
ಓವಲ್: ಭಾರತದ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಎರಡನೇ ದಿನ ಇಂಗ್ಲೆಂಡ್ ಆಟಗಾರರು ಬಿಳಿ ಹೆಡ್‌ಬ್ಯಾಂಡ್ ಧರಿಸಿ ಕಣಕ್ಕಿಳಿದರು. ಇಂಗ್ಲೆಂಡ್‌ನ ಮಾಜಿ ನಾಯಕ ಗ್ರಹಾಂ ಥೋರ್ಪ್ ಅವರ 56ನೇ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ಈ ಆಟಗಾರರು ಹೆಡ್‌ಬ್ಯಾಂಡ್ ಧರಿಸಿದ್ದರು. ಕಳೆದ ವರ್ಷ ಆಗಸ್ಟ್ 4 ರಂದು ಗ್ರಹಾಂ ಥೋರ್ಪ್ ನಿಧನರಾದರು.
ಓವಲ್‌ನಲ್ಲಿ ಪಂದ್ಯ ವೀಕ್ಷಿಸಲು ಬಂದಿದ್ದ ಇಂಗ್ಲೆಂಡ್ ಅಭಿಮಾನಿಗಳು ಸಹ ಬಿಳಿ ಹೆಡ್‌ಬ್ಯಾಂಡ್ ಧರಿಸಿದ್ದರು. ಆಟದ ಸಮಯದಲ್ಲಿ ಥೋರ್ಪ್ ನೀಲಿ ಎಳೆಗಳಿಂದ ಕಸೂತಿ ಮಾಡಿದ ಬಿಳಿ ಹೆಡ್‌ಬ್ಯಾಂಡ್ ಧರಿಸುತ್ತಿದ್ದರು. ತೀವ್ರ ಖಿನ್ನತೆಯಿಂದಾಗಿ ಥೋರ್ಪ್ ಆತ್ಮ8ತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ಅಮಂಡ ಥೋರ್ಪ್ ಬಹಿರಂಗಪಡಿಸಿದ್ದರು. ಸರ್ರೆ ರೈಲ್ವೆ ನಿಲ್ದಾಣದಲ್ಲಿ ರೈಲಿನ ಮುಂದೆ ಹಾರಿ ಥೋರ್ಪ್ ಆತ್ಮ8ತ್ಯೆ ಮಾಡಿಕೊಂಡರು. 2022 ರಲ್ಲಿಯೂ ಥೋರ್ಪ್ ಆತ್ಮ8ತ್ಯೆಗೆ ಯತ್ನಿಸಿದ್ದರು ಎಂದು ಅಮಂಡ ಹೇಳಿದ್ದರು.
1993 ರಿಂದ 2005 ರವರೆಗೆ 13 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಇಂಗ್ಲೆಂಡ್ ಪರ 100 ಟೆಸ್ಟ್ ಮತ್ತು 82 ಏಕದಿನ ಪಂದ್ಯಗಳನ್ನು ಥೋರ್ಪ್ ಆಡಿದ್ದಾರೆ. 1993 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಥೋರ್ಪ್ ಇಂಗ್ಲೆಂಡ್ ಪರ ಪಾದಾರ್ಪಣೆ ಮಾಡಿದರು. ಆಸ್ಟ್ರೇಲಿಯಾ ವಿರುದ್ಧದ ಆಷಸ್ ಸರಣಿಯಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಥೋರ್ಪ್ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ (114) ಬಾರಿಸಿ ಗಮನ ಸೆಳೆದರು. ನಂತರ ಆರಂಭಿಕ ಆಟಗಾರನಾಗಿ ಮಿಂಚಿದ ಥೋರ್ಪ್ ಟೆಸ್ಟ್‌ನಲ್ಲಿ 16 ಶತಕ ಸೇರಿದಂತೆ 6,744 ರನ್ ಗಳಿಸಿದರು. ನ್ಯೂಜಿಲೆಂಡ್ ವಿರುದ್ಧ ಗಳಿಸಿದ 200 ರನ್ ಅವರ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿತು.
ಏಕದಿನ ಕ್ರಿಕೆಟ್‌ನಲ್ಲಿ 77 ಇನ್ನಿಂಗ್ಸ್‌ಗಳಲ್ಲಿ 2,380 ರನ್ ಗಳಿಸಿರುವ ಥೋರ್ಪ್ 21 ಅರ್ಧಶತಕಗಳನ್ನು ಸಹ ಗಳಿಸಿದ್ದಾರೆ. 1996 ಮತ್ತು 1999 ರ ಏಕದಿನ ವಿಶ್ವಕಪ್‌ಗಳಲ್ಲಿ ಇಂಗ್ಲೆಂಡ್ ಪರ ಕಣಕ್ಕಿಳಿದಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 17 ವರ್ಷಗಳ ಕಾಲ ಸರ್ರೆ ತಂಡದ ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ಆಗಿದ್ದರು. ಸರ್ರೆ ಪರ 271 ಪ್ರಥಮ ದರ್ಜೆ ಪಂದ್ಯಗಳಲ್ಲಿ 20,000 ಕ್ಕೂ ಹೆಚ್ಚು ರನ್ ಗಳಿಸಿದರು. ನಿವೃತ್ತಿಯ ನಂತರ 2010 ರಲ್ಲಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಕೋಚ್ ಮತ್ತು ಸಹಾಯಕ ಕೋಚ್ ಆಗಿ ಥೋರ್ಪ್ ಕೆಲಸ ಮಾಡಿದ್ದಾರೆ. 2022 ರ ಆಷಸ್‌ನಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ 4-0 ಅಂತರದಲ್ಲಿ ಸೋತ ನಂತರ ಥೋರ್ಪ್ ಬ್ಯಾಟಿಂಗ್ ಕೋಚ್ ಹುದ್ದೆಯಿಂದ ಕೆಳಗಿಳಿದರು.
ಇನ್ನು ಲಂಡನ್‌ನ ಓವಲ್ ಟೆಸ್ಟ್ ಬಗ್ಗೆ ಹೇಳುವುದಾದರೇ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಕರುಣ್ ನಾಯರ್ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 224 ರನ್ ಗಳಿಸಿ ಸರ್ವಪತನ ಕಂಡಿತು. ಇನ್ನು ಭಾರತವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿ, ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಜಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ 92 ರನ್‌ಗಳ ಸ್ಪೋಟಕ ಜತೆಯಾಟವಾಡಿದರು. ಆದರೆ ಈ ವಿಕೆಟ್ ಪತನದ ಬಳಿಕ ಟೀಂ ಇಂಡಿಯಾ ಬೌಲರ್‌ಗಳು ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾದರು. ಪರಿಣಾಮ ಇಂಗ್ಲೆಂಡ್ ತಂಡವು 247 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಈ ಮೂಲಕ ಇಂಗ್ಲೆಂಡ್ 23 ರನ್‌ಗಳ ಅಲ್ಪ ಮುನ್ನಡೆ ಗಳಿಸಿತು.
ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕೆ ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ರಾಹುಲ್ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಸಾಯಿ ಸುದರ್ಶನ್ 11 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ, ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್ ಆಕರ್ಷಕ ಅರ್ಧಶತಕ ಸಿಡಿಸಿದರು. ಜೈಸ್ವಾಲ್ ಸದ್ಯ 49 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 51 ರನ್ ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನು ನೈಟ್ ವಾಚ್‌ಮನ್ ಆಕಾಶ್‌ದೀಪ್ 4 ರನ್ ಸಿಡಿಸಿ ಕ್ರೀಸ್‌ನಲ್ಲಿದ್ದಾರೆ.
ವಿಶೇಷ ಮನವಿ: ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ. ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ. ಬದಲಾಗಿ ಯಾವ ಕಾರಣದಿಂದ ಆತ್ಮ8ತ್ಯೆ ಮಾಡಿಕೊಂಡ್ರೋ ಅದೇ ನಿಮ್ಮ ಐಡೆಂಟಿಟಿಯಾಗಿ ಬಿಡುತ್ತೆ. ಮುಂದೆ, ಆತ್ಮ8ತ್ಯೆ ಮಾಡಿಕೊಂಡವರನ್ನು ಆ 'ಕಾರಣ'ಕ್ಕಾಗಿಯೇ ನೆನಪಿಟ್ಟುಕೊಳ್ಳಲಾಗುತ್ತೆ.
ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ 'ಆತ್ಮ8ತ್ಯೆ' ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:
Sahai Helpline - 080 2549 7777
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.