
ರಾಂಚಿ(ಫೆ.25): ವಿಕೆಟ್ ಕೀಪರ್ ಬ್ಯಾಟರ್ ಧೃವ್ ಜುರೆಲ್(90) ಬಾರಿಸಿದ ಚೊಚ್ಚಲ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ, ರಾಂಚಿ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 307 ರನ್‌ಗಳಿಗೆ ಸರ್ವಪತನ ಕಂಡಿದೆ. ಇದರ ಹೊರತಾಗಿಯೂ ಪ್ರವಾಸಿ ಇಂಗ್ಲೆಂಡ್ ತಂಡವು 46 ರನ್‌ಗಳ ಅಮೂಲ್ಯ ಮುನ್ನಡೆ ಸಾಧಿಸಿದೆ.
ಎರಡನೇ ದಿನದಾಟದಂತ್ಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 219 ರನ್ ಬಾರಿಸಿದ್ದ ಭಾರತ ಮೂರನೇ ದಿನದಾಟವನ್ನು ಎಚ್ಚರಿಕೆಯಿಂದಲೇ ಆರಂಭಿಸಿತು. ಕುಲ್ದೀಪ್ ಯಾದವ್ ಹಾಗೂ ಧೃವ್ ಜುರೆಲ್ ಜೋಡಿ ಇಂಗ್ಲೆಂಡ್ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. 8ನೇ ವಿಕೆಟ್‌ಗೆ ಈ ಜೋಡಿ ಬರೋಬ್ಬರಿ 202 ಎಸೆತಗಳನ್ನು ಎದುರಿಸಿ 76 ರನ್‌ಗಳ ಜತೆಯಾಟವಾಡಿತು. ಇಂಗ್ಲೆಂಡ್ ದಾಳಿಯ ಎದುರು ನೆಲಗಚ್ಚಿ ಆಡಿದ ಕುಲ್ದೀಪ್ ಯಾದವ್ 131 ಎಸೆತಗಳನ್ನು ಎದುರಿಸಿ 28 ರನ್ ಗಳಿಸಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೊನೆಗೂ ಜೇಮ್ಸ್ ಆಂಡರ್‌ಸನ್ ಯಶಸ್ವಿಯಾದರು. ಕುಲ್ದೀಪ್ ಯಾದವ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ಜುರೆಲ್ ಶತಕ ಜಸ್ಟ್ ಮಿಸ್: ಇನ್ನು 161 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಟೀಂ ಇಂಡಿಯಾ ಪರ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ಧೃವ್ ಜುರೆಲ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. 8ನೇ ವಿಕೆಟ್‌ಗೆ ಕುಲ್ದೀಪ್ ಯಾದವ್ ಜತೆ 76 ರನ್ ಜತೆಯಾಟವಾಡಿದ ಜುರೆಲ್, ಆ ಬಳಿಕ 9ನೇ ವಿಕೆಟ್‌ಗೆ ಆಕಾಶ್ ದೀಪ್ ಜತೆ ಅಮೂಲ್ಯ 40 ರನ್‌ಗಳ ಜತೆಯಾಟ ನಿಭಾಯಿಸಿದರು. ಅಂತಿಮವಾಗಿ ಜುರೆಲ್ 149 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಆಕರ್ಷಕ 90 ರನ್ ಬಾರಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.
ಬಷೀರ್‌ಗೆ 5 ವಿಕೆಟ್ ಗೊಂಚಲು: ರೆಹಾನ್ ಅಹಮ್ಮದ್ ಬದಲಿಗೆ ಆಡುವ ಹನ್ನೊಂದರ ಬಳಗ ಕೂಡಿಕೊಂಡ ಶೋಯೆಬ್ ಬಷೀರ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವಲ್ಲಿ ಯಶಸ್ವಿಯಾದರು. ಎರಡನೇ ದಿನದಾಟದಲ್ಲೇ 4 ವಿಕೆಟ್ ಕಬಳಿಸಿದ್ದ ಬಷೀರ್, ಇಂದು ಆಕಾಶ್ ದೀಪ್ ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಬಾರಿಗೆ 5 ವಿಕೆಟ್ ಗೊಂಚಲು ಪಡೆಯುವಲ್ಲಿ ಯಶಸ್ವಿಯಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.