ಭಾರತ-ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲಿ ಭಾರತೀಯ ವೇಗಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸುನಿಲ್ ಗವಾಸ್ಕರ್ ಆಸೀಸ್ ಬ್ಯಾಟ್ಸ್‌ಮನ್‌ಗಳನ್ನು ಎಚ್ಚರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಸಿಡ್ನಿ(ನ.23): ಭಾರತ-ಆಸ್ಟ್ರೇಲಿಯಾ ನಡುವಿನ ಬಹುನಿರೀಕ್ಷಿತ ಕ್ರಿಕೆಟ್ ಸರಣಿಗೆ ದಿನಗಣನೆ ಆರಂಭವಾಗಿದ್ದು, ಈಗಿನಿಂದಲೇ ಮೈಂಡ್ ವಾರ್ ಶುರುವಾಗಿದೆ. 2019ರಲ್ಲಿ ಅತ್ಯಂತ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ ಮೊಹಮ್ಮದ್ ಶಮಿ ಬೌಲಿಂಗ್ ಬಗ್ಗೆ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆಯಿಂದ ಇರುವುದು ಒಳ್ಳೆಯದ್ದು ಎಂದು ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಎಚ್ಚರಿಕೆ ನೀಡಿದ್ದಾರೆ.
ನವೆಂಬರ್ 27ರಿಂದ ಭಾರತ-ಆಸ್ಟ್ರೇಲಿಯಾ ನಡುವೆ 3 ಪಂದ್ಯಗಳ ಏಕದಿನ, ಬಳಿಕ 3 ಪಂದ್ಯಗಳ ಟಿ20 ಸರಣಿ ಜರುಗಲಿದೆ. ಕೊನೆಯಲ್ಲಿ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯಾಡಲಿದೆ.
undefined
ಆಸೀಸ್ ಎದುರು ವಿರಾಟ್ ಕೊಹ್ಲಿ ಅನುಪಸ್ಥಿತಿ ಟೀಂ ಇಂಡಿಯಾಗೆ ದೊಡ್ಡ ಹೊಡೆತ ನೀಡಲಿದೆ..!
ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್, ನ್ಯೂಜಿಲೆಂಡ್ ತಂಡದ ವೇಗದ ಬೌಲರ್ ನೀಲ್ ವ್ಯಾಗ್ನರ್ ಅವರ ಶಾರ್ಟ್ ಬಾಲ್ ಎದುರಿಸಲು ಪರದಾಡಿದ್ದರು. ಈ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಸ್ಟೀವ್ ಸ್ಮಿತ್, ನಾನು ನನ್ನ ಜೀವನದಲ್ಲಿ ಸಾಕಷ್ಟು ಶಾರ್ಟ್ ಬಾಲ್‌ಗಳನ್ನು ಎದುರಿಸಿದ್ದೇನೆ. ಶಾರ್ಟ್ ಬಾಲ್ ಎದುರಿಸುವ ಬಗ್ಗೆ ನನಗ್ಯಾವ ಅಂಜಿಕೆಯಿಲ್ಲ. ಭಾರತ ವಿರುದ್ಧದ ಸರಣಿಗಾಗಿ ನಾನು ಎದುರು ನೋಡುತ್ತಿದ್ದೇನೆ ಎಂದು ಟೆಸ್ಟ್ ನಂ.1 ಶ್ರೇಯಾಂಕಿತ ಬ್ಯಾಟ್ಸ್‌ಮನ್ ಹೇಳಿದ್ದರು
ಸ್ಮಿತ್ ಅವರ ಈ ಮಾತಿಗೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್, ಒಂದೊಳ್ಳೆಯ ಶಾರ್ಟ್ ಬಾಲ್‌ಗೆ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡಾ ರೆಡಿಯಿರಲು ಸಾಧ್ಯವಿಲ್ಲ. ಒಳ್ಳೆಯ ಶಾರ್ಟ್ ಬಾಲ್ ಎಂತಹ ಅತ್ಯುತ್ತಮ ಬ್ಯಾಟ್ಸ್‌ಮನ್‌ಗೂ ಸವಾಲಾಗಬಹುದು. ಮೊಹಮ್ಮದ್ ಶಮಿ ಅದ್ಭುತವಾಗಿ ಬೌನ್ಸರ್ ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ. ಒಳ್ಳೆಯ ಸಮಯದಲ್ಲಿ ಶಮಿ ಲಯಕ್ಕೆ ಮರಳಿದರೆ, ಅವರನ್ನು ಎದುರಿಸುವುದು ಸುಲಭವಲ್ಲ ಎಂದು ಹೇಳಿದ್ದಾರೆ.