ರೋಹಿತ್ ಶರ್ಮಾ ಮತ್ತೆ ಮುಂಬೈ ನಾಯಕನಾಗುತ್ತಾರಾ? ಹಿಟ್‌ಮ್ಯಾನ್ ನಾಯಕತ್ವದಲ್ಲಿ ಆಡಲು ಪಾಂಡ್ಯ ಸಮ್ಮತಿ..! 6ನೇ ಕಪ್‌ ಗೆಲ್ಲಲು ಮಾಸ್ಟರ್ ಪ್ಲಾನ್

Published : Oct 30, 2026, 06:40 PM IST
Rohit Sharma and Hardik Pandya

ಸಾರಾಂಶ

ಹಾರ್ದಿಕ್ ಪಾಂಡ್ಯ ಮುಂಬರುವ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸದಿರಲು ತೀರ್ಮಾನಿಸಿದ್ದು, ಹೊಸ ನಾಯಕನ ಹುಡುಕಾಟ ಆರಂಭವಾಗಿದೆ. ಯಶಸ್ವಿ ನಾಯಕ ರೋಹಿತ್ ಶರ್ಮಾ ಮತ್ತೆ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯಿದ್ದು, ತಿಲಕ್ ವರ್ಮಾ ಹೆಸರೂ ಪರಿಶೀಲನೆಯಲ್ಲಿದೆ.

ಮುಂಬೈ(ಅ.30): ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಸುದ್ದಿಗಳು ಹೊರಬರುತ್ತಿವೆ. ಅದರಲ್ಲೂ ಮಾಜಿ ಕ್ರಿಕೆಟಿಗ ಕೀರನ್ ಪೊಲ್ಲಾರ್ಡ್‌, ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಆದ ಬೆನ್ನಲ್ಲೇ, ಹಾರ್ದಿಕ್ ಪಾಂಡ್ಯ ಟ್ರೇಡ್ ಸುದ್ದಿಗೆ ಬ್ರೇಕ್ ಬೀಳುವ ನಿರೀಕ್ಷೆಯಿದೆ. ಇದೀಗ ಮುಂಬರುವ 2027ರ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸದಿರಲು ತೀರ್ಮಾನಿಸಿದ್ದಾರೆ. ಇದೀಗ ಹೊಸ ನಾಯಕನ ಹುಡುಕಾಟದಲ್ಲಿರುವ ಮುಂಬೈ ಇಂಡಿಯನ್ಸ್‌ಗೆ ಮುಂಬರುವ ಐಪಿಎಲ್‌ಗೆ ಇಬ್ಬರು ನಾಯಕರ ಹೆಸರು ಮುನ್ನೆಲೆಗೆ ಬಂದಿದೆ. ಈ ಪೈಕಿ ತನ್ನ ಯಶಸ್ವಿ ನಾಯಕ ರೋಹಿತ್ ಶರ್ಮಾ ಮೊದಲ ಆಯ್ಕೆಯಾದರೆ, ಟೀಂ ಇಂಡಿಯಾ ಉಪನಾಯಕರಾಗಿರುವ ತಿಲಕ್ ವರ್ಮಾ ಎರಡನೇ ಆಯ್ಕೆಯಾಗಿದ್ದಾರೆ. ಇದೆಲ್ಲದರ ನಡುವೆ ರೋಹಿತ್ ಶರ್ಮಾ ಒಂದು ವೇಳೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆದರೆ ಹಾರ್ದಿಕ್ ಪಾಂಡ್ಯ ಆಟಗಾರನಾಗಿ ಮುಂಬೈ ತಂಡದಲ್ಲೇ ಮುಂದುವರೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಹೌದು, ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಪ್ರಸ್ತಾಪಿತ ಟ್ರೇಡ್ ಒಪ್ಪಂದ ಕಾರ್ಯರೂಪಕ್ಕೆ ಬರದಿದ್ದರೂ ರೋಹಿತ್ ಶರ್ಮಾ ಮತ್ತೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡರೆ ಹಾರ್ದಿಕ್ ಅದನ್ನು ಒಪ್ಪಿಕೊಳ್ಳಲು ಸಿದ್ಧರಿದ್ದಾರೆ. ಈ ಬೆಳವಣಿಗೆ ನಿಜವಾದರೆ, ಎರಡು ಋತುಗಳ ಹಿಂದೆ ನಡೆದ ನಾಯಕತ್ವ ಬದಲಾವಣೆಯ ಹಿನ್ನೆಲೆಯಲ್ಲಿ ಮುಂಬೈ ತಂಡದಲ್ಲಿ ಕುತೂಹಲಕಾರಿ ಪರಿಸ್ಥಿತಿ ನಿರ್ಮಾಣವಾಗಬಹುದು.

ನಾಯಕತ್ವ ಬದಲಾವಣೆಯಿಂದ ಸಾಕಷ್ಟು ಚರ್ಚೆ

2024ರಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದಾಗ ದೊಡ್ಡ ಬದಲಾವಣೆಯೊಂದು ನಡೆದಿತ್ತು. ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದುಕೊಟ್ಟಿದ್ದ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಹಾರ್ದಿಕ್‌ಗೆ ಮುಂಬೈ ತಂಡದ ಜವಾಬ್ದಾರಿ ವಹಿಸಲಾಗಿತ್ತು. ಈ ನಿರ್ಧಾರಕ್ಕೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಒಂದು ವರ್ಗದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡದಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ.

2026ರ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಕಠಿಣ ಋತುವನ್ನು ಎದುರಿಸಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಗೆದ್ದ ತಂಡ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿತ್ತು. ಆರನೇ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಮುಂಬೈಗೆ 2020ರ ಬಳಿಕ ಮತ್ತೊಮ್ಮೆ ನಿರಾಸೆ ಎದುರಾಗಿತ್ತು.

ಮತ್ತೆ ರೋಹಿತ್ ಹೆಸರಿನತ್ತ ಮುಖ ಮಾಡಿದ ಮುಂಬೈ

ಮಾಧ್ಯಮ ವರದಿಯ ಪ್ರಕಾರ, ಹಿಂದಿನ ಋತುವಿನಲ್ಲೇ ರೋಹಿತ್ ಶರ್ಮಾ ಅವರನ್ನು ಮತ್ತೆ ನಾಯಕನನ್ನಾಗಿ ನೇಮಿಸುವ ಸಾಧ್ಯತೆಯನ್ನು ಮುಂಬೈ ಇಂಡಿಯನ್ಸ್ ಪರಿಶೀಲಿಸಿತ್ತು. ಇತರ ಆಟಗಾರರ ಹೆಸರುಗಳು ಚರ್ಚೆಯಲ್ಲಿದ್ದರೂ, ಅಂತಿಮವಾಗಿ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಅವರನ್ನು ಮತ್ತೆ ನಾಯಕತ್ವ ವಹಿಸಿಕೊಳ್ಳುವಂತೆ ಸಂಪರ್ಕಿಸಿತು ಎಂದು ವರದಿ ತಿಳಿಸಿದೆ. ಕುತೂಹಲಕಾರಿ ಸಂಗತಿಯೆಂದರೆ, ಆರಂಭದಲ್ಲಿ ರೋಹಿತ್ ಅವರು ತಿಲಕ್ ವರ್ಮಾ ಹೆಸರನ್ನು ನಾಯಕತ್ವಕ್ಕೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಫ್ರಾಂಚೈಸಿ ಮಾತ್ರ ರೋಹಿತ್ ಶರ್ಮಾ ಅವರೇ ಮತ್ತೆ ತಂಡದ ನಾಯಕತ್ವ ವಹಿಸಿಕೊಳ್ಳಬೇಕೆಂದು ಬಯಸಿತ್ತು.

ವರದಿಯ ಪ್ರಕಾರ, ಸರಣಿ ಮಾತುಕತೆಗಳ ಬಳಿಕ ರೋಹಿತ್ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿದ್ದರು. ಮುಂಬೈ ಇಂಡಿಯನ್ಸ್‌ನ ಹೊಸ ಕೋಚಿಂಗ್ ಸಿಬ್ಬಂದಿಯನ್ನು ನೇಮಿಸುವ ಪ್ರಕ್ರಿಯೆಯಲ್ಲೂ ಅವರ ಸಲಹೆ ಪಡೆಯಲಾಗಿತ್ತು ಎಂದು ಹೇಳಲಾಗಿದೆ. ಐಪಿಎಲ್‌ನಲ್ಲಿ ನಾಯಕರಾಗಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ದಾಖಲೆ ಎಂ.ಎಸ್. ಧೋನಿ ಅವರೊಂದಿಗೆ ಹಂಚಿಕೊಂಡಿರುವ ರೋಹಿತ್, ಇದೀಗ ಮುಂಬೈ ಇಂಡಿಯನ್ಸ್‌ನಲ್ಲಿ ಮತ್ತೆ ನಾಯಕತ್ವದ ಪಾತ್ರಕ್ಕೆ ಮರಳುವ ಸಾಧ್ಯತೆ ಇದೆ. ರೋಹಿತ್ ಶರ್ಮಾ ಹಾಗೂ ಎಂ ಎಸ್ ಧೋನಿ ಇಬ್ಬರೂ ನಾಯಕರಾಗಿ ತಲಾ ಐದು ಐಪಿಎಲ್ ಟ್ರೋಫಿ ಜಯಿಸಿದ ಸಾಧನೆ ಮಾಡಿದ್ದಾರೆ.

ಇನ್ನೊಂದೆಡೆ, ಮಾಜಿ ನಾಯಕನ ಅಡಿಯಲ್ಲಿ ಆಡಲು ಹಾರ್ದಿಕ್ ಸಿದ್ಧರಿದ್ದಾರೆ ಎನ್ನುವ ವರದಿ ಗಮನ ಸೆಳೆದಿದೆ. ಇದು ನಿಜವಾದರೆ, ಮುಂಬೈ ಇಂಡಿಯನ್ಸ್‌ನಲ್ಲಿ ಮುಂದುವರಿಯುವ ಹಾರ್ದಿಕ್ ಅವರ ನಿರ್ಧಾರವು ಸಹಜವಾಗಿಯೇ ಮುಂಬೈಗೆ ಮತ್ತಷ್ಟು ಬಲ ತಂದುಕೊಡುವ ನಿರೀಕ್ಷೆಯಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಗಿತಾ ಭುವಿ ಜಮಾನಾ? 4 ವರ್ಷದ ಬಳಿಕ ಕಮ್‌ಬ್ಯಾಕ್; ಕೇವಲ 3 ಪಂದ್ಯಕ್ಕೆ ಮೂಲೆಗುಂಪು! ಆ 12 ಬಾಲ್‌ಗಳ ಮ್ಯಾಜಿಕ್ ಏನು?
ಅಂಡರ್-19 ಏಷ್ಯಾಕಪ್‌ಗೂ ಜಂಟಿಯಾಗಿ ಎಂಟ್ರಿಕೊಟ್ಟ ದ್ರಾವಿಡ್-ಸೆಹ್ವಾಗ್ ಪುತ್ರರು..! ಇನ್ನು ಟೀಂ ಇಂಡಿಯಾಗೆ ಲಗ್ಗೆಯಿಡೋದು ಬಾಕಿ