ಟೀಂ ಇಂಡಿಯಾ ಕೋಚ್‌ ಮತ್ತೆ ಕನ್ನಡಿಗ ಕುಂಬ್ಳೆಗೆ ಮಣೆ ಹಾಕುತ್ತಾ ಬಿಸಿಸಿಐ..?

By Suvarna NewsFirst Published Sep 18, 2021, 4:27 PM IST
Highlights

* ಟಿ20 ವಿಶ್ವಕಪ್‌ ಬಳಿಕ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಗುತ್ತಿಗೆ ಅವಧಿ ಮುಕ್ತಾಯ

* ಮತ್ತೊಮ್ಮೆ ಅನಿಲ್‌ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆಗುವ ಸಾಧ್ಯತೆ

* ವಿವಿಎಸ್‌ ಲಕ್ಷ್ಮಣ್‌ಗೂ ಕೂಡಾ ಟೀಂ ಇಂಡಿಯಾ ಕೋಚ್‌ ಆಗುವ ಸಾಧ್ಯತೆ

ನವದೆಹಲಿ(ಸೆ.18): ಮುಂಬರುವ ಟಿ20 ವಿಶ್ವಕಪ್‌ ಬಳಿಕ ಟೀಂ ಇಂಡಿಯಾ ಮುಖ್ಯ ಕೋಚ್‌ ರವಿಶಾಸ್ತ್ರಿ ಗುತ್ತಿಗೆ ಅವಧಿ ಮುಗಿಯಲಿದ್ದು, ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಕನ್ನಡಿಗ ಅನಿಲ್ ಕುಂಬ್ಳೆ ಇಲ್ಲವೇ ವಿವಿಎಸ್ ಲಕ್ಷ್ಮಣ್‌ ಅವರಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೇಳಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಸಚಿನ್‌ ತೆಂಡುಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್‌ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯ ಶಿಫಾರಸಿನಂತೆ 2016-17ರ ಅವಧಿಯಲ್ಲಿ ಅನಿಲ್‌ ಕುಂಬ್ಳೆ ಟೀಂ ಇಂಡಿಯಾ ಪ್ರಧಾನ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಆದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್‌ ಅನಿಲ್‌ ಕುಂಬ್ಳೆ ನಡುವೆ ಹೊಂದಾಣಿಕೆ ಉಂಟಾಗದ ಹಿನ್ನಲೆಯಲ್ಲಿ 2017ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ದ ಟೀಂ ಇಂಡಿಯಾ ಮುಗ್ಗರಿಸುತ್ತಿದ್ದಂತೆಯೇ ಕುಂಬ್ಳೆ ತಮ್ಮ ಕೋಚ್ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದರು.

ರೋಹಿತ್‌ಗೆ ಉಪನಾಯಕತ್ವ ಬೇಡ: ಕೊಹ್ಲಿ ಬೇಡಿಕೆ..! ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ವಾ..?

ಇನ್ನು ಅನಿಲ್ ಕುಂಬ್ಳೆ ಅವರಂತೆಯೇ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಮೆಂಟರ್ ಆಗಿರುವ ವಿವಿಎಸ್‌ ಲಕ್ಷ್ಮಣ್‌ ಅವರಿಗೂ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ದಾದಾ ಮನವಿ ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ

ವಿರಾಟ್ ಕೊಹ್ಲಿ ಮುಂಬರುವ ಟಿ20 ವಿಶ್ವಕಪ್‌ ಬಳಿಕ ಟೀಂ ಇಂಡಿಯಾ ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಭಾರತ ಪರ ನೂರಕ್ಕೂ ಹೆಚ್ಚು ಟೆಸ್ಟ್‌ ಪಂದ್ಯಗಳನ್ನಾಡಿರುವ ಅನಿಲ್‌ ಕುಂಬ್ಳೆ ಇಲ್ಲವೇ ವಿವಿಎಸ್ ಲಕ್ಷ್ಮಣ್ ಅವರಿಗೆ ಬಿಸಿಸಿಐ ಟೀಂ ಇಂಡಿಯಾ ಕೋಚ್ ಹುದ್ದೆ ನೀಡಲು ಒಲವು ತೋರಿದೆ ಎನ್ನಲಾಗುತ್ತಿದೆ.

ಟೀಂ ಇಂಡಿಯಾ ಕೋಚ್ ಆಗಲು ಆಯ್ದ ಉತ್ತಮ ಕ್ರಿಕೆಟ್ ಹಿನ್ನೆಲೆ ಹಾಗೂ ಈ ಹಿಂದೆ ಕೋಚ್ ಅಥವಾ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇರುವವರಿಗೆ ಕೋಚ್‌ ಹುದ್ದೆಗೆ ಬಿಸಿಸಿಐ ಆಯ್ಕೆ ಮಾಡಲಿದೆ ಎನ್ನಲಾಗಿದೆ. 

click me!