
ಬೆಂಗಳೂರು(ಆ.17): ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಬೆಂಗಳೂರು ಚರಣ ಬುಧವಾರ(ಆ.17)ದಿಂದ ಆರಂಭಗೊಳ್ಳಲಿದೆ. ಸೋಮವಾರ ಮುಕ್ತಾಯಗೊಂಡ ಮೈಸೂರು ಚರಣದಲ್ಲಿ ಒಟ್ಟು 18 ಪಂದ್ಯಗಳು ನಡೆದಿದ್ದು, ಬಾಕಿ ಇರುವ 16 ಪಂದ್ಯಗಳಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
6 ತಂಡಗಳು ತಲಾ 6 ಪಂದ್ಯಗಳನ್ನು ಆಡಿದ್ದು ಬೆಂಗಳೂರು ಬ್ಲಾಸ್ಟರ್ಸ್ 4 ಗೆಲುವುಗಳೊಂದಿಗೆ 8 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮಂಗಳೂರು ಯುನೈಟೆಡ್ ಸಹ 8 ಅಂಕ ಸಂಪಾದಿಸಿದ್ದು, 2ನೇ ಸ್ಥಾನ ಪಡೆದಿದೆ. ಮೈಸೂರು, ಗುಲ್ಬರ್ಗಾ, ಹುಬ್ಬಳ್ಳಿ ತಂಡಗಳು ಕ್ರಮವಾಗಿ 3, 4 ಮತ್ತು 5ನೇ ಸ್ಥಾನ ಪಡೆದಿವೆ. 6 ಪಂದ್ಯಗಳಲ್ಲಿ ಕೇವಲ 1 ಗೆಲುವು ಕಂಡಿರುವ ಶಿವಮೊಗ್ಗ ಸ್ಟೆ್ರೖಕರ್ಸ್ ತಂಡವು ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ.
ಬುಧವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಮತ್ತು ಮಂಗಳೂರು ಯುನೈಟೆಡ್ ತಂಡಗಳು ಮುಖಾಮುಖಿಯಾಗಲಿದ್ದು, 2ನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಶಿವಮೊಗ್ಗ ಸ್ಟೆ್ರೖಕರ್ಸ್ ಸೆಣಸಲಿವೆ. ಟೂರ್ನಿಯ ಲೀಗ್ ಹಂತ ಆ.22ಕ್ಕೆ ಮುಕ್ತಾಯಗೊಳ್ಳಲಿದ್ದು, ಆ.23ರಿಂದ ಪ್ಲೇ-ಆಫ್ ಆರಂಭಗೊಳ್ಳಲಿದೆ. ಆ.26ರಂದು ಫೈನಲ್ ನಿಗದಿಯಾಗಿದೆ.
ಜಿಂಬಾಬ್ವೆ ಎದುರಿನ ಸರಣಿಗೆ ಟೀಂ ಇಂಡಿಯಾ ಅಭ್ಯಾಸ
ಹರಾರೆ: ಜಿಂಬಾಬ್ವೆ ವಿರುದ್ಧ ಗುರುವಾರ(ಆ.18)ದಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಕಠಿಣ ಅಭ್ಯಾಸ ನಡೆಸಿದೆ. ಮಂಗಳವಾರ ಭಾರತೀಯ ಆಟಗಾರರು ನೆಟ್ಸ್‌ನಲ್ಲಿ ಬೆವರು ಹರಿಸಿದರು. ನಾಯಕ ಕೆ.ಎಲ್.ರಾಹುಲ್, ಬ್ಯಾಟರ್‌ಗಳಾದ ಶಿಖರ್ ಧವನ್, ಸಂಜು ಸ್ಯಾಮ್ಸನ್, ಮೊದಲ ಬಾರಿಗೆ ತಂಡಕ್ಕೆ ಆಯ್ಕೆಯಾಗಿರುವ ರಾಹುಲ್ ತ್ರಿಪಾಠಿ, ದೀಪಕ್ ಹೂಡಾ ಹೆಚ್ಚು ಸಮಯ ನೆಟ್ಸ್‌ನಲ್ಲಿ ಕಳೆದರು. ಸರಣಿಯ 2ನೇ ಪಂದ್ಯವು ಆ.20ರಂದು ನಡೆಯಲಿದ್ದು, 3ನೇ ಹಾಗೂ ಅಂತಿಮ ಪಂದ್ಯವು ಆ.22ರಂದು ನಡೆಯಲಿದೆ. ಮೂರೂ ಪಂದ್ಯಗಳಿಗೆ ಹರಾರೆ ಆತಿಥ್ಯ ವಹಿಸಲಿದೆ.
ಭಾರತ ‘ಎ’ ತಂಡಕ್ಕೆ ಕಿವೀಸ್, ಆಸೀಸ್ ವಿರುದ್ಧ ಸರಣಿ
ನವದೆಹಲಿ: ಭಾರತ ‘ಎ’ ತಂಡ 8 ತಿಂಗಳ ಬಳಿಕ ಮೊದಲ ಸರಣಿಯನ್ನು ಆಡಲು ಸಜ್ಜಾಗಿದ್ದು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನ್ಯೂಜಿಲೆಂಡ್ ಮತ್ತು ನವೆಂಬರ್‌ನಲ್ಲಿ ಆಸ್ಪ್ರೇಲಿಯಾ ತಂಡಗಳಿಗೆ ಆತಿಥ್ಯ ವಹಿಸುವ ನಿರೀಕ್ಷೆ ಇದೆ. ಭಾರತ ‘ಎ’ ತಂಡ ಕೊನೆಯದಾಗಿ ಕಳೆದ ವರ್ಷ ನವೆಂಬರ್-ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ 3 ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡಿತ್ತು.
ಜಿಂಬಾಬ್ವೆ ಪ್ರವಾಸದಿಂದ ವಾಷಿಂಗ್ಟನ್ ಸುಂದರ್ ಔಟ್, RCB ಕ್ರಿಕೆಟಿಗನಿಗೆ ಒಲಿದ ಜಾಕ್‌ಪಾಟ್..!
ನ್ಯೂಜಿಲೆಂಡ್ ‘ಎ’ ತಂಡ ಈ ತಿಂಗಳಾಂತ್ಯದಲ್ಲಿ ಭಾರತಕ್ಕೆ ಆಗಮಿಸಲಿದ್ದು ಮೂರು 4 ದಿನಗಳ ಟೆಸ್ಟ್ ಮತ್ತು 3 ಲಿಸ್ಟ್ ‘ಎ’ ಪಂದ್ಯಗಳನ್ನು ಆಡಲಿದೆ. ಎಲ್ಲಾ ಪಂದ್ಯಗಳು ಬೆಂಗಳೂರಲ್ಲಿ ನಡೆಯುವ ಸಾಧ್ಯತೆ ಇದೆ. ವರ್ಷಾಂತ್ಯದಲ್ಲಿ ಆಸ್ಪ್ರೇಲಿಯಾ ‘ಎ’ ವಿರುದ್ಧವೂ ಸರಣಿ ಆಯೋಜಿಸಲು ಬಿಸಿಸಿಐ ಮಾತುಕತೆ ನಡೆಸುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.