427 ರನ್ ಗುರಿ ಬೆನ್ನತ್ತಿ 2 ರನ್‌ಗೆ ಆಲೌಟ್, 10ರಲ್ಲಿ 8 ಮಂದಿ ಶೂನ್ಯಕ್ಕೆ ಔಟ್!

Published : May 27, 2025, 11:59 AM IST
lowest-team-score-in-cricket

ಸಾರಾಂಶ

ಮಿಡ್ಲ್‌ಸೆಕ್ಸ್ ಕೌಂಟಿ ಕ್ರಿಕೆಟ್ ಲೀಗ್‌ನಲ್ಲಿ ರಿಚ್ಮಂಡ್ ಸಿಸಿ ತಂಡ 427 ರನ್‌ಗಳ ಗುರಿ ಬೆನ್ನಟ್ಟಿ ಕೇವಲ 2 ರನ್‌ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ 10 ಬ್ಯಾಟ್ಸ್‌ಮನ್‌ಗಳಲ್ಲಿ 8 ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾಗಿದ್ದು, ಕ್ರಿಕೆಟ್ ಇತಿಹಾಸದಲ್ಲೇ ಕಂಡು-ಕೇಳರಿಯದ ದಾಖಲೆ ಎನಿಸಿಕೊಂಡಿದೆ.

ಲಂಡನ್: ಕ್ರಿಕೆಟ್ ಒಂದು ಫನ್ನಿ ಗೇಮ್ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಇತ್ತೀಚಿಗಿನ ದಿನಗಳಲ್ಲಂತೂ ಕ್ರಿಕೆಟ್‌ ಬ್ಯಾಟರ್‌ಗಳ ಪಾಲಿನ ಸ್ವರ್ಗ ಎನ್ನುವಷ್ಟರ ಮಟ್ಟಿಗೆ ಬದಲಾಗಿ ಹೋಗಿದೆ. ಅದರಲ್ಲೂ ಟಿ20 ಕ್ರಿಕೆಟ್ ಹೆಚ್ಚು ಜನಪ್ರಿಯವಾಗುತ್ತಿದ್ದಂತೆಯೇ ಟಿ20 ಕ್ರಿಕೆಟ್‌ನಲ್ಲೂ ಅನಾಯಾಸವಾಗಿ 250 ರನ್ ದಾಖಲಾಗುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಇಲ್ಲೊಂದು ಪಂದ್ಯದಲ್ಲಿ ತಂಡವೊಂದು ಬೃಹತ್ ಮೊತ್ತ ಬೆನ್ನತ್ತಿ ಕೇವಲ 2 ರನ್‌ಗಳಿಗೆ ಸರ್ಪಪತನ ಕಂಡಿದೆ. ಇದು ಕ್ರಿಕೆಟ್ ಇತಿಹಾಸದಲ್ಲೇ ಕಂಡು-ಕೇಳರಿಯದ ದಾಖಲೆ ಎನಿಸಿಕೊಂಡಿದೆ.

ಕ್ರಿಕೆಟ್ ಇತಿಹಾಸದಲ್ಲಿ ರನ್ ಚೇಸ್ ಮಾಡುವಾಗ ಇಷ್ಟು ಕಡಿಮೆ ರನ್ ಗಳಿಸಿ ತಂಡ ಪೆವಿಲಿಯನ್ ಸೇರಿದ್ದು ಇದೇ ಮೊದಲು. ಮಿಡ್ಲ್‌ಸೆಕ್ಸ್ ಕೌಂಟಿ ಕ್ರಿಕೆಟ್ ಲೀಗ್‌ನಲ್ಲಿ ನಡೆದ ನಾರ್ಥ್ ಲಂಡನ್ ಕ್ರಿಕೆಟ್ ಕ್ಲಬ್ ಮತ್ತು ರಿಚ್ಮಂಡ್ ಕ್ರಿಕೆಟ್ ಕ್ಲಬ್ ನಡುವಿನ ಪಂದ್ಯದಲ್ಲಿ 427 ರನ್‌ಗಳ ಗುರಿ ಬೆನ್ನಟ್ಟಿದ ರಿಚ್ಮಂಡ್ ಸಿಸಿ ಕೇವಲ 2 ರನ್‌ಗಳಿಗೆ ಆಲೌಟ್ ಆಯಿತು. ಇದರಲ್ಲಿ ಒಂದು ರನ್ ಬ್ಯಾಟ್ ನಿಂದ ಬಂದಿದ್ದು, ಇನ್ನೊಂದು ರನ್ ವೈಡ್ ಬಾಲ್ ನಿಂದ ಬಂದಿದೆ. ಕ್ರಿಕೆಟ್ ಇತಿಹಾಸದ ಈ ಅತ್ಯಂತ ಕಡಿಮೆ ಸ್ಕೋರ್ ಪಂದ್ಯದ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.

427 ರನ್‌ಗಳ ಗುರಿ ಬೆನ್ನಟ್ಟಿ ಕುಸಿದ ತಂಡ (Richmond CC all out for 2)

ಮಿಡ್ಲ್‌ಸೆಕ್ಸ್ ಕೌಂಟಿ ಕ್ರಿಕೆಟ್ ಲೀಗ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಾರ್ಥ್ ಲಂಡನ್ ಸಿಸಿ ತಂಡ 45 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 426 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಈ ಗುರಿ ಬೆನ್ನಟ್ಟಿದ ರಿಚ್ಮಂಡ್ ಸಿಸಿ ಕೇವಲ 5.4 ಓವರ್‌ಗಳಲ್ಲಿ ಆಲೌಟ್ ಆಯಿತು. ತಮ್ಮ ಇನ್ನಿಂಗ್ಸ್‌ನಲ್ಲಿ ಅವರು ತಂಡದ ಬ್ಯಾಟರ್‌ಗಳು ಕೇವಲ ಒಂದು ರನ್ ಗಳಿಸಿದರು. ಒಂದು ವೈಡ್ ಬಾಲ್‌ನಿಂದ ಅವರಿಗೆ ಒಂದು ರನ್ ಸಿಕ್ಕಿತು. ಪರಿಣಾಮವಾಗಿ, ತಂಡ ಕೇವಲ ಎರಡು ರನ್‌ಗಳಿಗೆ ಆಲೌಟ್ ಆಯಿತು. ಈ ಇನ್ನಿಂಗ್ಸ್‌ನಲ್ಲಿ 10 ಬ್ಯಾಟ್ಸ್‌ಮನ್‌ಗಳಲ್ಲಿ 8 ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾದರು.

 

ರಿಚ್ಮಂಡ್ ಸಿಸಿ ತಂಡವು ಇಂಗ್ಲೆಂಡ್‌ ಕ್ರಿಕೆಟ್‌ನಲ್ಲಿ ತನ್ನದೇ ಆದ ವೈಭವಪೇತ ಇತಿಹಾಸವನ್ನು ಹೊಂದಿದೆ. 1862ರಲ್ಲಿ ರಿಚ್ಮಂಡ್ ಕ್ರಿಕೆಟ್ ಕ್ಲಬ್ ಸ್ಥಾಪನೆಯಾಯಿತು. ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಆಡಂ ಗಿಲ್‌ಕ್ರಿಸ್ಟ್‌ ಈ ಕ್ರಿಕೆಟ್ ಕ್ಲಬ್‌ನ ಅಲುಮಿನಿ ಆಗಿದ್ದಾರೆ.

ಮರೆಯಲಾಗದ ಸ್ಕೋರ್ (lowest team score in cricket)

ಈ ಪ್ರದರ್ಶನ ಹಳೆಯ ಕ್ರಿಕೆಟ್ ಗಾದೆಯನ್ನು ನೆನಪಿಗೆ ತರುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ರಿಚ್ಮಂಡ್ ಸಿಸಿ ತಂಡ ಪೋಸ್ಟ್ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಫ್ಯಾನ್ಸ್‌ ಇದುವರೆಗಿನ ಅತ್ಯಂತ ಕೆಟ್ಟ ಪ್ರದರ್ಶನ ಎಂದು ಕಾಮೆಂಟ್ ಮಾಡಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಇಂತಹದ್ದು ಎಂದಿಗೂ ಸಂಭವಿಸಿಲ್ಲ. ಕಡಿಮೆ ಸ್ಕೋರ್ ಪಂದ್ಯಗಳು ಆಸಕ್ತಿದಾಯಕವಾಗಿರುತ್ತವೆ, ಆದರೆ 427 ರನ್‌ಗಳ ಗುರಿ ಬೆನ್ನಟ್ಟಿದ ತಂಡ ಕೇವಲ ಎರಡು ರನ್‌ಗಳಿಗೆ ಆಲೌಟ್ ಆದದ್ದು ಇದೇ ಮೊದಲು. ಇದಕ್ಕೂ ಮೊದಲು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಂತ ಕಡಿಮೆ ಸ್ಕೋರ್ ಮಾಡಿದ ದಾಖಲೆ ಜಿಂಬಾಬ್ವೆ ಮತ್ತು ಯುಎಸ್ಎ ಹೆಸರಿನಲ್ಲಿತ್ತು. ಜಿಂಬಾಬ್ವೆ 2004 ರ ಏಪ್ರಿಲ್‌ನಲ್ಲಿ ಶ್ರೀಲಂಕಾ ವಿರುದ್ಧ 35 ರನ್ ಗಳಿಸಿತ್ತು ಮತ್ತು 2020 ರಲ್ಲಿ ಯುಎಸ್ಎ ನೇಪಾಳ ವಿರುದ್ಧ 35 ರನ್ ಗಳಿಸಿತ್ತು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡಿಗ ಕೆ.ಗೌತಮ್‌!
ಭಾರತ ಎದುರು ಅಂಡರ್-19 ಏಷ್ಯಾಕಪ್ ಗೆದ್ದ ಪಾಕ್ ಆಟಗಾರರಿಗೆ ಪ್ರಧಾನಿ ಭಾರೀ ಬಹುಮಾನ ಘೋಷಣೆ!