Asia Cup 2023: ಇಂದು ಮತ್ತೆ ಭಾರತ vs ಪಾಕ್ ಹೈವೋಲ್ಟೇಜ್‌ ಫೈಟ್‌..!

By Naveen Kodase  |  First Published Sep 10, 2023, 12:29 PM IST

ಭಾರತ-ಪಾಕಿಸ್ತಾನ ಪಂದ್ಯಕ್ಕೆ ಸೋಮವಾರ ಮೀಸಲು ದಿನ ನಿಗದಿಪಡಿಸಲಾಗಿದೆ. ಭಾನುವಾರ ಮಳೆಯಿಂದಾಗಿ ಪಂದ್ಯ ಮುಗಿಯದಿದ್ದರೆ, ಅಂದರೆ ಮೊದಲ ಇನ್ನಿಂಗ್ಸ್‌ ಮುಗಿದು 2ನೇ ಇನ್ನಿಂಗ್ಸಲ್ಲಿ ಕನಿಷ್ಠ 20 ಓವರ್‌ ಆಟವೂ ಸಾಧ್ಯವಾಗದೆ ಇದ್ದರೆ ಆಗ ಸೋಮವಾರ ಪಂದ್ಯವನ್ನು ಮುಂದುವರಿಸಲಾಗುತ್ತದೆ.
 


ಕೊಲಂಬೊ(ಸೆ.10): ಕಳೆದ ವಾರ ತಮ್ಮ ಕಾತರ, ಕುತೂಹಲಕ್ಕೆ ತಣ್ಣೀರೆರಚಿದ್ದ ಮಳೆರಾಯ ಈ ವಾರ ಬಿಡುವು ನೀಡಲಿ ಎಂದು ವಿಶ್ವದೆಲ್ಲೆಡೆಯ ಕ್ರೀಡಾಭಿಮಾನಿಗಳು ಬೇಡುತ್ತಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್‌ ಸೂಪರ್‌-4 ಹಂತದ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದ್ದು, ಮಳೆಕಾಟ ಎದುರಾಗದಿದ್ದರೆ ಭಾನುವಾರ ಕೊಲಂಬೊದಲ್ಲಿ ಬದ್ಧವೈರಿಗಳ ನಡುವೆ ರೋಚಕ ಕಾದಾಟ ಏರ್ಪಡಲಿದೆ. ಆದರೆ ಕೊಲಂಬೊದಲ್ಲಿ ವಾರಾಂತ್ಯದಲ್ಲಿ ಮಳೆ ಮುನ್ಸೂಚನೆ ಇದ್ದು, ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇದೆ.

ಇತ್ತಂಡಗಳ ಕಳೆದ ವಾರದ ಗುಂಪು ಹಂತದ ಪಂದ್ಯ ಮಳೆಗೆ ಆಹುತಿಯಾಗಿತ್ತು. ಹೀಗಾಗಿ ಈ ಪಂದ್ಯ ಮತ್ತಷ್ಟು ಕುತೂಹಲ ಕೆರಳಿಸಿದೆ. ಎರಡೂ ತಂಡಗಳೂ ಫೈನಲ್‌ ಹಾದಿಯಲ್ಲಿ ಅತ್ಯಗತ್ಯ ಗೆಲುವಿನ ನಿರೀಕ್ಷೆಯಲ್ಲಿದ್ದು, ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ಪಾಕ್‌ ಈಗಾಗಲೇ ಸೂಪರ್‌-4ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದಿದ್ದು, ಮತ್ತೊಂದು ಗೆಲುವು ತಂಡವನ್ನು ಫೈನಲ್‌ನತ್ತ ಸಾಗಿಸಲಿದೆ.

Tap to resize

Latest Videos

ಈ MNC ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾಳೆ ದಾದಾ ಮಗಳು ಸನಾ ಗಂಗೂಲಿ..! ಒಂದು ತಿಂಗಳ ಸಂಬಳ ಎಷ್ಟು ಗೊತ್ತಾ?

ಈ ಪಂದ್ಯ ಮತ್ತೊಮ್ಮೆ ಭಾರತದ ಬ್ಯಾಟರ್‌ಗಳು ಹಾಗೂ ಪಾಕಿಸ್ತಾನ ವೇಗಿಗಳ ನಡುವಿನ ಹಣಾಹಣಿಗೆ ಸಾಕ್ಷಿಯಾಗುವ ಸಾಧ್ಯತೆ ಹೆಚ್ಚು. ಕಳೆದ ಪಂದ್ಯದಲ್ಲಿ ಭಾರತದ ಆರಂಭಿಕರು ಪಾಕ್‌ ವೇಗಿಗಳ ಮುಂದೆ ಕಳಪೆ ಆಟವಾಡಿದ್ದು, ಹಾರ್ದಿಕ್‌ ಪಾಂಡ್ಯ, ಇಶಾನ್‌ ಕಿಶನ್‌ರ ಹೋರಾಟದಿಂದಾಗಿ ಕಡಿಮೆ ಮೊತ್ತಕ್ಕೆ ಕುಸಿಯುವುದರಿಂದ ಪಾರಾಗಿತ್ತು. ಹೀಗಾಗಿ ಈ ಬಾರಿ ಪಾಕ್‌ನ ಶಾಹೀನ್‌ ಅಫ್ರಿದಿ, ನಸೀಂ ಶಾ, ಹ್ಯಾರಿಸ್‌ ರೌಫ್‌ ಸವಾಲನ್ನು ಮೆಟ್ಟಿನಿಂತು ಉತ್ತಮ ಆಟವಾಡಬೇಕಾದ ಜವಾಬ್ದಾರಿ ರೋಹಿತ್‌ ಶರ್ಮಾ, ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ ಮೇಲಿದೆ.

ರಾಹುಲ್‌-ಇಶಾನ್‌?: ತಂಡದ ಮೊದಲ ಆಯ್ಕೆಯ ವಿಕೆಟ್ ಕೀಪರ್‌ ಬ್ಯಾಟರ್‌ ಆಗಿರುವ ಕೆ.ಎಲ್‌.ರಾಹುಲ್‌ ಈ ಪಂದ್ಯಕ್ಕೆ ಆಯ್ಕೆಗೆ ಲಭ್ಯವಿರಲಿದ್ದಾರೆ. ಆದರೆ ಸದ್ಯಕ್ಕೆ ತಂಡದಲ್ಲಿ ಸ್ಥಾನ ಸಿಗುವುದ ಅಷ್ಟು ಸುಲಭವಲ್ಲ. ಇಶಾನ್‌ ಕಿಶನ್‌ ಸತತ 4 ಅರ್ಧಶತಕ ಬಾರಿಸಿದ್ದು, ಪಾಕ್‌ ವಿರುದ್ಧ ನಿರ್ಣಾಯಕ ಹಂತದಲ್ಲಿ 82 ರನ್‌ ಚಚ್ಚಿದ್ದರು. ಹೀಗಾಗಿ ಇಶಾನ್‌ರನ್ನು ತಂಡದಲ್ಲಿ ಉಳಿಸುವುದೋ ಅಥವಾ ರಾಹುಲ್‌ಗೆ ಅವಕಾಶ ನೀಡುವುದೋ ಎಂಬ ಗೊಂದಲ ಆಯ್ಕೆಗಾರರಲ್ಲಿದೆ.

ಏಷ್ಯಾಕಪ್ ಬಳಿಕ ಎರಡನೇ ಸಲ ಮದುವೆಗೆ ಮುಂದಾದ ಶಾಹೀನ್ ಅಫ್ರಿದಿ..! ಯಾಕೆ ಹೀಗೆ?

ಬುಮ್ರಾ ವಾಪಸ್‌: ವೈಯಕ್ತಿಕ ಕಾರಣದಿಂದ ತವರಿಗೆ ಮರಳಿದ್ದ ಬುಮ್ರಾ ಈ ಪಂದ್ಯದಲ್ಲಿ ಆಡಲಿದ್ದಾರೆ. ಏಕದಿನ ತಂಡಕ್ಕೆ ವಾಪಸಾದ ಬಳಿಕ ಬುಮ್ರಾ ಇನ್ನಷ್ಟೇ ಬೌಲ್‌ ಮಾಡಬೇಕಿದ್ದು, ಹೆಚ್ಚಿನ ನಿರೀಕ್ಷೆ ಇದೆ. ಮೊಹಮದ್‌ ಸಿರಾಜ್‌ ಎಷ್ಟು ಪರಿಣಾಮಕಾರಿಯಾಗಬಲ್ಲರು ಎಂಬ ಕುತೂಹಲವಿದ್ದು, ಕೆಳ ಕ್ರಮಾಂಕವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಮೊಹಮದ್‌ ಶಮಿ ಬದಲು ಮತ್ತೊಮ್ಮೆ ಶಾರ್ದೂಲ್‌ ಠಾಕೂರ್‌ರನ್ನು ಆಡಿಸುವ ಸಾಧ್ಯತೆಯಿದೆ,

ಆಜಂ ಮೇಲೆ ನಿರೀಕ್ಷೆ: ಪಾಕಿಸ್ತಾನ ಹೆಚ್ಚಾಗಿ ನಾಯಕ ಬಾಬರ್‌ ಆಜಂರನ್ನೇ ನೆಚ್ಚಿಕೊಂಡಿದ್ದು, ಇಮಾಮ್‌ ಉಲ್‌-ಹಕ್‌, ಫಖರ್ ಜಮಾನ್‌ ಮೇಲೆ ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವ ಹೊಣೆಗಾರಿಕೆ ಇದೆ. ಮೊಹಮದ್‌ ರಿಜ್ವಾನ್‌ ಜೊತೆ ಇಫ್ತಿಕಾರ್‌ ಅಹ್ಮದ್‌ ಹಾಗೂ ಶದಾಬ್‌ ಖಾನ್‌ ಮಧ್ಯಮ ಕ್ರಮಾಂಕದಲ್ಲಿ ಪಾಕ್‌ಗೆ ನೆರವಾಗಬಹುದು.

ಒಟ್ಟು ಮುಖಾಮುಖಿ: 133

ಭಾರತ: 55

ಪಾಕಿಸ್ತಾನ: 73

ರದ್ದು: 05

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌(ನಾಯಕ), ಶುಭ್‌ಮನ್‌ ಗಿಲ್‌, ಕೊಹ್ಲಿ, ಶ್ರೇಯಸ್‌, ಕಿಶನ್‌/ರಾಹುಲ್‌, ಹಾರ್ದಿಕ್‌, ಜಡೇಜಾ, ಶಾರ್ದೂಲ್‌, ಕುಲ್ದೀಪ್‌, ಸಿರಾಜ್‌, ಬೂಮ್ರಾ.

ಪಾಕಿಸ್ತಾನ: ಫಖರ್‌, ಇಮಾಮ್‌, ಬಾಬರ್‌(ನಾಯಕ), ರಿಜ್ವಾನ್‌, ಅಘಾ ಸಲ್ಮಾನ್‌, ಇಫ್ತಿಕಾರ್‌, ಶದಾಬ್‌, ನವಾಜ್‌, ಶಾಹೀನ್‌, ನಸೀಂ, ರೌಫ್‌.

ಪಂದ್ಯ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌

ಪಿಚ್‌ ರಿಪೋರ್ಟ್‌

ಕೊಲಂಬೊ ಪಿಚ್‌ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಹೆಚ್ಚು ನೆರವಾದ ಉದಾಹರಣೆ ಇದೆ. ಇಲ್ಲಿ ನಡೆದ ಕಳೆದ 7 ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದಿದೆ. ಇಲ್ಲಿ ವೇಗಿಗಳು ಹೆಚ್ಚಿನ ನೆರವು ಪಡೆಯುವ ಸಾಧ್ಯತೆಯಿದ್ದು, ಬ್ಯಾಟರ್‌ಗಳು ರನ್‌ ಗಳಿಸಲು ತುಸು ಪರದಾಟ ನಡೆಸಬೇಕಾಗಬಹುದು.

ಮಳೆ ಅಡ್ಡಿಪಡಿಸಿದ್ರೆ ಪಂದ್ಯ ನಾಳೆಗೆ

ಭಾರತ-ಪಾಕಿಸ್ತಾನ ಪಂದ್ಯಕ್ಕೆ ಸೋಮವಾರ ಮೀಸಲು ದಿನ ನಿಗದಿಪಡಿಸಲಾಗಿದೆ. ಭಾನುವಾರ ಮಳೆಯಿಂದಾಗಿ ಪಂದ್ಯ ಮುಗಿಯದಿದ್ದರೆ, ಅಂದರೆ ಮೊದಲ ಇನ್ನಿಂಗ್ಸ್‌ ಮುಗಿದು 2ನೇ ಇನ್ನಿಂಗ್ಸಲ್ಲಿ ಕನಿಷ್ಠ 20 ಓವರ್‌ ಆಟವೂ ಸಾಧ್ಯವಾಗದೆ ಇದ್ದರೆ ಆಗ ಸೋಮವಾರ ಪಂದ್ಯವನ್ನು ಮುಂದುವರಿಸಲಾಗುತ್ತದೆ.
 

click me!