ನು ವೈಭವೀಕರಿಸಲಾಗಿದೆ. ಐಸ್‌ ಬಾತ್‌ನಿಂದ ಗಾಯದ ಸಮಸ್ಯೆ ನಿವಾರಣೆಯಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಭಾರತ ಅಥವಾ ಉಪಖಂಡದಲ್ಲಿ ಬಿಸಿಲಿನ ತಾಪಮಾನದಿಂದ ಪಾರಾಗಲು ಐಸ್ ಬಾತ್ ಮೊರೆ ಹೋಗುತ್ತಾರೆ. ನಿಜಕ್ಕೂ ಐಸ್‌ ಬಾತ್‌ನಿಂದ ನಿಜಕ್ಕೂ ಪ್ರಯೋಜನವಾಗಿದೆ ಎಂದು ಯಾರಾದರೂ ಕಾಗದದ ಮೂಲಕ ಸಾಬೀತು ಪಡಿಸಲಿ ಎಂದು ಬ್ರೆಟ್‌ ಲೀ ಸವಾಲು ಹಾಕಿದ್ದಾರೆ.

ಇನ್ನು ಯುವ ಯುವ ವೇಗಿಗಳು ಹೇಗೆ ಗಾಯದಿಂದ ದೂರವಿರಬಹುದು ಎನ್ನುವ ಸಲಹೆಯನ್ನು ಬ್ರೆಟ್ ಲೀ ವಿವರಿಸಿದ್ದಾರೆ. ತುಂಬಾ ಜನ ವೇಗದ ಬೌಲರ್‌ಗಳು ಸ್ಕಾಟ್ಸ್‌, ಲೆಗ್ ಪ್ರೆಸ್, ಬಾಡಿ ವೇಟ್‌, ಬೆಂಚ್ ಪ್ರೆಸ್‌, ಬೈಸಿಪ್ಸ್‌ ಕರ್ಲ್ಸ್‌ ನಂತಹ ಹೆವಿ ವೇಟ್ಸ್‌ಗಳನ್ನು ಎತ್ತುತ್ತಾರೆ. ಜಿಮ್‌ನಲ್ಲಿ ಕಸರತ್ತು ನಡೆಸುವುದು ಒಳ್ಳೆಯದೆ, ಆದರೆ ನೀವು 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಬೇಕೆಂದಿದ್ದರೆ, ಮೊದಲು ತೆಳುವಾದ ಮಾಂಸಖಂಡವನ್ನು ಹೊಂದಿರಬೇಕು ಎಂದು ಬ್ರೆಟ್ ಲೀ ಅಭಿಪ್ರಾಯಪಟ್ಟಿದ್ದಾರೆ.

ICC T20 World Cup 2022 ಗೆಲ್ಲಬಲ್ಲ ತಂಡದ ಬಗ್ಗೆ ಭವಿಷ್ಯ ನುಡಿದ ಮೈಕಲ್‌ ಬೆವನ್..!

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿದ್ದು, ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಪ್ರಶಸ್ರಿ ಗೆಲ್ಲಬಲ್ಲ ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿವೆ. ಇದೇ ಮಾತನ್ನು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕಲ್ ಬೆವನ್ ಅಭಿಪ್ರಾಯಪಟ್ಟಿದ್ದರು.
 
ಬ್ರೆಟ್ ಲೀ, ಆಸ್ಟ್ರೇಲಿಯಾ ಪರ 76 ಟೆಸ್ಟ್‌, 221 ಏಕದಿನ ಹಾಗೂ 25 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 310, 380 ಹಾಗೂ 28 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಬ್ರೆಟ್‌ ಲೀ ವೀಕ್ಷಕ ವಿವರಣೆಗಾರರಾಗಿಯೂ ಗಮನ ಸೆಳೆದಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ರೋಡ್ ಸೇಫ್ಟಿ ವರ್ಲ್ಡ್‌ ಸೀರಿಸ್‌ನಲ್ಲಿ ಬ್ರೆಟ್‌ ಲೀ, ಆಸ್ಟ್ರೇಲಿಯಾ ಲೆಜೆಂಡ್ಸ್‌ ಪರ ಕಣಕ್ಕಿಳಿದು ಸೈ ಎನಿಸಿಕೊಂಡಿದ್ದರು.

click me!