
ಪುಣೆ(ಮಾ.24): ಇಂಗ್ಲೆಂಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ನಾನು ಬೇಗ ವಿಕೆಟ್ ಒಪ್ಪಿಸಿದ್ದರಿಂದ ಕೃನಾಲ್ ಪಾಂಡ್ಯ ಒಂದೊಳ್ಳೆಯ ಇನಿಂಗ್ಸ್ ನೋಡಲು ನಮಗೆ ಸಿಕ್ಕಂತೆ ಆಯಿತು ಎಂದು ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಇಲ್ಲಿನ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೇವಲ ಒಂದು ರನ್ ಬಾರಿಸಿ ಬೆನ್ ಸ್ಟೋಕ್ಸ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇದಾದ ಕ್ರೀಸ್‌ಗಿಳಿದ ಕೃನಾಲ್ ಪಾಂಡ್ಯ ಚೊಚ್ಚಲ ಏಕದಿನ ಪಂದ್ಯದಲ್ಲೇ ಕೇವಲ 26 ಎಸೆತಗಳಲ್ಲಿ ದಾಖಲೆಯ ಅರ್ಧಶತಕ ಬಾರಿಸಿ ಮಿಂಚಿದರು. 6ನೇ ವಿಕೆಟ್‌ಗೆ ಕೆ.ಎಲ್ ರಾಹುಲ್(62*) ಜತೆ ಕೃನಾಲ್ ಪಾಂಡ್ಯ ಮುರಿಯದ 112 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದ್ದರು.
ಈ ಪಂದ್ಯದಲ್ಲಿ ಟೀಂ ಇಂಡಿಯಾ 66 ರನ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಪಂದ್ಯ ಮುಕ್ತಾಯದ ಬಳಿಕ ಬಿಸಿಸಿಐ ಟಿವಿ ಸಂದರ್ಶನದಲ್ಲಿ ಸಹೋದರ ಹಾರ್ದಿಕ್ ಪಾಂಡ್ಯ ಜತೆ ಕೃನಾಲ್ ಪಾಂಡ್ಯ ತಮ್ಮ ಪಾದಾರ್ಪಣೆ ಪಂದ್ಯದ ಅಪರೂಪದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.
ಕೃನಾಲ್ ಪಾಂಡ್ಯ ಬಗ್ಗೆ ನಿಮಗೆ ಗೊತ್ತಿರದ ಟಾಪ್ 10 ಕುತೂಹಲಕಾರಿ ಸಂಗತಿಗಳಿವು..!
ಈ ವೇಳೆ ಮಾತನಾಡಿದ ಹಾರ್ದಿಕ್ ಪಾಂಡ್ಯ, ನೀನು ಅಷ್ಟು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದನ್ನು ನೋಡಿ, ನಾನು ಬೇಗ ಔಟ್ ಆಗಿದ್ದೇ ಒಳ್ಳೆಯದಾಯ್ತು ಎಂದು ನನಗೆ ಅನಿಸಿತು. ನಾನಿಲ್ಲಿ ಕುಳಿತುಕೊಂಡು ಅದನ್ನೇ ಯೋಚಿಸುತ್ತಿದ್ದೆ. ನನಗೆ ಒಂದೊಳ್ಳೆಯ ಇನಿಂಗ್ಸ್ ನೋಡಲು ಸಿಕ್ಕಿತು ಎಂದು ಅಣ್ಣ ಕೃನಾಲ್ ಪಾಂಡ್ಯ ಇನಿಂಗ್ಸ್‌ನ್ನು ತಮ್ಮ ಹಾರ್ದಿಕ್ ಪಾಂಡ್ಯ ಕೊಂಡಾಡಿದ್ದಾರೆ.
ಕೃನಾಲ್ ಪಾಂಡ್ಯ ಕೇವಲ 31 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 58 ರನ್ ಚಚ್ಚಿದರು. ಇನ್ನು ಬೌಲಿಂಗ್‌ನಲ್ಲಿ ಸ್ಯಾಮ್ ಕರ್ರನ್ ವಿಕೆಟ್ ಕಬಳಿಸುವ ಮೂಲಕ ತಮ್ಮ ಪಾದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ತಮ್ಮ ಇನಿಂಗ್ಸ್ ಬಗ್ಗೆ ಮಾತನಾಡಿದ ಕೃನಾಲ್ ಪಾಂಡ್ಯ, ಇದೊಂದು ರೀತಿ ಕನಸು ನನಸಾದ ಕ್ಷಣ ನನಗೆ. ನಾನು ಈ ಹಂತಕ್ಕೆ ಬರಲು ಸಾಕಷ್ಟು ಶ್ರಮ ಪಟ್ಟಿದ್ದೇನೆ. ಅದರಲ್ಲೂ ಕಳೆದ ಒಂದೂವರೆ ತಿಂಗಳಿನಿಂದಂತೂ ಸಾಕಷ್ಟು ಕಠಿಣ ಪರಿಶ್ರಮಪಟ್ಟಿದ್ದೇನೆ, ಅದು ಮೈದಾನದಲ್ಲಿ ಅಲ್ಲ, ಬದಲಾಗಿ ತನ್ನ ತಂದೆಯನ್ನು ನೋಡಿಕೊಳ್ಳುವ ವಿಚಾರದಲ್ಲಿ. ನನ್ನ ಈ ಇನಿಂಗ್ಸ್ ಅಪ್ಪನಿಗೆ ಅರ್ಪಿಸುತ್ತೇನೆ. ಇದೆಲ್ಲವು ಸಾಧ್ಯವಾಗಿದ್ದು, ಅಪ್ಪನ ಆಶೀರ್ವಾದದಿಂದ. ನಮ್ಮಿಬ್ಬರಿಗೂ ಇದೊಂದು ರೀತಿಯ ಭಾವನಾತ್ಮಕ ಕ್ಷಣ. ನಿನ್ನಿಂದ ಕ್ಯಾಪ್ ಪಡೆದುಕೊಂಡಿದ್ದು, ದೂರದಲ್ಲೆಲ್ಲೋ ಇರುವ ನಮ್ಮಪ್ಪ ನಾನು ಬ್ಯಾಟಿಂಗ್ ಮಾಡಿದ್ದನ್ನು ನೋಡಿ ಖುಷಿಪಟ್ಟಿರಬಹುದು ಎಂದು ಕೃನಾಲ್ ಹೇಳಿದ್ದಾರೆ.
2021ರ ಜನವರಿಯಲ್ಲಿ ಪಾಂಡ್ಯ ಸಹೋದರರ ತಂದೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.