
ಮ್ಯಾಂಚೆಸ್ಟರ್(ಜು.27): ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದ ಇಂಗ್ಲೆಂಡ್ ತಂಡದ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ 500 ವಿಕೆಟ್ ಪಡೆಯುವ ಹೊಸ್ತಿಲಲ್ಲಿದ್ದಾರೆ.
ಹೌದು, ವಿಂಡೀಸ್ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಬ್ರಾಡ್ 500 ವಿಕೆಟ್ ಪಡೆಯಲು 9 ವಿಕೆಟ್‌ಗಳ ಅವಶ್ಯಕತೆಯಿತ್ತು. ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿದ್ದ ಬ್ರಾಡ್, ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ 500 ವಿಕೆಟ್ ಸರದಾರರ ಕ್ಲಬ್ ಸೇರಲು ಬ್ರಾಡ್‌ಗೆ ಇನ್ನೊಂದು ವಿಕೆಟ್‌ನ ಅವಶ್ಯಕತೆಯಿದೆ.
ಬ್ರಾಡ್ 500 ಟೆಸ್ಟ್ ವಿಕೆಟ್ ಪಡೆದರೆ ಈ ಸಾಧನೆ ಮಾಡಿದ ಇಂಗ್ಲೆಂಡ್‌ನ 2ನೇ ಹಾಗೂ ವಿಶ್ವದ 7ನೇ ಬೌಲರ್ ಎನಿಸಲಿದ್ದಾರೆ. ಈ ಮೊದಲು ಜೇಮ್ಸ್ ಆಂಡರ್‌ಸನ್ ಐನೂರು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 140ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಬ್ರಾಡ್ ಇನ್ನೊಂದು ವಿಕೆಟ್ ಕಬಳಿಸಿದರೆ ಮಹತ್ವದ ಮೈಲಿಗಲ್ಲನ್ನು ನೆಡಲಿದ್ದಾರೆ.
ಸ್ಟುವರ್ಟ್ ಬ್ರಾಡ್ ಅಬ್ಬರ ಸೋಲಿನ ಸುಳಿಯಲ್ಲಿ ವಿಂಡೀಸ್
140ನೇ ಟೆಸ್ಟ್ ಪಂದ್ಯದಲ್ಲಿ ಇನ್ನೊಂದು ವಿಕೆಟ್ ಪಡೆದರೆ ಬ್ರಾಡ್ ಮಂದಗತಿಯಲ್ಲಿ 500 ವಿಕೆಟ್ ಪಡೆದ ಬೌಲರ್ ಎನಿಸಲಿದ್ದಾರೆ. ಈ ಮೊದಲು ಲಂಕಾ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಕೇವಲ 87 ಪಂದ್ಯಗಳನ್ನಾಡಿ 500 ವಿಕೆಟ್ ಪಡೆದಿದ್ದರು. ಇನ್ನು ಕನ್ನಡಿಗ ಅನಿಲ್ ಕುಂಬ್ಳೆ(105), ಶೇನ್ ವಾರ್ನ್(108), ಗ್ಲೆನ್ ಮೆಗ್ರಾತ್(110), ಜೇಮ್ಸ್ ಆಂಡರ್‌ಸನ್ ಹಾಗೂ ಕರ್ಟ್ನಿ ವಾಲ್ಷ್ ತಲಾ 129 ಪಂದ್ಯಗಳನ್ನಾಡಿ 500 ಬಲಿ ಪಡೆದಿದ್ದರು.
ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಬ್ರಾಡ್ ಇದೀಗ ಕೇವಲ ಎರಡು ಟೆಸ್ಟ್ ಪಂದ್ಯವನ್ನಾಡಿ 14 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಮೂರನೇ ದಿನದಾಟದಂತ್ಯದ ವೇಳೆಗೆ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅಂದಹಾಗೆ ಇದೇ ಟೆಸ್ಟ್ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ವೇಗವಾಗಿ ಅರ್ಧಶತಕ ಬಾರಿಸುವ ಮೂಲಕ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.