Ashes 2021: ವಾರ್ನರ್, ಲಬುಶೇನ್ ಅಬ್ಬರ, ಬೃಹತ್ ಮೊತ್ತದತ್ತ ಆಸೀಸ್‌..!

By Suvarna NewsFirst Published Dec 16, 2021, 6:31 PM IST
Highlights

* ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಆರಂಭ ಪಡೆದ ಆಸ್ಟ್ರೇಲಿಯಾ

* ಕೇವಲ 5 ರನ್‌ಗಳಿಂದ ಶತಕ ವಂಚಿತರಾದ ಡೇವಿಡ್ ವಾರ್ನರ್

* ಅಡಿಲೇಡ್ ಟೆಸ್ಟ್‌ನ ಮೊದಲ ದಿನದಾಟದಂತ್ಯಕ್ಕೆ ಅಸ್ಟ್ರೇಲಿಯಾ 221/2

ಅಡಿಲೇಡ್‌(ಡಿ.16): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ನಡುವಿನ ಆ್ಯಷಸ್ ಟೆಸ್ಟ್ ಸರಣಿಯ (Ashes Test Series) ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು ಭರ್ಜರಿ ಆರಂಭವನ್ನು ಪಡೆದಿದೆ. ಮೊದಲ ದಿನದಾಟದಂತ್ಯದ ವೇಳೆಗೆ ಆಸ್ಟ್ರೇಲಿಯಾ ತಂಡವು 2 ವಿಕೆಟ್‌ ಕಳೆದುಕೊಂಡು 221 ರನ್‌ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಆರಂಭಿಕ ಬ್ಯಾಟರ್‌ ಡೇವಿಡ್ ವಾರ್ನರ್ (David Warner) ಕೇವಲ 5 ರನ್‌ಗಳಿಂದ ಶತಕ ವಂಚಿತರಾದರೇ, ಮತ್ತೋರ್ವ ಬ್ಯಾಟರ್ ಮಾರ್ನಸ್ ಲಬುಶೇನ್ (Marnus Labuschagne) 95 ರನ್‌ ಬಾರಿಸಿ ಶತಕದ ಹೊಸ್ತಿಲಲ್ಲಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.  

ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯಕ್ಕೆ ಅಡಿಲೇಡ್ (Adelaide Test) ಮೈದಾನ ಆತಿಥ್ಯವನ್ನು ವಹಿಸಿದೆ. ಪಿಂಕ್‌ ಬಾಲ್ ಟೆಸ್ಟ್ (Pink Ball Test) ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ (Steve Smith) ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆಸೀಸ್ ಟೆಸ್ಟ್ ತಂಡದ ಹಂಗಾಗಿ ನಾಯಕ ಪ್ಯಾಟ್ ಕಮಿನ್ಸ್‌ (Pat Cummins) ಕೋವಿಡ್‌ ಪಾಸಿಟಿವ್ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ, ಅವರು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಹೀಗಾಗಿ ಸ್ಟೀವ್ ಸ್ಮಿತ್ 2018ರ ಬಳಿಕ ಮತ್ತೊಮ್ಮೆ ಆಸ್ಟ್ರೇಲಿಯಾ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ.

ಆಸ್ಟ್ರೇಲಿಯಾ ಪರ ಇನಿಂಗ್ಸ್‌ ಆರಂಭಿಸಿದ ಮಾರ್ಕಸ್ ಹ್ಯಾರಿಸ್ ಹಾಗೂ ಡೇವಿಡ್ ವಾರ್ನರ್ ಜೋಡಿಯನ್ನು ಆರಂಭದಲ್ಲೇ ಬೇರ್ಪಡಿಸುವಲ್ಲಿ ಇಂಗ್ಲೆಂಡ್ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ (Stuart Broad) ಯಶಸ್ವಿಯಾದರು. ಮಾರ್ಕಸ್‌ ಹ್ಯಾರಿಸ್ ಕೇವಲ 3 ರನ್ ಬಾರಿಸಿ ಜೋಸ್ ಬಟ್ಲರ್ (Jos Buttler) ಹಿಡಿದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್ ಸೇರಿದರು. ಈ ವೇಳೆ ಆಸ್ಟ್ರೇಲಿಯಾ ಕೇವಲ 4 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 

ವಾರ್ನರ್‌-ಲಬುಶೇನ್ ಜುಗಲ್ಬಂದಿ: ಹೌದು, ಆರಂಭದಲ್ಲೇ ಮಾರ್ಕಸ್ ಹ್ಯಾರಿಸ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾ ತಂಡಕ್ಕೆ ಎರಡನೇ ವಿಕೆಟ್‌ಗೆ ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಬುಶೇನ್ ಜೋಡಿ ಬರೋಬ್ಬರಿ 172 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ ಇಂಗ್ಲೆಂಡ್ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಗಾಬಾ ಟೆಸ್ಟ್ (Gabba Test) ಪಂದ್ಯದಲ್ಲಿ 94 ರನ್ ಬಾರಿಸಿ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದ ವಾರ್ನರ್, ಇದೀಗ ಅಡಿಲೇಡ್ ಟೆಸ್ಟ್ ಪಂದ್ಯದಲ್ಲೂ ಶತಕದ ಹೊಸ್ತಿಲಲ್ಲಿ ಎಡವಿದರು. ವಾರ್ನರ್ 167 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ 95 ರನ್‌ ಬಾರಿಸಿ ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಸ್ಟುವರ್ಟ್ ಬ್ರಾಡ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಈ ಮೂಲಕ 25ನೇ ಟೆಸ್ಟ್ ಶತಕ ಬಾರಿಸುವ ವಾರ್ನರ್ ಅಸೆ ಮತ್ತೊಮ್ಮೆ ಭಗ್ನವಾಯಿತು.

That's stumps!

Tough day for England, with fifties from Warner and Labuschagne putting Australia in a good position 👏

Watch the live on https://t.co/CPDKNxoJ9v (in select regions) 📺 | pic.twitter.com/e3f7YsHlZa

— ICC (@ICC)

Ashes 2021: ಅಡಿಲೇಡ್ ಟೆಸ್ಟ್‌ನಿಂದ ಹೊರಬಿದ್ದ ಪ್ಯಾಟ್ ಕಮಿನ್ಸ್‌, ಸ್ಟೀವ್ ಸ್ಮಿತ್‌ಗೆ ನಾಯಕ ಪಟ್ಟ..!

ಶತಕದ ಹೊಸ್ತಿಲಲ್ಲಿ ಲಬುಶೇನ್: ಗಾಬಾ ಟೆಸ್ಟ್ ಪಂದ್ಯದಲ್ಲಿ 74 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿದ್ದ ಲಬುಶೇನ್, ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಲಬುಶೇನ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ್ದು, 275 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 95 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನು ಮತ್ತೊಂದು ತುದಿಯಲ್ಲಿ ಸ್ಟೀವ್ ಸ್ಮಿತ್ 18 ರನ್ ಬಾರಿಸಿ ಅಜೇಯರಾಗುಳಿದಿದ್ದಾರೆ.

ಇಂಗ್ಲೆಂಡ್ ತಂಡವು ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್‌ಸನ್‌, ಕ್ರಿಸ್ ವೋಕ್ಸ್ ಸೇರಿದಂತೆ ಆರು ಬೌಲರ್‌ಗಳು ದಾಳಿ ನಡೆಸಿದರೂ ಹೆಚ್ಚಿನ ಯಶಸ್ಸು ದಕ್ಕಲಿಲ್ಲ. ಬ್ರಾಡ್ ಹಾಗೂ ಬೆನ್ ಸ್ಟೋಕ್ಸ್ ತಲಾ ಒಂದು ವಿಕೆಟ್ ಗಳಿಸಲಷ್ಟೇ ಶಕ್ತರಾದರು.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ: 221/2
ಡೇವಿಡ್ ವಾರ್ನರ್: 95
ಮಾರ್ನಸ್ ಲಬುಶೇನ್: 95*

ಸ್ಟುವರ್ಟ್ ಬ್ರಾಡ್: 34/1
(* ಮೊದಲ ದಿನದಾಟ ಮುಕ್ತಾಯದ ವೇಳೆಗೆ)

click me!