
ಹೈದರಾಬಾದ್(ಸೆ.26): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಪಂದ್ಯ ಮುಕ್ತಾಯದ ಬಳಿಕ ತಾವು ಅನಾರೋಗ್ಯದ ಹೊರತಾಗಿಯೂ ನಿರ್ಣಾಯಕ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದರ ಹಿಂದಿನ ರಹಸ್ಯವನ್ನು ಮುಂಬೈ ಮೂಲದ ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬಿಚ್ಚಿಟ್ಟಿದ್ದಾರೆ.
ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ನಿರ್ಣಾಯಕ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಆಕರ್ಷಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾದರು. ಮೂರನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಸಮಯೋಚಿತ 104 ರನ್‌ಗಳ ಜತೆಯಾಟ ನಿಭಾಯಿಸಿದರು. ಸೂರ್ಯಕುಮಾರ್ ಯಾದವ್ ಕೇವಲ 36 ಎಸೆತಗಳನ್ನು ಎದುರಿಸಿ ತಲಾ 5 ಬೌಂಡರಿ ಹಾಗೂ ಸಿಕ್ಸರ್‌ಗಳ ಸಹಾಯದಿಂದ 69 ರನ್ ಚಚ್ಚಿದರು. ಪರಿಣಾಮ ಟೀಂ ಇಂಡಿಯಾ 6 ವಿಕೆಟ್‌ಗಳ ಜಯ ಸಾಧಿಸುವುದರೊಂದಿಗೆ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.
Ind vs Aus: ಗುರು ರಾಹುಲ್ ದ್ರಾವಿಡ್ ದಾಖಲೆ ಮುರಿದ ವಿರಾಟ್ ಕೊಹ್ಲಿ..!
ಪಂದ್ಯ ಮುಕ್ತಾಯದ ಬಳಿಕ ಗೆಲುವಿನ ಹೀರೋಗಳಾದ ಅಕ್ಷರ್ ಪಟೇಲ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ನಡುವಿನ ಮಾತುಕತೆಯ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದರಲ್ಲಿ ಫಿಸಿಯೋ ರೂಂನಲ್ಲಿ ಎಲ್ಲರೂ ಏಕೆ ನಿಮ್ಮ ಬಗ್ಗೆಯೇ ಮಾತನಾಡುತ್ತಿದ್ದರು? ನೀವೇಕೆ ಬೆಳಗ್ಗೆ 3 ಗಂಟೆಗೆ ಎದ್ದಿದ್ದಿರಿ? ಎಂದು ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೂರ್ಯಕುಮಾರ್ ಯಾದವ್, 'ಕಳೆದ ರಾತ್ರಿ ವಾತಾವರಣ ಬದಲಾಗಿತ್ತು, ಹೀಗಾಗಿ ಪ್ರಯಾಣದಲ್ಲೂ ಕೊಂಚ ಬದಲಾವಣೆಗಳಾದವು. ಹೀಗಾಗಿ ಈ ಎಲ್ಲಾ ಕಾರಣಗಳಿಂದ, ನನಗೆ ಹೊಟ್ಟೆ ನೋವು ಬರಲಾರಂಭಿಸಿತು. ಇದರ ಜತೆಗೆ ಜ್ವರ ಕೂಡಾ ಕಾಣಿಸಿಕೊಂಡಿತು. ಇದೇ ವೇಳೆ ಮಹತ್ವದ ನಿರ್ಣಾಯಕ ಪಂದ್ಯ ನಮ್ಮ ಮುಂದಿದೆ ಎನ್ನುವ ಅರಿವೂ ನನಗಿತ್ತು' ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಹೀಗಾಗಿ ನಾನು ನನ್ನ ವೈದ್ಯರು ಹಾಗೂ ಫಿಸಿಯೋಗಳಿಗೆ, ಇದೇ ಏನಾದರೂ ವಿಶ್ವಕಪ್ ಫೈನಲ್ ಆಗಿದ್ದರೆ ಹೇಗಿರುತ್ತಿತ್ತು? ಅನಾರೋಗ್ಯದ ಸಮಸ್ಯೆಯಿಂದ ನಾನು ತಂಡದಿಂದ ಹೊರಗುಳಿಯಲು ಬಯಸುವುದಿಲ್ಲ. ನೀವು ಏನು ಮಾಡುತ್ತೀರೋ ಗೊತ್ತಿಲ್ಲ, ಯಾವುದಾದರೂ ಔಷಧಿ ಅಥವಾ ಇಂಜೆಕ್ಷನ್ ಆದರೂ ಕೊಡಿ, ಆದರೆ ಸಂಜೆಯ ಮ್ಯಾಚ್‌ಗೆ ನನ್ನನ್ನು ಸಿದ್ದಪಡಿಸಿ ಎಂದು ಕೇಳಿಕೊಂಡೆ. ನಾನು ಟೀಂ ಇಂಡಿಯಾ ಜೆರ್ಸಿ ತೊಟ್ಟು ಮೈದಾನಕ್ಕಿಳಿದ ಮೇಲೆ ಆಗುವ ರೋಮಾಂಚನವೇ ಬೇರೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.