ಕನ್ನಡ ಬಿಗ್ ಬಾಸ್‌ ಸ್ಟಾರ್, ಇಂಟರ್‌ನ್ಯಾಷನಲ್ ಕ್ರಿಕೆಟ್ ತಂಡದ ಕೋಚ್..!

By Suvarna NewsFirst Published Aug 14, 2024, 6:18 PM IST
Highlights

ಕನ್ನಡಿಗ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಬಿಗ್ ಬಾಸ್ ಕನ್ನಡ ರಿಯಾಲಿಟಿ ಷೋ ಸ್ಪರ್ಧಿ ದೊಡ್ಡ ಗಣೇಶ್ ಇದೀಗ ಕೀನ್ಯಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಹೆಮ್ಮೆಯ ಕನ್ನಡಿಗ ದೊಡ್ಡ ಗಣೇಶ್ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿದ್ದಾರೆ. ನಾಲ್ಕನೇ ಸೀಸನ್ ಕನ್ನಡ ಬಿಗ್‌ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನ ಸೆಳೆದಿದ್ದ ಟೀಂ ಇಂಡಿಯಾ ಮಾಜಿ ವೇಗಿ ದೊಡ್ಡ ಗಣೇಶ್, ಇದೀಗ ಕೀನ್ಯಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿದ್ದಾರೆ.

51 ವರ್ಷದ ದೊಡ್ಡ ಗಣೇಶ್ ಭಾರತ ಪರ 4 ಟೆಸ್ಟ್ ಹಾಗೂ ಒಂದು ಏಕದಿನ ಪಂದ್ಯಗಳನ್ನಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಗಣೇಶ್‌ಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿಲ್ಲ. ಆದರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕರ್ನಾಟಕ ಪರ ದೊಡ್ಡ ಗಣೇಶ್ 2000ಕ್ಕೂ ಅಧಿಕ ರನ್ ಹಾಗೂ 365 ವಿಕೆಟ್ ಕಬಳಿಸಿದ್ದಾರೆ. 

Latest Videos

Breaking: ಪಾಕ್ ತಂಡದ ಮಾಜಿ ಕೋಚ್ ಈಗ ಟೀಂ ಇಂಡಿಯಾ ನೂತನ ಬೌಲಿಂಗ್ ಗುರು..!

ಇದೀಗ ದೊಡ್ಡ ಗಣೇಶ್‌ಗೆ ಮಹತ್ವದ ಅವಕಾಶ ಬಂದೊದಗಿದೆ. 1996ರಿಂದ 2011ರ ಅವಧಿಯಲ್ಲಿ 5 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಕೀನ್ಯಾ ಕ್ರಿಕೆಟ್ ತಂಡವು ಇದೀಗ, ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲು ಪರದಾಡುತ್ತಿದೆ.  2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೀನ್ಯಾ ತಂಡವು ಸೆಮಿಫೈನಲ್ ಪ್ರವೇಶಿಸುವ ಮೂಲಕ ಶ್ರೇಷ್ಠ ಪ್ರದರ್ಶನ ತೋರಿತ್ತು.  ಮುಂಬರುವ 2026ರ ಟಿ20 ವಿಶ್ವಕಪ್ ಟೂರ್ನಿಗೆ ಆಫ್ರಿಕಾ ಖಂಡದಿಂದ ಅರ್ಹತೆ ಪಡೆಯಲು ಕೀನ್ಯಾ ಕ್ರಿಕೆಟ್ ತಂಡವು ಎದುರು ನೋಡುತ್ತಿದೆ.  ಕೀನ್ಯಾ ಕ್ರಿಕೆಟ್ ತಂಡವನ್ನು 2026ರ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವಂತೆ ಮಾಡುವ ಸವಾಲು ದೊಡ್ಡ ಗಣೇಶ್ ಅವರ ಮುಂದಿದೆ.

Privileged to be named the head coach of the Kenya cricket team. https://t.co/SHVUFFjzrL

— Dodda Ganesh | ದೊಡ್ಡ ಗಣೇಶ್ (@doddaganesha)

ಕೀನ್ಯಾ ಕ್ರಿಕೆಟ್ ತಂಡವು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಕೇವಲ ಒಮ್ಮೆ ಮಾತ್ರ ಅರ್ಹತೆ ಪಡೆಯಲು ಯಶಸ್ವಿಯಾಗಿತ್ತು. 2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೀನ್ಯಾ ತಂಡವು ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿತ್ತು.

ಇದೀಗ ಕೀನ್ಯಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿರುವುದಕ್ಕೆ ದೊಡ್ಡ ಗಣೇಶ್, ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. " ಕೀನ್ಯಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿರುವುದಕ್ಕೆ ಸಂತೋಷವಾಗುತ್ತಿದೆ" ಎಂದು ಬಿಗ್ ಬಾಸ್ ಕನ್ನಡ ನಾಲ್ಕನೇ ಸೀಸನ್ ಸ್ಪರ್ಧಿಯೂ ಆಗಿದ್ದ ದೊಡ್ಡ ಗಣೇಶ್ ಬರೆದುಕೊಂಡಿದ್ದಾರೆ.

ಬಿಸಿಸಿಐ ಚಾಟಿಗೆ ಬಗ್ಗಿದ ಶ್ರೇಯಸ್‌ ಅಯ್ಯರ್, ಇಶಾನ್‌ ಕಿಶನ್!

ಹೌದು, ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಬಳಿಕ ದೊಡ್ಡ ಗಣೇಶ್, ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಜಾತ್ಯಾತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಯಾಗಿದ್ದ ದೊಡ್ಡ ಗಣೇಶ್, 2012-13ರಲ್ಲಿ ಗೋವಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇನ್ನು ದೊಡ್ಡ ಗಣೇಶ್ 2016ರಲ್ಲಿ ನಾಲ್ಕನೇ ಸೀಸನ್ ಬಿಗ್ ಬಾಸ್ ಕನ್ನಡ ರಿಯಾಲಿಟಿ ಷೋನಲ್ಲಿ ಪಾಲ್ಗೊಂಡು ಮನೆ ಮಾತಾಗಿದ್ದರು. ದೊಡ್ಡ ಗಣೇಶ್ ಎರಡು ವಾರಗಳ ಕಾಲ ಬಿಗ್‌ ಬಾಸ್‌ ಷೋನಲ್ಲಿ ಪಾಲ್ಗೊಂಡು ಸೈ ಎನಿಸಿಕೊಂಡಿದ್ದರು.
 

click me!