ಕೊರೋನಾ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಹೀಗಿರುವಾಗಲೇ ಕ್ರೀಡಾಂಗಣ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿರುವುದರಿಂದ ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ನಡೆಸಲು ಬಿಸಿಸಿಐಗೆ ಅವಕಾಶ ಸಿಕ್ಕಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮೇ.18): ಕೊರೋನಾ ನಿಗ್ರಹಕ್ಕಾಗಿ ಜಾರಿಯಲ್ಲಿದ್ದ ಲಾಕ್‌ಡೌನ್ ಅನ್ನು ಇನ್ನೂ ಎರಡು ವಾರ ವಿಸ್ತರಣೆ ಮಾಡಿರುವ ಕೇಂದ್ರ ಸರ್ಕಾರ, ಪ್ರೇಕ್ಷಕರಿಲ್ಲದೆ ಕ್ರೀಡಾ ಸಮುಚ್ಚಯ ಹಾಗೂ ಕ್ರೀಡಾಂಗಣಗಳನ್ನು ತೆರೆಯಲು ಅನುಮತಿ ನೀಡಿದೆ. ಇದರಿಂದಾಗಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆಯ ಆಸೆ ಚಿಗುರೊಡೆಯುವಂತಾಗಿದೆ.
ದೇಶದಲ್ಲಿ ಮಾ.29ರಿಂದ ಐಪಿಎಲ್ ಪ್ರಾರಂಭವಾಗಬೇಕಿತ್ತು. ಕೊರೋನಾ ಹಿನ್ನೆಲೆಯಲ್ಲಿ ಅದನ್ನು ಅನಿರ್ದಿಷ್ಟಾವಧಿಗೆ ಐಪಿಎಲ್ ಅನ್ನು ಮುಂದೂಡಲಾಗಿತ್ತು. ಕೊರೋನಾ ಇಲ್ಲದೇ ಹೋಗಿದ್ದರೆ ಇಷ್ಟೊತ್ತಿಗೆ ದೇಶದಲ್ಲಿ ಐಪಿಎಲ್ ಪಂದ್ಯಾವಳಿ ನಡೆಯುತ್ತಿರುತ್ತಿತ್ತು. ಇದೀಗ ಕ್ರೀಡಾಂಗಣ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿರುವುದರಿಂದ ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ನಡೆಸಲು ಬಿಸಿಸಿಐಗೆ ಅವಕಾಶ ಸಿಕ್ಕಿದೆ. ಆದರೆ ಬಿಸಿಸಿಐ ಮುಂದೇನು ಮಾಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಐಪಿಎಲ್ ನಡೆಯದಿದ್ದರೇ ಬಿಸಿಸಿಐಗೆ ಆರ್ಥಿಕವಾಗಿ ದೊಡ್ಡ ಹೊಡೆತ ಬೀಳಲಿದೆ ಎಂದು ಇತ್ತೀಚೆಗಷ್ಟೇ ಬಿಸಿಸಿಐ ಖಜಾಂಚಿ ಅರುಣ್ ದುಮಾಲ್ ಹೇಳಿದ್ದರು. ಈ ಹಿಂದೆಯೇ ಹಲವು ಕ್ರಿಕೆಟ್ ತಜ್ಞರು, ಮಾಜಿ ಕ್ರಿಕೆಟಿಗರು ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೆ ಪಂದ್ಯಗಳನ್ನು ನಡೆಸಲು ಸಲಹೆ ನೀಡಿದ್ದರು.
IPL 2020 ಸಂಪೂರ್ಣ ರದ್ದಾದರೆ BCCIಗೆ ಆಗುವ ನಷ್ಟವೆಷ್ಟು? ಇಲ್ಲಿದೆ ವಿವರ!
ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸುವ ಅನುಮತಿ ಇದ್ದರೂ, ವಿಮಾನ ಪ್ರಯಾಣಕ್ಕೆ ನಿರ್ಬಂಧ ಇರುವುದರಿಂದ ದೇಶೀಯ ಹಾಗೂ ವಿದೇಶಿ ಪ್ರಯಾಣಿಕರ ಸಂಚಾರಕ್ಕೆ ಸಮಸ್ಯೆಯಾಗಲಿದೆ. ಬಿಸಿಸಿಐ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಮನವೊಲಿಸುತ್ತಾ? ಅಥವಾ ಐಪಿಎಲ್ ಕೈಬಿಡುತ್ತಾ ಎಂಬುದನ್ನು ಕಾದುನೋಡಬೇಕಾಗಿದೆ.