
ಕೊಲಂಬೊ(ಸೆ.12): ಬದ್ದ ಎದುರಾಳಿ ಪಾಕಿಸ್ತಾನ ಎದುರು ಸೋಮವಾರ ಬೃಹತ್ ಮೊತ್ತ ಕಲೆಹಾಕಿದ್ದ ಟೀಂ ಇಂಡಿಯಾ, ಇದೀಗ ಇದೇ ಮೈದಾನದಲ್ಲಿ ಮಂಗಳವಾರವಾದ ಇಂದು 200 ರನ್ ಗಳಿಸಲು ಪರದಾಡುತ್ತಿದೆ. ಹೀಗಿರುವಾಗಲೇ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗಿದ್ದು, ಪಂದ್ಯ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಸದ್ಯ 47 ಓವರ್ ಅಂತ್ಯದ ವೇಳೆಗೆ ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡು 197 ರನ್ ಬಾರಿಸಿದ್ದು, ಅಕ್ಷರ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ಕ್ರೀಸ್‌ನಲ್ಲಿದ್ದಾರೆ. ನಾಯಕ ರೋಹಿತ್ ಶರ್ಮಾ(53) ರನ್ ಬಾರಿಸಿದ್ದು ಬಿಟ್ಟರೇ, ಉಳಿದ್ಯಾವ ಬ್ಯಾಟರ್‌ಗಳು ಕೂಡಾ ಕನಿಷ್ಠ 40 ರನ್ ಗಳಿಸಲು ಸಾಧ್ಯವಾಗಲಿಲ್ಲ. ಶ್ರೀಲಂಕಾ ಪರ ವೆಲ್ಲಾಲಗೆ 40 ರನ್ ನೀಡಿ 5 ವಿಕೆಟ್ ಪಡೆದರೆ, ಮತ್ತೋರ್ವ ಹಂಗಾಮಿ ಸ್ಪಿನ್ನರ್ ಚರಿತ್ ಅಸಲಂಕಾ 14 ರನ್ ನೀಡಿ 4 ಬಲಿ ಪಡೆದಿದ್ದಾರೆ.
ಇಲ್ಲಿನ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನವನ್ನು ತೆಗೆದುಕೊಂಡರು. ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ 11.1 ಓವರ್‌ಗಳಲ್ಲಿ 80 ರನ್‌ಗಳ ಜತೆಯಾಟವಾಡುವ ಮೂಲಕ ಎಂದಿನಂತೆ ಮತ್ತೊಮ್ಮೆ ಉತ್ತಮ ಆರಂಭ ಒದಗಿಸಿಕೊಟ್ಟರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಗಿಲ್, ಲಂಕಾ ಎದುರು 25 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 19 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು
ಮ್ಯಾಜಿಕ್ ಮಾಡಿದ ವೆಲ್ಲಾಲಗೆ: ಪಾಕಿಸ್ತಾನ ಎದುರು ಇದೇ ಮೈದಾನದಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳು ಅನಾಯಾಸವಾಗಿ 350+ ರನ್ ಬಾರಿಸಲು ಯಶಸ್ವಿಯಾಗಿದ್ದರು. ಇಂದು ಕೂಡಾ ಭಾರತ ಪಡೆ ಆರಂಭ ನೋಡಿ ಭಾರತ ಮತ್ತೊಮ್ಮೆ ದೊಡ್ಡ ಮೊತ್ತ ಕಲೆಹಾಕಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಭಾರತದ ಕನಸಿಗೆ ತಣ್ಣೀರೆರಚುವಲ್ಲಿ ಲಂಕಾ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಹಾಗೂ ಚರಿತ್ ಅಸಲಂಕಾ ಯಶಸ್ವಿಯಾದರು. ಅದರಲ್ಲೂ ಒಂದು ತುದಿಯಲ್ಲಿ ಶಿಸ್ತುಬದ್ಧ ದಾಳಿ ನಡೆಸಿದ ವೆಲ್ಲಾಲಗೆ 10 ಓವರ್ ಬೌಲಿಂಗ್ ಮಾಡಿ ಒಂದು ಮೇಡನ್ ಓವರ್ ಸಹಿತ ಕೇವಲ 40 ರನ್ ನೀಡಿ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ವೆಲ್ಲಾಲಗೆ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಕಳೆದ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದ್ದ ಕೆ ಎಲ್ ರಾಹುಲ್ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡಾ ವೆಲ್ಲಾಲಗೆ ಮುಂದೆ ನಿರುತ್ತರರಾದರು.
ದಾಖಲೆ ಬರೆದ ರೋಹಿತ್ ಶರ್ಮಾ:
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮತ್ತೊಮ್ಮೆ ನಾಯಕನ ಆಟ ಆಡುವಲ್ಲಿ ಯಶಸ್ವಿಯಾದರು. ಈ ಪಂದ್ಯದಲ್ಲಿ ಹಿಟ್‌ಮ್ಯಾನ್ ಮತ್ತೊಂದು ಸೊಗಸಾದ ಅರ್ಧಶತಕ ಸಿಡಿಸುವ ಮೂಲಕ ಹ್ಯಾಟ್ರಿಕ್ ಫಿಫ್ಟಿ ಬಾರಿಸಿದ ಸಾಧನೆ ಮಾಡಿದರು. ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ, ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್(194 ರನ್), ಏಷ್ಯಾಕಪ್ ಟೂರ್ನಿಯಲ್ಲಿ 10 ಬಾರಿ 50+ ರನ್ ಬಾರಿಸಿದ ಮೊದಲ ಬ್ಯಾಟರ್, ಎರಡನೇ ಅತಿವೇಗವಾಗಿ 10 ಸಾವಿರ ರನ್ ಪೂರೈಸಿದ ಬ್ಯಾಟರ್ ಸೇರಿದಂತೆ ಹಲವು ದಾಖಲೆಗಳನ್ನು ನಿರ್ಮಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.