Asia Cup 2023: ಉತ್ತಮ ಆರಂಭ ಪಡೆದ ಭಾರತ; ಪಂದ್ಯಕ್ಕೆ ಮಳೆರಾಯ ಅಡ್ಡಿ

Published : Sep 10, 2023, 05:01 PM ISTUpdated : Sep 10, 2023, 05:20 PM IST
Asia Cup 2023: ಉತ್ತಮ ಆರಂಭ ಪಡೆದ ಭಾರತ; ಪಂದ್ಯಕ್ಕೆ ಮಳೆರಾಯ ಅಡ್ಡಿ

ಸಾರಾಂಶ

ಇಲ್ಲಿನ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್‌ ಶತಕದ ಜತೆಯಾಟವಾಡುವ ಮೂಲಕ ಭದ್ರಬುನಾದಿ ಹಾಕಿ ಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 16.4 ಓವರ್‌ಗಳಲ್ಲಿ 121 ರನ್‌ಗಳ ಜತೆಯಾಟವಾಡಿತು. 

ಕೊಲಂಬೊ(ಸೆ.10): ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದಿದೆ. ಹೀಗಿರುವಾಗಲೇ ಪಂದ್ಯಕ್ಕೆ ಮಳೆರಾಯ ಎಂಟ್ರಿಕೊಟ್ಟಿದ್ದು, ಪಂದ್ಯ ಅರ್ಧಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ವೇಳೆ ಭಾರತ ಕ್ರಿಕೆಟ್ ತಂಡವು 24.1 ಓವರ್ ಅಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 142 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.

ಇಲ್ಲಿನ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್‌ ಶತಕದ ಜತೆಯಾಟವಾಡುವ ಮೂಲಕ ಭದ್ರಬುನಾದಿ ಹಾಕಿ ಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 16.4 ಓವರ್‌ಗಳಲ್ಲಿ 121 ರನ್‌ಗಳ ಜತೆಯಾಟವಾಡಿತು. ಏಷ್ಯಾಕಪ್ ಟೂರ್ನಿಯ ಗ್ರೂಪ್‌ ಹಂತದಲ್ಲಿ ಭಾರತದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ರನ್ ಗಳಿಸಲು ಪರದಾಡಿದ್ದರು. ಆದರೆ ಸೂಪರ್ 4 ಹಂತದ ವೇಳೆಗೆ ಸರಿಯಾಗಿ ಹೋಮ್‌ವರ್ಕ್‌ ಮಾಡಿಕೊಂಡು ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್‌ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ಪಾಕಿಸ್ತಾನ ವೇಗಿಗಳಿಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಮೊದಲ ಓವರ್‌ನಲ್ಲೇ ಶಾಹೀನ್ ಅಫ್ರಿದಿಗೆ ಸಿಕ್ಸರ್ ಚಚ್ಚುವ ಮೂಲಕ ಎಚ್ಚರಿಕೆ ರವಾನಿಸಿದ್ದ ರೋಹಿತ್ ಶರ್ಮಾ, 49 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 4 ಸೊಗಸಾದ ಸಿಕ್ಸರ್‌ಗಳ ನೆರವಿನಿಂದ 56 ರನ್‌ ಬಾರಿಸಿ ಶಾದಾಬ್ ಖಾನ್ ಬೌಲಿಂಗ್‌ನಲ್ಲಿ ಫಾಹೀಮ್ ಅಶ್ರಫ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಇನ್ನು ಮತ್ತೊಂದು ತುದಿಯಲ್ಲಿ ನಾಯಕನಿಗೆ ಉತ್ತಮ ಸಾಥ್ ನೀಡಿದ ಶುಭ್‌ಮನ್ ಗಿಲ್ ಕೂಡಾ ಆಕರ್ಷಕ ಅರ್ಧಶತಕ ಸಿಡಿಸಿ ಲಯ ಕಂಡುವಲ್ಲಿ ಯಶಸ್ವಿಯಾದರು. ಗಿಲ್‌, 52 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ 58 ರನ ಸಿಡಿಸಿ ಶಾಹೀನ್‌ ಅಫ್ರಿದಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಟೀಂ ಇಂಡಿಯಾ 123 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು.

ನಾಲಿಗೆಯಿಂದ ವಿರಾಟ್ ಕೊಹ್ಲಿ ಚಿತ್ರ ಬರೆದ ಅಪ್ಪಟ ಅಭಿಮಾನಿ..! ವಿಡಿಯೋ ವೈರಲ್

ಕೊಹ್ಲಿ-ರಾಹುಲ್ ಮೇಲೆ ಕಣ್ಣು: ಇನ್ನು ಟೀಂ ಇಂಡಿಯಾ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ ಬಳಿಕ ಇದೀಗ ಕನ್ನಡಿಗ ಕೆ ಎಲ್ ರಾಹುಲ್ ಹಾಗೂ ರನ್ ಮಷೀನ್ ವಿರಾಟ್ ಕೊಹ್ಲಿ ಜತೆಯಾಗಿದ್ದಾರೆ. 3ನೇ ವಿಕೆಟ್‌ಗೆ ಈ ಜೋಡಿ 38 ಎಸೆತಗಳನ್ನು ಎದುರಿಸಿ 24 ರನ್‌ ಬಾರಿಸಿದೆ. 2023ರ ಐಪಿಎಲ್‌ ವೇಳೆ ಗಾಯಗೊಂಡು ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ರಾಹುಲ್, ಇದೀಗ ಏಷ್ಯಾಕಪ್ ಟೂರ್ನಿಯ ಮೂಲಕ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ರಾಹುಲ್ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಿಗಿದೆ. ಸದ್ಯ ರಾಹುಲ್ 28 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 17 ರನ್ ಗಳಿಸಿದ್ದಾರೆ. ಇನ್ನೊಂದೆಡೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಕೊಲಂಬೊದಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಅದರಲ್ಲೂ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಕೊಹ್ಲಿ ಆಡಿದ ಕೊನೆಯ 3 ಪಂದ್ಯಗಳಲ್ಲೂ ಸತತ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇದೀಗ ಪಾಕ್ ಎದುರು ವಿರಾಟ್ ಕೊಹ್ಲಿ ದೊಡ್ಡ ಮೊತ್ತ ಕಲೆಹಾಕಲು ಎದುರು ನೋಡುತ್ತಿದ್ದಾರೆ.

Asia Cup 2023: ಭಾರತ ಎದುರು ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ

ಮಳೆ ಅಡ್ಡಿಯಾದ್ರೆ ಪಂದ್ಯ ನಾಳೆಗೆ

ಭಾರತ-ಪಾಕಿಸ್ತಾನ ಪಂದ್ಯಕ್ಕೆ ಸೋಮವಾರ ಮೀಸಲು ದಿನ ನಿಗದಿಪಡಿಸಲಾಗಿದೆ. ಭಾನುವಾರ ಮಳೆಯಿಂದಾಗಿ ಪಂದ್ಯ ಮುಗಿಯದಿದ್ದರೆ, ಅಂದರೆ ಮೊದಲ ಇನ್ನಿಂಗ್ಸ್‌ ಮುಗಿದು 2ನೇ ಇನ್ನಿಂಗ್ಸಲ್ಲಿ ಕನಿಷ್ಠ 20 ಓವರ್‌ ಆಟವೂ ಸಾಧ್ಯವಾಗದೆ ಇದ್ದರೆ ಆಗ ಸೋಮವಾರ ಪಂದ್ಯವನ್ನು ಮುಂದುವರಿಸಲಾಗುತ್ತದೆ.

ತಂಡಗಳು ಹೀಗಿವೆ ನೋಡಿ:

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್‌, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ ಎಲ್ ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್, ಕುಲ್ದೀಪ್‌ ಯಾದವ್, ಮೊಹಮ್ಮದ್ ಸಿರಾಜ್‌, ಜಸ್ಪ್ರೀತ್ ಬುಮ್ರಾ.

ಪಾಕಿಸ್ತಾನ: ಫಖರ್‌ ಜಮಾನ್, ಇಮಾಮ್‌ ಉಲ್ ಹಕ್‌, ಬಾಬರ್‌ ಅಜಂ(ನಾಯಕ), ಮೊಹಮ್ಮದ್ ರಿಜ್ವಾನ್‌, ಅಘಾ ಸಲ್ಮಾನ್‌, ಇಫ್ತಿಕಾರ್‌ ಅಹಮ್ಮದ್, ಶದಾಬ್‌ ಖಾನ್, ಮೊಹಮ್ಮದ್ ನವಾಜ್‌, ಶಾಹೀನ್‌ ಅಫ್ರಿದಿ, ನಸೀಂ ಶಾ, ಹ್ಯಾರಿಸ್ ರೌಫ್‌.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!
ತಲೆಗೆ 20 ಹೊಲಿಗೆ, ಭುಜಕ್ಕೆ ಬಲವಾದ ಪೆಟ್ಟು! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಕೋಚ್‌ ಮೇಲೆ ಆಟಗಾರರ ಮಾರಣಾಂತಿಕ ಹಲ್ಲೆ!