County Cricket ಲಾರ್ಡ್ಸ್‌ ಮೈದಾನದಲ್ಲಿ ದ್ವಿಶತಕ ಸಿಡಿಸಿ ಸಂಭ್ರಮಿಸಿದ ಚೇತೇಶ್ವರ್ ಪೂಜಾರ

By Naveen KodaseFirst Published Jul 21, 2022, 6:13 PM IST
Highlights

* ಚೇತೇಶ್ವರ್ ಪೂಜಾರ ಖಾತೆಗೆ ಮತ್ತೊಂದು ದ್ವಿಶತಕ ಸೇರ್ಪಡೆ
* ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 16ನೇ ದ್ವಿಶತಕ ಬಾರಿಸಿದ ಪೂಜಾರ
* ಕೌಂಟಿ ಕ್ರಿಕೆಟ್‌ನಲ್ಲಿ ಸಸೆಕ್ಸ್ ಪರ ಮೂರನೇ ದ್ವಿಶತಕ ಬಾರಿಸಿದ ಪೂಜಾರ

ಲಂಡನ್‌(ಜು.21): ಟೀಂ ಇಂಡಿಯಾ ಟೆಸ್ಟ್‌ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ಈ ಬಾರಿಯ ಕೌಂಟಿ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಅಭೂತಪೂರ್ವವಾದ ಫಾರ್ಮ್‌ನಲ್ಲಿದ್ದು, ಸಸೆಕ್ಸ್ ತಂಡದ ಪರ ಮತ್ತೊಂದು ಭರ್ಜರಿ ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಅಂದ ಹಾಗೆ ಇದು ಈ ಬಾರಿಯ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಚೇತೇಶ್ವರ್ ಪೂಜಾರ ಸಸೆಕ್ಸ್‌ ತಂಡದ ಪರ ಬಾರಿಸಿದ 5ನೇ ಶತಕ ಎನಿಸಿಕೊಂಡಿದೆ.  ಇಲ್ಲಿನ ಲಾರ್ಡ್ಸ್‌ ಮೈದಾನದಲ್ಲಿ ಮಿಡಲ್‌ಸೆಕ್ಸ್‌ ತಂಡದ ವಿರುದ್ದ ನಡೆಯುತ್ತಿರುವ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಬರೋಬ್ಬರಿ 403 ಎಸೆತಗಳನ್ನು ಆಕರ್ಷಕ  231 ರನ್‌ ಗಳಿಸಿದ್ದಾರೆ. ಚೇತೇಶ್ವರ್ ಪೂಜಾರ 231 ರನ್ ಬಾರಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದಂತೆಯೇ ಮೈದಾನದಲ್ಲಿದ್ದ ಪ್ರೇಕ್ಷಕರು ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಚೇತೇಶ್ವರ್ ಪೂಜಾರ ಆಫ್‌ಸೈಡ್‌ನಲ್ಲಿ ಚೆಂಡನ್ನು ಫ್ಲಿಕ್‌ ಮಾಡುವ ಮೂಲಕ ದ್ವಿಶತಕ ಪೂರೈಸುತ್ತಿದ್ದಂತೆಯೇ, ಲಾರ್ಡ್ಸ್‌ ಬಾಲ್ಕನಿಯಲ್ಲಿ ಕುಳಿತಿದ್ದ ಸೆಸೆಕ್ಸ್‌ ತಂಡದ ಆಟಗಾರರು ಎದ್ದು ನಿಂತು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಸಸೆಕ್ಸ್‌ ತಂಡದ ಆಟಗಾರರಷ್ಟೇ ಅಲ್ಲದೇ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಬಂದಿದ್ದ ಪ್ರೇಕ್ಷಕರೆಲ್ಲರೂ ಕೂಡಾ ಎದ್ದು ನಿಂತು ಪೂಜಾರ ದ್ವಿಶತಕವನ್ನು ಚಪ್ಪಾಳೆ ತಟ್ಟಿ ಎಂಜಾಯ್ ಮಾಡಿದರು.

Out onto the balcony to stand and applaud a fantastic innings. 👏 💯💯 pic.twitter.com/2hmvm9wMz4

— Sussex Cricket (@SussexCCC)

ಇನ್ನು ಚೇತೇಶ್ವರ್ ಪೂಜಾರ ವಿಕೆಟ್ ಒಪ್ಪಿಸಿ ಲಾರ್ಡ್ಸ್‌ ಬಾಲ್ಕನಿಯೊಳಗೆ ಹೋಗುತ್ತಿರುವ ಫೋಟೋವನ್ನು ಲಾರ್ಡ್ಸ್‌ ಮೈದಾನದ ಅಧಿಕೃತ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದು, ಲಾರ್ಡ್ಸ್‌ ಮೈದಾನದಲ್ಲಿ ಚೇತೇಶ್ವರ್ ಪೂಜಾರ ಬಾರಿಸಿದ 231 ರನ್‌ ನೆನಪಿನಲ್ಲಿ ಉಳಿಯುವಂತಹ ಇನಿಂಗ್ಸ್‌ ಎಂದು ಬಣ್ಣಿಸಿದೆ. ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡಾ, ಪೂಜಾರ ಬ್ಯಾಟಿಂಗ್ ಮೆಚ್ಚಿಕೊಂಡಿದ್ದು, ಚೆನ್ನಾಗಿ ಆಡಿದಿರಿ ಪೂಜಾರ ಎಂದು ಕಾಮೆಂಟ್ ಮಾಡಿದ್ದಾರೆ.

ಎರಡನೇ ದಿನದಾಟ ಆರಂಭಕ್ಕೂ ಮುನ್ನ ಚೇತೇಶ್ವರ್ ಪೂಜಾರ 115 ರನ್‌ ಗಳಿಸಿದ್ದರು. ಇನ್ನು ಎರಡನೇ ದಿನದಾಟದ ಲಂಚ್ ಬ್ರೇಕ್‌ ವೇಳೆಗೆ ಪೂಜಾರ 143 ರನ್‌ ಗಳಿಸಿದ್ದರು. ಇನ್ನು ಪೂಜಾರ 150 ರನ್‌ ಗಳಿಸುವಾಗ ಮಿಡಲ್‌ಸೆಕ್ಸ್‌ ಬೌಲರ್‌ಗಳು ಬರೋಬ್ಬರಿ 100 ಓವರ್‌ ಬೌಲಿಂಗ್ ಮಾಡಿ ದಣಿದಿದ್ದರು. ಲಂಚ್‌ ಬ್ರೇಕ್‌ ಬಳಿಕ ಚೇತೇಶ್ವರ್ ಪೂಜಾರ ಕೊಂಚ ಆಕ್ರಮಣಕಾರಿಯಾಟವಾಡುವ ಮೂಲಕ ರನ್‌ ವೇಗಕ್ಕೆ ಚುರುಕು ಮುಟ್ಟಿಸಿದರು. ಇನ್ನು ಮಿಡಲ್‌ಸೆಕ್ಸ್‌ ಪರ ಕಣಕ್ಕಿಳಿದಿರುವ ಉಮೇಶ್ ಯಾದವ್ ಮೊನಚಾದ ದಾಳಿ ನಡೆಸಿದರೂ ಸಹಾ ಪೂಜಾರ ಅವರ ಏಕಾಗ್ರತೆ ಹಾಳು ಮಾಡಲು ಸಾಧ್ಯವಾಗಲಿಲ್ಲ.

County Cricket ಸಸೆಕ್ಸ್‌ ತಂಡದ ನಾಯಕರಾದ ಮೊದಲ ಪಂದ್ಯದಲ್ಲೇ ಶತಕ ಚಚ್ಚಿದ ಚೇತೇಶ್ವರ್ ಪೂಜಾರ

16ನೇ ಪ್ರಥಮ ದರ್ಜೆ ದ್ವಿಶತಕ ಬಾರಿಸಿದ ಪೂಜಾರ:  ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದ 16ನೇ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಸಸೆಕ್ಸ್ ಪರ 368 ಎಸೆತಗಳನ್ನು ಎದುರಿಸಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಗಿದ್ದಾರೆ. ಮಿಡಲ್‌ಸೆಕ್ಸ್‌ ಎದುರಿನ ಪಂದ್ಯಕ್ಕೂ ಮುನ್ನ ಚೇತೇಶ್ವರ್ ಪೂಜಾರ ಈ ಬಾರಿಯ ಕೌಂಟಿ ಕ್ರಿಕೆಟ್‌ ಚಾಂಪಿಯನ್‌ಶಿಪ್‌ನಲ್ಲಿ 6, 201*, 109, 12, 203  ಹಾಗೂ ಅಜೇಯ 170 ರನ್ ಸಿಡಿಸಿದ್ದರು.

ಇನ್ನು ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಅತಿಹೆಚ್ಚು ದ್ವಿಶತಕ ಬಾರಿಸಿದ ಸಾರ್ವಕಾಲಿಕ ಬ್ಯಾಟರ್‌ಗಳ ಪಟ್ಟಿಯಲ್ಲಿ ಸದ್ಯ ಚೇತೇಶ್ವರ್ ಪೂಜಾರ 5ನೇ ಸ್ಥಾನದಲ್ಲಿದ್ದಾರೆ. ಇನ್ನು ಸಕ್ರಿಯ ಸಮಕಾಲೀನ ಆಟಗಾರರ ಪೈಕಿ ಪೂಜಾರ 16 ದ್ವಿಶತಕಗಳೊಂದಿಗೆ ಉಳಿದ ಆಟಗಾರರಿಗಿಂತ ಸಾಕಷ್ಟು ಮುಂದಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ(7), ರೋಹಿತ್ ಶರ್ಮಾ(5) ಹಾಗೂ ಕೇನ್ ವಿಲಿಯಮ್ಸನ್(5) ದ್ವಿಶತಕ ಬಾರಿಸಿದ್ದಾರೆ.

click me!