
ಕ್ಯಾಂಟರ್‌ಬರ್ರಿ(ಸೆ.22): ಹರ್ಮನ್‌ಪ್ರೀತ್ ಕೌರ್ ಬಾರಿಸಿದ ಸ್ಪೋಟಕ ಶತಕದ ನೆರವಿನಿಂದ, ಇಂಗ್ಲೆಂಡ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು 88 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ ಕ್ರಿಕೆಟ್ ತಂಡವು ಸರಣಿ ಗೆದ್ದು ಬೀಗಿದೆ. ಇದರ ಜತೆಗೆ 1999ರ ಬಳಿಕ ಬರೋಬ್ಬರಿ 23 ವರ್ಷಗಳ ನಂತರ ಆಂಗ್ಲರ ನಾಡಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಏಕದಿನ ಸರಣಿ ಜಯಿಸಿ ಸಂಭ್ರಮಿಸಿದೆ.
ಇಲ್ಲಿನ ಸೇಂಟ್ ಲಾರೆನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ಆರಂಭದಲ್ಲೇ ಶಫಾಲಿ ವರ್ಮಾ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ಸ್ಮೃತಿ ಮಂಧನಾ ಹಾಗೂ ಯಾಶ್ತಿಕಾ ಭಾಟಿಯಾ ಜೋಡಿ 54 ರನ್‌ಗಳ ಜತೆಯಾಟವಾಡುವ ಮೂಲಕ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದರು. ಯಾಶ್ತಿಕಾ 26 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮಂಧನಾ 40 ರನ್ ಬಾರಿಸಿ ಪೆವಿಲಿಯನ್ ಸೇರಿದರು.
ಸ್ಪೋಟಕ ಶತಕ ಸಿಡಿಸಿ ಮಿಂಚಿದ ಹರ್ಮನ್‌ಪ್ರೀತ್ ಕೌರ್: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್, ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುತ್ತಲೇ ಸಾಗಿದರು. ಹರ್ಮನ್‌ಪ್ರೀತ್‌ಗೆ ಮಧ್ಯಮ ಕ್ರಮಾಂಕದಲ್ಲಿ ಹರ್ಲೀನ್ ಡಿಯೋಲ್ ಉತ್ತಮ ಸಾಥ್ ನೀಡಿದರು. 4ನೇ ವಿಕೆಟ್‌ಗೆ ಈ ಜೋಡಿ 113 ರನ್‌ಗಳ ಜತೆಯಾಟ ನಿಭಾಯಿಸಿತು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಹರ್ಮನ್‌ಪ್ರೀತ್ ಕೌರ್, ಪಿಚ್‌ಗೆ ಸೆಟ್ ಆಗುತ್ತಿದ್ದಂತೆಯೇ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಏಕದಿನ ಕ್ರಿಕೆಟ್ ವೃತ್ತಿಜೀವನದ 5ನೇ ಶತಕ ಸಿಡಿಸಿ ಸಂಭ್ರಮಿಸಿದರು. ಹರ್ಮನ್‌ಪ್ರೀತ್ ಕೌರ್ 111 ಎಸೆತಗಳನ್ನು ಎದುರಿಸಿ 18 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 143 ರನ್ ಚಚ್ಚಿದರು. ಇನ್ನು ಮತ್ತೊಂದು ತುದಿಯಲ್ಲಿ ಹರ್ಲಿನ್ ಡಿಯೋಲ್ ಆಕರ್ಷಕ 58 ರನ್ ಸಿಡಿಸಿದರು. ಕೊನೆಯ 10 ಓವರ್‌ಗಳಲ್ಲಿ ಭಾರತ ತಂಡವು 121 ರನ್‌ಗಳನ್ನು ಚಚ್ಚಿತು. ಹರ್ಮನ್‌ಪ್ರೀತ್ ಕೌರ್ ಕೊನೆಯ 11 ಎಸೆತಗಳಲ್ಲಿ 43 ರನ್ ಸಿಡಿಸಿದರು.
ಇನ್ನು ಕೊನೆಯಲ್ಲಿ ಆಲ್ರೌಂಡರ್ ಪೂಜಾ ವಸ್ತ್ರಾಕರ್ 18 ರನ್ ಬಾರಿಸಿದರೆ, ದೀಪ್ತಿ ಶರ್ಮಾ ಅಜೇಯ 15 ರನ್ ಚಚ್ಚುವ ಮೂಲಕ ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡಿದರು. ಅಂದಹಾಗೆ ಇದು, ಇಂಗ್ಲೆಂಡ್ ವಿರುದ್ದ ಭಾರತ ಮಹಿಳಾ ಕ್ರಿಕೆಟ್ ತಂಡವು ದಾಖಲಿಸಿದ ಗರಿಷ್ಠ ಸ್ಕೋರ್ ಎನಿಸಿಕೊಂಡಿತು.
ಮಹಿಳಾ ಏಷ್ಯಾಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ; ಕನ್ನಡತಿ ಗಾಯಕ್ವಾಡ್‌ಗೆ ಸ್ಥಾನ
ಇನ್ನು ಭಾರತ ನೀಡಿದ್ದ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಇಂಗ್ಲೆಂಡ್ ತಂಡವು 47 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳನ್ನು ಕಳೆದುಕೊಂಡಿತು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಅಲೀಸ್ ಕ್ಯಾಪ್ಸೆ(39), ಡೇನಿಯಲ್ ವ್ಯಾಟ್(65), ನಾಯಕಿ ಆಮಿ ಜೋನ್ಸ್(39) ಹಾಗೂ ಚಾರ್ಲೊಟ್ಟೆ ಡೀನ್(37) ಪ್ರತಿರೋಧ ತೋರಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಭಾರತ ಕ್ರಿಕೆಟ್ ತಂಡದ ಪರ ರೇಣುಕಾ ಸಿಂಗ್ 4 ವಿಕೆಟ್ ಪಡೆದರೆ, ಡಿ ಹೇಮಲತಾ 2 ಹಾಗೂ ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.