ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ನೀರಸ ಪ್ರದರ್ಶನ ತೋರುತ್ತಿರುವುದರ ಬೆನ್ನಲ್ಲೇ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮಾಜಿ ಕ್ರಿಕೆಟಿಗರು ಪ್ರಶ್ನೆ ಎತ್ತಲಾರಂಭಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಡಿ.01): ಆಸ್ಪ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಇರುವಂತೆ 0-2ರಿಂದ ಸೋತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಮಾಜಿ ಆಟಗಾರರು ಕೊಹ್ಲಿ ನಾಯಕತ್ವವನ್ನು ಪ್ರಶ್ನಿಸಿದ್ದಾರೆ.
ಆಸೀಸ್ ವಿರುದ್ಧದ ಏಕದಿನ ಸರಣಿ, ಎದುರಾಳಿ ತಂಡದ ಪ್ರತಿರೋಧ ಇಲ್ಲದೇ ಅಂತ್ಯಗೊಂಡಿದೆ. ಸಿಡ್ನಿಯಲ್ಲಿ 2ನೇ ಏಕದಿನ ಪಂದ್ಯವನ್ನು ಸುಲಭವಾಗಿ ಸೋತ ಭಾರತ, ಬುಧವಾರದಂದು ನಡೆಯುವ 3ನೇ ಹಾಗೂ ಸರಣಿಯ ಕೊನೆಯ ಪಂದ್ಯವನ್ನು ಔಪಾಚಾರಿಕವಾಗಿ ಆಡಲಿದೆ.
ಸರಣಿ ಸೋಲಿನ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ, ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಟೀಕೆಗಳ ಪ್ರಹಾರ ಮಾಡಿದ್ದಾರೆ. ಕೊಹ್ಲಿಯನ್ನು ಟೀಕಿಸಲು ಯಾವುದೇ ಅವಕಾಶವನ್ನು ಬಿಡದ ಗಂಭೀರ್ ಈ ಬಾರಿ, ಕೊಹ್ಲಿ ನಾಯಕತ್ವ ಹಾಗೂ ಬೌಲರ್‌ಗಳನ್ನು ನಿಭಾಯಿಸುತ್ತಿರುವ ರೀತಿಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. 2ನೇ ಏಕದಿನ ಪಂದ್ಯದಲ್ಲಿ ತಂಡದ ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾ ಅವರನ್ನು ಮೊದಲ ಸ್ಪೆನ್‌ನಲ್ಲಿ ಕೇವಲ 2 ಓವರ್‌ಗಳಿಗೆ ಬೌಲಿಂಗ್ ಮಾಡಿಸಿದ್ದು ಏಕೆ ಎಂಬುದೇ ಅರ್ಥ ವಾಗುತ್ತಿಲ್ಲ. ಕೊಹ್ಲಿಯದ್ದು ಕಳಪೆ ನಾಯಕತ್ವ ಎಂದು ಗಂಭೀರ್ ಕಟುವಾಗಿ ಟೀಕಿಸಿದ್ದಾರೆ.
ಒಬ್ಬನಿಂದ ಪಂದ್ಯ ಗೆಲ್ಲಿಸೋಕೆ ಆಗಲ್ಲ; ಕೊಹ್ಲಿ ಪರ ಬ್ಯಾಟ್ ಬೀಸಿದ ಭಜ್ಜಿ
ಸಾಮಾನ್ಯವಾಗಿ ತಂಡದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಮೊದಲ ಸ್ಪೆಲ್‌ನಲ್ಲಿ 4 ಓವರ್, 2ನೇ ಸ್ಪೆಲ್‌ನಲ್ಲಿ 3, ಕೊನೆಯ ಸ್ಪೆಲ್‌ನಲ್ಲಿ 3 ಓವರ್ ಬೌಲಿಂಗ್ ಮಾಡಿಸಲಾಗುತ್ತದೆ. ಆದರೆ ಕೊಹ್ಲಿ ಇಂತಹ ನಿರ್ಧಾರ ಏಕೆ ಮಾಡುತ್ತಾರೆ. ಭಾನುವಾರ ನಡೆದಿದ್ದು ಟಿ20 ಪಂದ್ಯವಲ್ಲ ಎನ್ನುವುದನ್ನು ಕೊಹ್ಲಿ ಅರಿತಿದ್ದಾರೆಯೇ, ನನ್ನ ಪ್ರಕಾರ ಕೊಹ್ಲಿಯ ನಾಯಕತ್ವ ಸರಿಯಿಲ್ಲ ಎಂದಿದ್ದಾರೆ. ಏಕದಿನ ಪಂದ್ಯಗಳಿಗೆ 6ನೇ ಬೌಲರ್ ರೂಪದಲ್ಲಿ ಆಲ್ರೌಂಡರ್‌ನ್ನು ಆರಿಸದೆ, ಆಯ್ಕೆ ಸಮಿತಿ ಸಹ ತಪ್ಪು ಮಾಡಿದೆ ಎಂದು ಗಂಭೀರ್ ಹೇಳಿದ್ದಾರೆ.
ಕೊಹ್ಲಿ ನಿರ್ಧಾರದ ಬಗ್ಗೆ ನೆಹ್ರಾ ಅಸಮಾಧಾನ:
2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಆಶೀಶ್ ನೆಹ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ 14 ತಿಂಗಳಿಂದ ಹಾರ್ದಿಕ್ ಬೌಲಿಂಗ್‌ನಿಂದ ದೂರ ಉಳಿದಿದ್ದರು. ಹಾರ್ದಿಕ್‌ಗೆ 2ನೇ ಪಂದ್ಯದಲ್ಲಿ ಬೌಲಿಂಗ್ ಮಾಡಿಸಿದ್ದು ತಪ್ಪು ನಿರ್ಣಯವಾಗಿದೆ. ಬೂಮ್ರಾಗೆ ಹೊಸ ಚೆಂಡಿನಲ್ಲಿ ಕೇವಲ 2 ಓವರ್ ಬೌಲಿಂಗ್ ಮಾಡಿಸಿದ್ದು ಕೊಹ್ಲಿ ಅವರ ಮತ್ತೊಂದು ತಪ್ಪು ನಿರ್ಧಾರ ಎಂದು ನೆಹ್ರಾ ಹೇಳಿದ್ದಾರೆ.