IPL Qualifier 2: ರಾಜಸ್ಥಾನ ವಿರುದ್ಧ ಭರ್ಜರಿ ಜಯ, RCB ವಿರುದ್ಧ ಫೈನಲ್‌ಗೆ ಅರ್ಹತೆ ಪಡೆದ ಗುಜರಾತ್‌ ಟೈಟಾನ್ಸ್‌

Published : May 29, 2026, 11:30 PM IST
GT vs RR Qualifier 2 IPL 2026

ಸಾರಾಂಶ

ಶುಭಮನ್ ಗಿಲ್ ಅವರ ಭರ್ಜರಿ ಶತಕ ಮತ್ತು ಸಾಯಿ ಸುದರ್ಶನ್ ಅವರ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್, ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಗುಜರಾತ್ ತಂಡವು ಆರ್‌ಸಿಬಿ ವಿರುದ್ಧ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದಿದೆ.

ಚಂಡೀಗಢ (ಮೇ.29): ಐಪಿಎಲ್ 2026ರ ಹೈ-ವೋಲ್ಟೇಜ್ ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಅದರೊಂದಿಗೆ ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಆರ್‌ಸಿಬಿ ವಿರುದ್ಧದ ಫೈನಲ್‌ ಪಂದ್ಯಕ್ಕೆ ಗುಜರಾತ್‌ ಟೈಟಾನ್ಸ್‌ ಅಣಿಯಾಗಿದೆ. ಗುಜರಾತ್‌ ಟೈಟಾನ್ಸ್‌ ಹಾಗೂ ಆರ್‌ಸಿಬಿ ತಂಡ ಹಾಲಿ ಟೂರ್ನಿಯಲ್ಲಿ 4ನೇ ಬಾರಿಗೆ ಮುಖಾಮುಖಿಯಾಗಲಿದೆ. ಲೀಗ್‌ ಹಂತದಲ್ಲಿ 2 ಬಾರಿ, ಹಾಗೂ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ನಾಯಕ ಶುಭಮನ್ ಗಿಲ್ ಅವರ ಆಕರ್ಷಕ ಶತಕ ಹಾಗೂ ಸಾಯಿ ಸುದರ್ಶನ್ ಅವರ ಸ್ಫೋಟಕ ಅರ್ಧಶತಕದ ನೆರವೇರಿಕೆಯಿಂದ ಗುಜರಾತ್ ಟೈಟಾನ್ಸ್ ತಂಡವು ರಾಜಸ್ಥಾನ ನೀಡಿದ್ದ 215 ರನ್‌ಗಳ ಬೃಹತ್ ಗುರಿಯನ್ನು ಅತ್ಯಂತ ಸುಲಭವಾಗಿ ಚೇಸ್ ಮಾಡಿ, ಪ್ರತಿಷ್ಠಿತ ಫೈನಲ್‌ಗೆ ಅರ್ಹತೆ ಪಡೆದಿದೆ.

ಇದರೊಂದಿಗೆ ರಾಜಸ್ಥಾನ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ದಿಟ್ಟ ಹೋರಾಟ ಮತ್ತು 96 ರನ್‌ಗಳ ಇನ್ನಿಂಗ್ಸ್ ವ್ಯರ್ಥವಾದಂತಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್‌ಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಕೇವಲ 9 ರನ್ ಗಳಿಸುವಷ್ಟರಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಧ್ರುವ್ ಜುರೇಲ್ ವಿಕೆಟ್ ಕಳೆದುಕೊಂಡು ತಂಡ ಶೋಚನೀಯ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಕ್ರೀಸ್‌ಗಿಳಿದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಸಿಕ್ಸರ್, ಬೌಂಡರಿಗಳ ಸುರಿಮಳೆಗೈದ ಅವರು ಕೇವಲ 4 ರನ್‌ಗಳಿಂದ ಸತತ ಎರಡನೇ ಶತಕ ಮಿಸ್ ಮಾಡಿಕೊಂಡು 96 ರನ್‌ಗೆ ಔಟಾದರು.

ಕೊನೆಯಲ್ಲಿ ರವೀಂದ್ರ ಜಡೇಜಾ ಅವರ ಅಜೇಯ 45 ರನ್ ಮತ್ತು ಡೊನೊವನ್ ಫೆರಿರಾ ಅವರ ಸಿಡಿಲಬ್ಬರದ ಬ್ಯಾಟಿಂಗ್ (11 ಎಸೆತಗಳಲ್ಲಿ 38 ರನ್) ನೆರವಿನಿಂದ ರಾಜಸ್ಥಾನ ರಾಯಲ್ಸ್ 6 ವಿಕೆಟ್ ನಷ್ಟಕ್ಕೆ 214 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಪ್ರತಿಯಾಗಿ ಗುಜರಾತ್‌ ಟೈಟಾನ್ಸ್‌ ತಂಡ 18.4 ಓವರ್‌ಗಳಲ್ಲಿ 3 ವಿಕೆಟ್‌ಗೆ 219 ರನ್‌ ಬಾರಿಸಿ ಗೆಲುವು ಕಂಡಿತು.

215 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ನಾಯಕ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಮೊದಲ ವಿಕೆಟ್‌ಗೆ ಸ್ಫೋಟಕ ಬ್ಯಾಟಿಂಗ್ ನಡೆಸಿ ಅಡಿಪಾಯ ಹಾಕಿಕೊಟ್ಟರು. ರಾಜಸ್ಥಾನದ ಪ್ರತಿಯೊಬ್ಬ ಬೌಲರ್‌ಗಳನ್ನೂ ಮನಬಂದಂತೆ ದಂಡಿಸಿದ ಈ ಜೋಡಿ ಪಂದ್ಯವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಸಾಯಿ ಸುದರ್ಶನ್ ಕೇವಲ 32 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಂತೆ 58 ರನ್ ಚಚ್ಚಿ ಬ್ರಿಜೇಶ್ ಶರ್ಮಾ ಎಸೆತದಲ್ಲಿ ಸತತ 2ನೇ ಪಂದ್ಯದಲ್ಲೂ 'ಹಿಟ್ ವಿಕೆಟ್' ಆಗಿ ಔಟಾದರು. ಔಟಾಗುವಾಗ ಅವರ ಸ್ಟ್ರೈಕ್ ರೇಟ್ 181.25 ರಷ್ಟಿತ್ತು!

ಜವಾಬ್ದಾರಿಯುತ ಹಾಗೂ ಅಷ್ಟೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಕ್ಯಾಪ್ಟನ್ ಶುಭಮನ್ ಗಿಲ್ ಕೇವಲ 53 ಎಸೆತಗಳಲ್ಲಿ ಬರೋಬ್ಬರಿ 15 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 104 ರನ್ ಸಿಡಿಸಿ ಅಬ್ಬರಿಸಿದರು. 196.23ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಗಿಲ್, ಜೋಫ್ರಾ ಆರ್ಚರ್ ಎಸೆತದಲ್ಲಿ ಎಲ್‌ಬಿಡಬ್ಲ್ಯೂ (lbw) ಆಗಿ ನಿರ್ಗಮಿಸುವಷ್ಟರಲ್ಲಿ ಗುಜರಾತ್ ತಂಡ ಗೆಲುವಿನ ದಡ ಸೇರುವುದು ಖಚಿತವಾಗಿತ್ತು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮತ್ತೊಂದು ಶತಕ ಮಿಸ್‌ ಮಾಡಿಕೊಂಡ ವೈಭವ್‌ ಸೂರ್ಯವಂಶಿ, ಗುಜರಾತ್‌ಗೆ 215 ರನ್‌ ಟಾರ್ಗೆಟ್‌
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡು ಬಾರಿ ಟಾಸ್ ಹಾಕಿದ್ದೇಕೆ? ಗುಜರಾತ್‌ಗೆ ಆಯಿತಾ ಅನ್ಯಾಯಾ?