
ನವದೆಹಲಿ(ಡಿ.12): ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, Dream 11 ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದು, ಶಾಸ್ತ್ರೀಯ ಸಂಗೀತಕಾರನ ಪಾತ್ರವನ್ನು ನಿಭಾಯಿಸಿದ್ದಾರೆ. ಇದು ಖ್ಯಾತ ಚಿತ್ರ ನಿರ್ದೇಶಕ ಹನ್ಸಾಲ್ ಮೆಹ್ತಾ ಅವರನ್ನು ಕೆರಳಿಸಿದ್ದು, ಪಂತ್ ಅವರನ್ನು ಕಟು ಶಬ್ದಗಳಿಂದ ನಿಂದಿಸಿದ್ದಾರೆ. ರಿಷಭ್ ಪಂತ್, 'ಡ್ರೀಮ್ ಇಲೆವನ್' ಜಾಹಿರಾತಿನಲ್ಲಿ ಶಾಸ್ತ್ರೀಯ ಸಂಗೀತದ ಬಗ್ಗೆ ಜೋಕ್ ಮಾಡಿದ್ದು, ಇದನ್ನು ಹನ್ಸಾಲ್ ಮೆಹ್ತಾ, ಅಸಹ್ಯ ಹಾಗೂ ಅಗೌರವದ ವಿಚಾರವಾಗಿದೆ ಎಂದು ಹೇಳಿದ್ದಾರೆ.
"ಇದೊಂದು ಅಸಹ್ಯಕರ ಹಾಗೂ ಅಗೌರವದ ಜಾಹಿರಾತಾಗಿದೆ. ನೀನು ಬೇಕಿದ್ದರೇ ತಲೆಹಿಡಿ, ಆದರೆ ಶ್ರೀಮಂತ ಇತಿಹಾಸವಿರುವ ಕಲೆಯ ಬಗ್ಗೆ ಅಗೌರವ ತೋರಿಸಬೇಡ. ಈ ಜಾಹಿರಾತನ್ನು ರದ್ದುಗೊಳಿಸಬೇಕು ಎಂದು ಡ್ರೀಮ್ ಇಲೆವನ್ ಅವರನ್ನು ಆಗ್ರಹಿಸುತ್ತೇನೆ ಎಂದು ಹನ್ಸಾಲ್ ಮೆಹ್ತಾ ಟ್ವೀಟ್ ಮಾಡಿದ್ದಾರೆ.
ಡ್ರೀಮ್ ಇಲೆವನ್ ಜಾಹಿರಾತಿನಲ್ಲಿ ರಿಷಭ್ ಪಂತ್, ಒಂದು ವೇಳೆ ತಾವು ಕ್ರಿಕೆಟರ್ ಆಗಿರದಿದ್ದರೇ ಏನಾಗುತ್ತಿದ್ದೆ ಎನ್ನುವುದನ್ನು ಆಲೋಚಿಸುವಂತೆ ತೋರಿಸಲಾಗಿದೆ. ಆ ಬಳಿಕ ರಿಷಭ್ ಪಂತ್ ಓರ್ವ ಕೆಟ್ಟ ಶಾಸ್ತ್ರೀಯ ಸಂಗೀತಕಾರನ ರೂಪದಲ್ಲಿ ರಿಷಭ್ ಪಂತ್ ಅವರು ಕಾಣಿಸಿಕೊಂಡಿದ್ದಾರೆ. ಇದು ಚಿತ್ರ ನಿರ್ದೇಶಕ ಹನ್ಸಾಲ್ ಮೆಹ್ತಾ ಅವರನ್ನು ಕೆರಳಿಸಿದೆ.
ಬಾಲಿವುಡ್‌ನ ಖ್ಯಾತ ಚಿತ್ರ ನಿರ್ದೇಶಕರಾದ ಹನ್ಸಾಲ್ ಮೆಹ್ತಾ, ಶಾಹಿದ್, ಆಲಿಘರ್‌ನಂತಹ ಪ್ರಖ್ಯಾತ ಸಿನೆಮಾಗಳನ್ನು ನಿರ್ಮಿಸಿದ್ದಾರೆ. ಇದಷ್ಟೇ ಅಲ್ಲದೇ ಹರ್ಷದ್ ಮೆಹ್ತಾ ಜೀವನಾಧಾರಿತ ಚಿತ್ರ 'ಸ್ಕ್ಯಾಮ್ 1992: ದ ಹರ್ಷದ್ ಮೆಹ್ತಾ ಸ್ಟೋರಿ' ನಿರ್ಮಿಸಿದ್ದಾರೆ. ಈ ಚಿತ್ರವು ಜನಮನ ಗೆದ್ದಿತ್ತು. ಇದೀಗ ಹನ್ಸಾಲ್ ಮೆಹ್ತಾ, ಬಾಲಿವುಡ್ ನಟಿ ಕರೀನಾ ಕಪೂರ್ ನಟನೆಯ ಇನ್ನೂ ಹೆಸರಿಡದ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಬಾಂಗ್ಲಾದೇಶ ಸರಣಿಗೆ ಅಭ್ಯಾಸ ಆರಂಭಿಸಿದ ರಿಷಭ್ ಪಂತ್:
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 14ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಈಗಿನಿಂದಲೇ ಅಭ್ಯಾಸ ಆರಂಭಿಸಿದ್ದಾರೆ. ರಿಷಭ್ ಪಂತ್, ಬಾಂಗ್ಲಾದೇಶ ಎದುರಿನ ಏಕದಿನ ಸರಣಿಗೆ ಸ್ಥಾನ ಪಡೆದಿದ್ದರಾದರೂ ಕೊನೆಯ ಕ್ಷಣದಲ್ಲಿ ವೈದ್ಯಕೀಯ ಕಾರಣ ನೀಡಿ ಸರಣಿಯಿಂದ ಹೊರಗುಳಿದಿದ್ದರು. ಇದೀಗ ಟೆಸ್ಟ್ ಸರಣಿಗೆ ಪಂತ್ ತಂಡ ಕೂಡಿಕೊಂಡಿದ್ದಾರೆ.
ಬಾಂಗ್ಲಾ ಟೆಸ್ಟ್ ಪಂದ್ಯದಿಂದ ರೋಹಿತ್ ಶರ್ಮಾ ಔಟ್, ತಂಡಕ್ಕೆ ಆಯ್ಕೆಯಾದ ಬಂಗಾಳ ಬ್ಯಾಟ್ಸ್‌ಮನ್!
ಇನ್ನು ಎರಡನೇ ಏಕದಿನ ಪಂದ್ಯದಲ್ಲಿ ಕೈಬೆರಳಿನ ಗಾಯಕ್ಕೆ ತುತ್ತಾಗಿರುವ ರೋಹಿತ್ ಶರ್ಮಾ, ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ ಎಲ್ ರಾಹುಲ್, ಭಾರತದ ಹಂಗಾಮಿ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ
ಕೆ ಎಲ್ ರಾಹುಲ್(ನಾಯಕ), ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕೆ ಎಸ್ ಭರತ್, ರವೀಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಅಭಿಮನ್ಯು ಈಶ್ವರನ್, ನವದೀಪ್ ಸೈನಿ, ಸೌರಬ್ ಕುಮಾರ್, ಜಯದೇವ್ ಉನಾದ್ಕಟ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.